ಕಲಬುರ್ಗಿ(ಅಕ್ಟೋಬರ್.05): ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ದುರುದ್ದೇಶದಿಂದ ಮಾಡಲಾಗಿದೆ ಎಂದು ವಿಧಾನಸಭೆ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಅಜಯಸಿಂಗ್ ಆರೋಪಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅಜಯಸಿಂಗ್, ರಾಜ್ಯದಲ್ಲಿ ನಡೆಯುತ್ತಿರೋ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಸೋಲುತ್ತಾರೆ ಎಂಬ ಕಾರಣಕ್ಕೆ ಬಿಜೆಪಿ ಡಿಕೆಶಿ ಸಹಹೋದರರನ್ನು ಟಾರ್ಗೆಟ್ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದ್ರೆ ಸಿಬಿಐ, ಇಡಿ ಮತ್ತು ಐಟಿ ದಾಳಿ ಮಾಡುತ್ತಾರೆ. ಕೇಂದ್ರ ಸರ್ಕಾರಿ ಸ್ವಾಮ್ಯದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಕ್ರಮ ಆಸ್ತಿ ಕಾರಣಕ್ಕಾಗಿ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿ ಪಕ್ಷದಲ್ಲಿ ಎಷ್ಟು ಜನ ಅಕ್ರಮ ಆಸ್ತಿ ಮಾಡಿದವರಿಲ್ಲ. ಈವರೆಗೆ ಯಾರೊಬ್ಬ ಬಿಜೆಪಿ ಮುಖಂಡರ ಮನೆ ಮೇಲೆ ದಾಳಿ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದರು.
ಉಪ ಚುನಾವಣೆ ಬಿಸಿ ನೋಡಿಕೊಂಡು ದಾಳಿ ಮಾಡಿಸಲಾಗಿದೆ. ಉಪ ಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವ ಭಯದಿಂದ ಬಿಜೆಪಿ ಪ್ರಾಯೋಜಿತ ದಾಳಿ ನಡೆದಿದೆ. ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕಲಬುರ್ಗಿಯಲ್ಲಿ ಬಿಜೆಪಿ ವಿರುದ್ಧ ಅಜಯ್ ಸಿಂಗ್ ವಾಗ್ದಾಳಿ ಮಾಡಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ರಸ್ತೆ ತಡೆ :
ಡಿ ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಖಂಡಿಸಿ, ಬಿಜೆಪಿಯಿಂ ದ್ವೇಷದ ರಾಜಕಾರಣ ನಡೀತಿದೆ ಎಂದು ಆರೋಪಿಸಿ ಕಲಬುರ್ಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಕಲಬುರ್ಗಿಯ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು. ದ್ವೇಷದ ರಾಜಕಾರಣಕ್ಕೆ ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರ್ಬಳಕೆಯಾಗುತ್ತಿವೆ ಎಂದು ಆರೋಪಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳ ನಾಯಕರ ಆತ್ಮಸ್ಥೈರ್ಯ ಕುಗ್ಗಿಸುವ ಪಿತೂರಿಯಿಂದ ದಾಳಿ ಮಾಡಲಾಗುತ್ತಿದೆ. ಅಪರೇಷನ್ ಕಮಲ ನಡೆಸಿ, ಶಾಸಕರನ್ನು ಖರೀದಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇಂತಹ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಲ್ಲ. ಕೇವಲ ಬಿಜೆಪಿ ಸ್ವಾರ್ಥಕ್ಕೆ ಸಿಬಿಐ ಮತ್ತಿತರ ಸಂಸ್ಥೆಗಳ ದುರ್ಬಳಕೆ.
ದೇಶದ ವಿವಿಧೆಡೆ ಬಿಜೆಪಿಯಿಂದ ಈ ರೀತಿಯ ದ್ವೇಷದ ದಾಳಿ ನಡೆದಿವೆ. ಬಿಜೆಪಿ ಮತ್ತು ಎನ್.ಡಿ.ಎ. ಹೊರತುಪಡಿಸಿದ ಪಕ್ಷಗಳ ವಿರುದ್ಧ ಮಾತ್ರ ದಾಳಿ ಮಾಡಲಾಗುತ್ತಿದೆ. ಕೂಡಲೇ ದ್ವೇಷದ ರಾಜಕಾರಣ ಬಿಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ