ಕಲಬುರ್ಗಿ(ಸೆಪ್ಟೆಂಬರ್.30): ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಲಕ್ನೋ ನ್ಯಾಯಾಲಯ ತೀರ್ಪು ನೀಡಿದೆ. ಲಕ್ನೋ ನ್ಯಾಯಾಲಯದ ತೀರ್ಪನ್ನು ಆಂದೋಲ ಕರುಣೇಶ್ವರ ಮಠದ ಪೀಠಾಧಿಪತಿ ಹಾಗೂ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮಿಗಳು ಸ್ವಾಗತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀಗಳು, ದೇಶದಲ್ಲಿ ಇದೊಂದು ಸಕಾರಾತ್ಮಕ ಬೆಳವಣಿಗೆ ಎಂದಿದ್ದಾರೆ. 500 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಬಾಬ್ರಿ ಮಸೀದಿಯನ್ನು 1992 ರಲ್ಲಿ ನೆಲಸಮಗೊಳಿಸಲಾಗಿತ್ತು. ರಾಷ್ಟ್ರದ ಹಿಂದೂ ಸಮಾಜ ಚಲೋ ಅಯೋಧ್ಯ ಎಂದು ಕರೆ ನೀಡಿದ್ದನ್ನು ಬೆಂಬಲಿಸಿ ಲಕ್ಷಾಂತರ ಹಿಂದೂಗಳು ಬಾಬ್ರಿ ಮಸೀದಿ ಮೇಲೆ ಮುಗಿಬಿದ್ದು, ಮಸೀದಿಯನ್ನು ಧ್ವಂಸಗೊಳಿಸಿದ್ದರು. ಆರು ಲಕ್ಷ ಹಿಂದೂಗಳು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಅಂದಿನ ಕೇಂದ್ರ ಸರ್ಕಾರ ಬಿಜೆಪಿ ಹಾಗೂ ಹಿಂದೂ ನಾಯಕರು ಸೇರಿ 40ಕ್ಕೂ ಹೆಚ್ಚು ಜನರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿತ್ತು.
ಈ ಪ್ರಕರಣದಲ್ಲಿ ಹಲವು ನಾಯಕರನ್ನು ಸುಖಾ ಸುಮ್ಮನೆ ಸಿಲುಕಿಸಲಾಗಿತ್ತು. ನಿರಂತರ ಕಾನೂನು ಹೋರಾಟದಲ್ಲಿ ಲಕ್ನೋ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದವರನ್ನು ನ್ಯಾಯಾಲಯ ಇಂದು ಖುಲಾಸೆಗೊಳಿಸಿದೆ. ಸುಳ್ಳು ಮೊಕದ್ದಮೆ ದಾಖಲಿಗೆ ಕೋರ್ಟ್ ತೀರ್ಪಿನ ಮೂಲಕ ಉತ್ತರ ನೀಡಿದೆ. ಎಲ್ಲ ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಿಸಿರೋದು ಸ್ವಾಗತಾರ್ಹ.
ಭಾರತದ ಹಿಂದೂ ಸಮಾಜ ತೀರ್ಪನ್ನು ಗೌರವಿಸುತ್ತದೆ. ಸುಳ್ಳು ಮೊಕದ್ದಮೆ ದಾಖಲಿಸಿ ನಡೆಸಿದ್ದ ರಾಜಕೀಯ ಪಿತೂರಿಗೆ ಅಪಮಾನವಾಗಿದೆ. ನ್ಯಾಯಾಲಯವೆ ಸುಳ್ಳು ಮೊಕದ್ದಮೆಗೆ ತಕ್ಕ ಉತ್ತರ ನೀಡಿದೆ.
ಇದನ್ನೂ ಓದಿ : ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಎಲ್ಲಾ 32 ಆರೋಪಿಗಳು ಖುಲಾಸೆ- ಲಕ್ನೋ ಸಿಬಿಐ ಕೋರ್ಟ್ ತೀರ್ಪು
ಅಂದು ಬಾಬ್ರಿ ಮಸೀದಿ ನೆಲಸಮಗೊಳಿಸಿದ್ದರಿಂದಲೇ ಇಂದು ಆಯೋಧ್ಯ ಮಂದಿರ ನಿರ್ಮಿಸಲು ಸಾಧ್ಯವಾಗುತ್ತಿರುವುದು. ನ್ಯಾಯಾಲಯದ ತೀರ್ಪಿನಿಂದ ಸಂತಸವಾಗಿದೆ. ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ನ್ಯಾಯಾಲಯದ ತೀರ್ಪು ಮುನ್ನುಡಿ ಬರೆಯಲಿದೆ. ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಪರ ಸಂಘಟನೆಗಳ ಸ್ವಾಗತ :
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಅಡ್ವಾಣಿ ಸೇರಿದಂತೆ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿರುವ ಲಕ್ನೋ ನ್ಯಾಯಾಲಯದ ತೀರ್ಪನ್ನು ವಿವಿಧ ಹಿಂದೂಪರ ಸಂಘಟನೆಗಳು ಸ್ವಾಗತಿಸಿವೆ. ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಮತ್ತಿತರ ಸಂಘಟನೆಗಳು ತೀರ್ಪನ್ನು ಸ್ವಾಗತಿಸಿವೆ. ನ್ಯಾಯಾಲಯದ ತೀರ್ಪಿನಿಂದ ದೊಡ್ಡ ನ್ಯಾಯ ಸಿಕ್ಕಂತಾಗಿದೆ. ಆಗ ಆಳ್ವಿಕೆಯಲ್ಲಿದ್ದ ಸರ್ಕಾರ ದಾಖಲಿಸಿದ್ದ ಸುಳ್ಳು ಮೊಕದ್ದಮೆಗೆ ತೀರ್ಪು ತಕ್ಕ ಉತ್ತರ ನೀಡಿದು ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ