ಬೆಳಗಾವಿ: ಬೆಳಗಾವಿ ಲೋಕಸಭೆ ಉಪಚುನಾವಣೆ ಮತದಾನ ಮುಕ್ತಾಯಗೊಂಡು ಎರಡು ದಿನ ಕಳೆದಿದೆ. ಇದೀಗ ಅಭ್ಯರ್ಥಿಗಳು ಗೆಲುವು, ಸೋಲಿನ ಲೆಕ್ಕಚಾರದಲ್ಲಿ ತೊಡಗಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಈ ಸಲ ಮತದಾರ ಯಾರ ಕೈ ಹಿಡಿದಿದ್ದಾನೆ ಎಂಬುದು ಕುತೂಹಲಕ್ಕೆ ಕಾಣವಾಗಿದೆ. ಬಿಜೆಪಿ- ಕಾಂಗ್ರೆಸ್ ನಡುವೆ ನೇರಾನೇರಾ ಸ್ಪರ್ಧೆ ಇದ್ದರು ಸಹ ಚುನಾವಣೆಯಲ್ಲಿ ಎಂಇಎಸ್ ಬೆಂಬಲಿತ ಅಭ್ಯರ್ಥಿ ಮಹತ್ವ ಪಾತ್ರ ವಹಿಸುವುದು ಬಹುತೇಕ ಪಕ್ಕಾಗಿದೆ. ಮೇ 2 ಕ್ಕೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರು ಈಗಿನಿಂದಲೇ ಗೆಲುವು ಸೋಲಿನ ಲೆಕ್ಕಚಾರದಲ್ಲಿ ತೊಡಗಿಕೊಂಡಿದ್ದಾರೆ.
ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಕ್ಷೇತ್ರದಲ್ಲಿ ಶೇ. 56.2ರಷ್ಟು ಮತದಾನ ಆಗಿದೆ. ಕಡಿಮೆ ಮತದಾನ ಆಗಿರೋದು ಸಹ ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಇನ್ನೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಂಗಲಾ ಸುರೇಶ ಅಂಗಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಇಬ್ಬರಲ್ಲಿ ಯಾರಿಗೆ ಗೆಲುವಿನ ಮಾಲೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಎರಡು ಪಕ್ಷಗಳು ಮುಖಂಡರು ಹಾಗೂ ಕಾರ್ಯಕರ್ತರು ತಮ್ಮದೇ ಆಗಿರೋ ವಿಶ್ಲೇಷಣೆ ಹಾಗೂ ಲೆಕ್ಕಚಾರದಲ್ಲಿ ತೊಡಗಿಕೊಂಡಿದ್ದಾರೆ.
ಕಳೆದ 20 ದಿನಗಳಿಂದ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ನಾಯಕರು ಸದ್ಯ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಗೋಕಾಕ್ ನಲ್ಲಿಯೇ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದು, ಇಡೀ ಕ್ಷೇತ್ರದಲ್ಲಿ ನಡೆದಿರೋ ಮತದಾನ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಸ್ನೇಹಿತರ ಜತೆಗೆ ಬಸವೇಶ್ವರ ವೃತ್ತದಲ್ಲಿ ಮಸಾಲೆ ದೋಸೆ ಸವಿದು ರಾಜಕೀಯ ಲೆಕ್ಕಾಚಾರವನ್ನು ಮಾಡುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಸಹ ಬೆಳಗಾವಿಯ ನಿವಾಸದಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿ ಇದ್ದರು. ಮಕ್ಕಳು ಹಾಗೂ ಮೊಮ್ಮಕಳ ಜತೆಗೆ ಇಡೀ ದಿನ ಕಾಲ ಕಳೆದಿದ್ದಾರೆ. ಕಾರ್ಯಕರ್ತರಿಂದ ಕ್ಷೇತ್ರದಲ್ಲಿ ಆಗಿರೋ ಮತದಾನ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ತಮ್ಮದೇ ಆಗಿರೋ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ಈ ಸಲದ ಚುನಾವಣೆ ಅನುಕಂಪ ಹಾಗೂ ವೈಯಕ್ತಿಕ ವರ್ಚಸ್ಸಿನ ಮೇಲೆ ನಡೆದಿದೆ. ಕಳೆದ 4 ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ನಿರಂತರವಾಗಿ ಗೆಲುವು ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ 4 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಆದರೇ ಉಪಚುನಾವಣೆಯಾಗಿದ್ದು ಕಾಂಗ್ರೆಸ್ ನಿಂದ ಪ್ರಭಲ ಅಭ್ಯರ್ಥಿ ಸಹ ಸ್ಪರ್ಧೆ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ