ಕೋಲಾರದಲ್ಲಿ ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಾದ್ಯಂತ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಹಲವೆಡೆ ಮಳೆಯಿಂದಾಗಿ, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಜಲಾವೃತವಾಗಿದೆ. ಮಳೆ ನೀರು ಹೊಲಕ್ಕೆ ನುಗ್ಗಿದ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ಮುಳುಗಡೆಯಾಗಿವೆ. ಕೋಲಾರ ತಾಲೂಕಿನ ತೊಟ್ಲಿ, ಹೊಸಮಟ್ನಹಳ್ಳಿ , ನರಸಾಪುರ ಹಾಗೂ ವೇಮಗಲ್ ಸೇರಿದಂತೆ ಹಲವೆಡೆ ಬೆಳೆ ನಾಶವಾಗಿದ್ದು, ಟೊಮೆಟೊ, ಎಲೆಕೋಸು , ರಾಗಿ, ತೊಗರಿ ತೋಟಗಳಲ್ಲಿ ನೀರು ನಿಂತು ಬೆಳೆಗಳು ಕೊಳೆಯುವ ಭೀತಿ ಎದುರಾಗಿದೆ.
ಅಲ್ಲಲ್ಲಿ ಕೆರೆಗಳು ಮತ್ತು ರಾಜಕಾಲುವೆಗಳು ಒತ್ತುರಿಯಾಗಿರೊ ಕಾರಣ, ರೈತರ ತೋಟಗಳಿಗೆ ನೀರು ನುಗ್ಗುತ್ತಿದೆ. ಹೀಗಾಗಿ ರೈತರು ಬೆಳೆದಿರುವ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಗಳೆಲ್ಲಾ ಮಣ್ಣು ಪಾಲಾಗಿದೆ. ಕಳೆದ ಮೂರು ದಿನದಿಂದ ಸಂಜೆ ವೇಳೆಗೆ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಕೊರೋನಾ ಸಂಕಷ್ಟದ ಮಧ್ಯೆಯೇ ಬಯಲುಸೀಮೆ ಕೋಲಾರದ ರೈತರಿಗೆ ಮತ್ತೊಮ್ಮೆ ಹೊಡೆತ ಬಿದ್ದಂತಾಗಿದೆ. ಬೆಳೆನಾಶ ಆಗಿರುವ ಬಗ್ಗೆ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ರೈತರ ನೆರವಿಗೆ ಸರ್ಕಾರ ಬರಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:Mysuru Gang Rape Case: ಮೈಸೂರು ಗ್ಯಾಂಗ್ ರೇಪ್ ಪ್ರಕರಣ; ಐವರು ಆರೋಪಿಗಳು ಅರೆಸ್ಟ್, ಮಾಹಿತಿ ಬಿಚ್ಚಿಟ್ಟ ಡಿಜಿಪಿ
ಪ್ರಸಕ್ತ ವರ್ಷದಲ್ಲಿ ಬಿತ್ತನೆ ಕಾರ್ಯಕ್ಕೂ ಅಡ್ಡಿಯಾದ ಮಳೆರಾಯ
ಕಳೆದ ಎರಡು ತಿಂಗಳಲ್ಲಿ ತೋಟಗಳಲ್ಲಿ ಹಾಕಿದ್ದ ಟೊಮೆಟೊ ಬೆಳೆಗಳನ್ನ ರೈತರು ಕಟಾವು ಮಾಡಿದ್ದರು. ಎಂದಿನಂತೆ ರಾಗಿ, ಜೋಳ, ತೊಗರಿ, ನೆಲಗಡಲೆ ಹಾಕಬೇಕಿತ್ತು, ಆದರೆ ಎರಡು ತಿಂಗಳಿಂದ ಮಳೆ ಆಗಾಗ್ಗೆ ಸುರಿಯುತ್ತಿರುವ ಕಾರಣ ರೈತರು ಪೂರ್ಣ ಪ್ರಮಾಣದಲ್ಲಿ ಬಿತ್ತನೆ ಮಾಡಲು ಸಮಯ ಸಿಕ್ಕಿಲ್ಲ. ಆದರೂ ರಾಗಿ, ನೆಲಗಡಲೆ ಮತ್ತು ತೊಗರಿ ಬಿತ್ತನೆ ಕಾರ್ಯ ಮುಂದುವರೆಯುತ್ತಿದೆ. ಕೆಲ ಪ್ರದೇಶದಲ್ಲಿ ನಷ್ಟದ ಭೀತಿಯಿಂದಲೇ ರೈತರು ಯಾವ ಬೆಳೆ ಹಾಕಬೇಕು ಎನ್ನುವ ಚಿಂತೆಯಲ್ಲೇ ಕಾಲ ಕಳೆದಿದ್ದಾನೆ.
ಟೊಮೆಟೊ, ಕ್ಯಾರೆಟ್, ಕೊತ್ತಂಬರಿ, ಬೆಂಡೆಕಾಯಿ ಹಾಗೂ ಹೂ ಬೆಳೆಗಳಲ್ಲಿ ಸರಣಿ ನಷ್ಟ ಅನುಭವಿಸಿರುವ ರೈತರು, ಬಿತ್ತನೆ ಕಾರ್ಯದ ಕಡೆ ಹೆಚ್ಚು ಒಲವು ತೋರದೆ ಸಾಂಪ್ರದಾಯಿಕ ಬೆಳೆಯನ್ನೇ ಅವಲಂಬಿಸಿದ್ದಾರೆ, ಕಳೆದ ಮೂರು ವರ್ಷದಿಂದ ಜಿಲ್ಲೆಯಲ್ಲಿ ಟೊಮೆಟೊ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವ ಕಾರಣ, ರೈತರು ಇರುವ ಬಂಡವಾಳದ ಹಣವನ್ನ ಟೊಮೆಟೊ ಮೇಲೆ ಹಾಕಿದ್ದಾರೆ, ಬಂಡವಾಳಕ್ಕೆ ಸಮನಾಗಿ ಫಸಲು ರೈತನ ಕೈ ಸೇರಿದ್ದರೂ ನಿರೀಕ್ಷಿತ ಬೆಲೆ ಸಿಗದೆ, ರೈತರು ನಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಹೀಗಾಗಿ ರೈತರು ಬಿತ್ತನೆ ಕಾರ್ಯಕ್ಕೂ ಮೊದಲು ಯೋಚಿಸುವಂತಾಗಿದೆ.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಒಟ್ಟಿನಲ್ಲಿ ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಈಗಾಗಲೇ ಸಾಲದ ಶೂಲಕ್ಕೆ ಸಿಲುಕಿದ್ದು, ಇದೀಗ ನಿರಂತರ ಮಳೆಯಿಂದಾಗಿ ಬೆಳೆಯೂ ನೀರು ಪಾಲಾಗುವ ಆತಂಕ ಎದುರಾಗಿದೆ. ರೈತರ ಹೊಲಗಳಿಗೆ ನೀರು ನುಗ್ಗುವಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಸ್ಥಳೀಯ ಅಧಿಕಾರಿಗಳು ಕಾಲುವೆ ಒತ್ತುವರಿ, ಕೆರೆ ಒತ್ತುವರಿಗಳನ್ನ ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ