Ragging - ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗೆ ರ್‍ಯಾಗಿಂಗ್; ಪೋಷಕರ ಆಕ್ರೋಶ

ಚಾಮರಾಜನಗರದ ಮೆಡಿಕಲ್ ಕಾಲೇಜಿನ ಹಾಸ್ಟೆಲ್​ನಲ್ಲಿ ರ್‍ಯಾಗಿಂಗ್ ನಡೆಯುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ತುಮಕೂರು ಮೂಲಕದ ವಿದ್ಯಾರ್ಥಿಯೊಬ್ಬನ ಪೋಷಕರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಾಮರಾಜನಗರ: ರ್‍ಯಾಗಿಂಗ್ ಪಿಡುಗು ಗಡಿ ಜಿಲ್ಲೆ ಚಾಮರಾಜನಗರಕ್ಕೂ ಕಾಲಿಟ್ಟಿದೆ. ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ರ್ಯಾಗಿಂಗ್ ನಡೆದಿರುವುದು ಬೆಳಕಿಗೆ ಬಂದಿದೆ. ಮದ್ಯಪಾನ ಮಾಡಿದ್ದ ನಾಲ್ಕೈದು ಮಂದಿ ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ಕಿರಿಯ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸುವುದು, ತಾವು ಹೇಳಿದಂತೆ ಡ್ಯಾನ್ಸ್‌ ಮಾಡಿಸುವುದು, ರೇಗಿಸುವುದು, ತಮ್ಮ ಮಾತು ಕೇಳದಿದ್ದರೆ ಕಪಾಳಕ್ಕೆ ಹೊಡೆಯುವುದು  ಸೇರಿದಂತೆ  ನಾನಾ ರೀತಿಯಲ್ಲಿ ರ್‍ಯಾಗಿಂಗ್ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ತುಮಕೂರು ಮೂಲದ ವಿದ್ಯಾರ್ಥಿಗೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಹಿರಿಯ ವಿದ್ಯಾರ್ಥಿಗಳು ಹೀಗೆ ರ್‍ಯಾಗಿಂಗ್ ಮಾಡಿದ್ದು ನೊಂದ ವಿದ್ಯಾರ್ಥಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ತನಗೆ ಕೆಲವು ಹಿರಿಯ ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸುತ್ತಿದೆ, ಇಲ್ಲಿ ಓದಲು ಸಾಧ್ಯವಾಗುತ್ತಿಲ್ಲ, ಕಾಲೇಜು ಬಿಟ್ಟು ವಾಪಸ್ ಬರುತ್ತೇನೆ ಎಂದು ಪೋಷಕರ ಬಳಿ ತನ್ನ ಗೋಳು ತೋಡಿಕೊಂಡಿದ್ದಾನೆ. ತಕ್ಷಣ ತುಮಕೂರಿನಿಂದ ಚಾಮರಾಜನಗರಕ್ಕೆ  ಹೊರಟು ಬಂದ ವಿದ್ಯಾರ್ಥಿಯ ಪೋಷಕರು ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: Satish Jarkiholi - ಬೆಳಗಾವಿ ಲೋಕಸಭಾ ಉಪಚುನಾವಣೆ- ಅಖಾಡಕ್ಕೆ ಸತೀಶ್ ಜಾರಕಿಹೊಳಿ ಎಂಟ್ರಿ

ಈ ಹಿನ್ನೆಲೆಯಲ್ಲಿ ಚಾಮರಾಜನಗರ ಗ್ರಾಮಾಂತರ ಠಾಣೆಯ ಪೊಲೀಸರು ಭಾನುವಾರ ರಾತ್ರಿ ರ್‍ಯಾಗಿಂಗ್ ಮಾಡುತ್ತಿದ್ದರು ಎನ್ನಲಾದ ಹಿರಿಯ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡು ಉಡಿಗಾಲ ಉಪಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ನಂತರ ಈ ವಿದ್ಯಾರ್ಥಿಗಳ ವಿರುದ್ದ ಯಾವುದೇ ಪ್ರಕರಣ ದಾಖಲಿಸದೆ, ಅವರಿಂದ ತಪ್ಪೊಪ್ಪಿಗೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಈ ಬಗ್ಗೆ ನ್ಯೂಸ್ 18 ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ಮೆಡಿಕಲ್ ಕಾಲೇಜಿನ ಡೀನ್ ಡಾ. ಸಂಜೀವ್, ರ್ಯಾಗಿಂಗ್ ಬಗ್ಗೆ ಯಾರಿಂದಲೂ ಯಾವ ದೂರು ಬಂದಿಲ್ಲ. ರ್‍ಯಾಗಿಂಗ್ ಸಮಿತಿಗು ಸಹ ಯಾರೂ ದೂರು ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಪೊಲೀಸರು ಕೆಲವು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿದ್ದು ನನಗೆ ಗೊತ್ತಿಲ್ಲ, ಇದು ನನ್ನ ಗಮನಕ್ಕೆ ಬಂದ ಮೇಲೆ ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಕರೆಸಿ ಮಾತನಾಡಿದ್ದೇವೆ. ಫ್ರೆಷರ್ಸ್ ಪಾರ್ಟಿ ವಿಚಾರವಾಗಿ ಮಾತನಾಡಿದ್ದೇವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದು ಅವರವರೇ ಸರಿಪಡಿಸಿಕೊಂಡಿದ್ದಾರೆ ಎಂದು ಡಾ. ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನ್ಯೂಸ್18 ಕನ್ನಡ ಫಲಶ್ರುತಿ: ಕೋಲಾರದ ಮಾಲೂರು ಪೊಲೀಸರ ರೋಲ್​ಕಾಲ್​ ಕೇಸ್; ಇಬ್ಬರು ಸಿಬ್ಬಂದಿ ಅಮಾನತು

ರ್‍ಯಾಗಿಂಗ್ ತಡೆಗಟ್ಟಲು ನಮ್ಮ ಸಿಬ್ಬಂದಿ ಪ್ರತಿದಿನ ರೌಂಡ್ಸ್ ಮಾಡುತ್ತಾರೆ. ರಾತ್ರಿ 9 ಗಂಟೆಯ ನಂತರ ಯಾರೂ ಬೇರೆಯವರ ರೂಂ ಗಳಿಗೆ ಹೋಗುವಂತಿಲ್ಲ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ದೂರು ನೀಡಿ:

ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ರ್‍ಯಾಗಿಂಗ್ ಪ್ರಕರಣವನ್ನು ಸಂಸ್ಥೆಯ ಮುಖ್ಯಸ್ಥರು ಗಂಭೀರವಾಗಿ ಪರಿಗಣಿಸಬೇಕು. ಯಾವ ಕಾರಣಕ್ಕೂ ಮಾತುಕತೆಯ ಮೂಲಕ ಬಗೆಹರಿಸುವ ಪ್ರಯತ್ನ ಮಾಡಬಾರದು. ರ್‍ಯಾಗಿಂಗ್​‌ಗೆ ಕಡಿವಾಣ ಹಾಕುವುದಲ್ಲದೆ ರ್ಯಾಗಿಂಗ್ ನಡೆದ ಪ್ರಕರಣ ಬೆಳಕಿಗೆ ಬಂದೊಡನೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇ ಕು. ಅಲ್ಲದೆ ರ್‍ಯಾಗಿಂಗ್‌ಗೆ ಕಡಿವಾಣ ಹಾಕಲು ಶ್ರಮಿಸಬೇಕು ಎಂಬುದು ಪೋಷಕರು ಆಗ್ರಹವಾಗಿದೆ.

ವರದಿ: ಎಸ್.ಎಂ.ನಂದೀಶ್
Published by:Vijayasarthy SN
First published: