ಭಾಗ-1 | ರಾತ್ರಿ ವೇಳೆ ಹರಿಹರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮರಳು ಗಣಿಗಾರಿಕೆ; ಪೊಲೀಸ್ ಠಾಣೆಯ ಮುಂಭಾಗದಲ್ಲೇ ರಾಜಾರೋಷವಾಗಿ ಸಾಗುತ್ತಿವೆ ಮರಳು ವಾಹನಗಳು!

ದಾವಣಗೆರೆ ಜಿಲ್ಲೆಯಲ್ಲಿ ರಾತ್ರೋರಾತ್ರಿ ಅಕ್ರಮ ಮರಳುಗಾರಿಕೆ ನಡೆಯುತ್ತೆ ಎಂಬ ದೂರುಗಳಿಗೆ ಹಿಂದಿನ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ರಾತ್ರಿ ವೇಳೆ ಖುದ್ದು ತಾವೇ ಕಾರ್ಯಾಚರಣೆ ನಡೆಸಿ ಹಲವರನ್ನು ಬಂಧಿಸಿದ್ದ ಉದಾಹರಣೆಗಳಿವೆ. ಅದೇ ರೀತಿ ಇದೀಗ ಪುನಃ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕಯನ್ನು ನಿಲ್ಲಿಸಲು ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿ ರಾತ್ರಿ  ವೇಳೆ ಖುದ್ದು ಕಾರ್ಯಾಚರಣೆ ನಡೆಸಿ, ದಂಧೆ ನಡೆಸುವವರಿಗೆ ಕಡಿವಾಣ ಹಾಕಬೇಕಿದೆ. 

ಹರಿಹರದಲ್ಲಿ ರಾತ್ರಿ ವೇಳೆ ಲಾರಿಯಲ್ಲಿ ಮರಳನ್ನು ಸಾಗಿಸುತ್ತಿರುವುದು.

ಹರಿಹರದಲ್ಲಿ ರಾತ್ರಿ ವೇಳೆ ಲಾರಿಯಲ್ಲಿ ಮರಳನ್ನು ಸಾಗಿಸುತ್ತಿರುವುದು.

  • Share this:
ದಾವಣಗೆರೆ; ಮಳೆ ನಿಂತ ಬಳಿಕ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ತುಂಗಭದ್ರೆ ಗರ್ಭದಲ್ಲಿ ಅಕ್ರಮವಾಗಿ ಮರಳು ಕೊರೆತ ಪ್ರಾರಂಭವಾಗಿದೆ. ಕಳೆದ ಒಂದು ವಾರದಿಂದ ಹರಿಹರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸುವ ಅಧಿಕಾರಿಗಳೇ ಮರಳು ದಂಧೆಕೋರರ ಜೊತೆ ಶಾಮೀಲಾಗಿರುವ ಬಗ್ಗೆ ಗ್ರಾಮಸ್ಥರು ಮಾತಾಡಿಕೊಳ್ಳುತ್ತಿದ್ದಾರೆ.

ಹರಿಹರ ತಾಲ್ಲೂಕಿನಲ್ಲಿ ದೊರೆಯುವ ಮರಳಿಗೆ ಭಾರಿ ಬೇಡಿಕೆ ಇರುವುದರಿಂದ ಪ್ರತಿದಿನ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ತುಂಗಭದ್ರೆ ನದಿಯ ಮಧ್ಯ ಭಾಗದಲ್ಲಿ ಭೋಟ್, ತೆಪ್ಪಗಳಲ್ಲಿ ಮರಳನ್ನು ತೆಗೆಯಲಾಗುತ್ತಿದ್ದರೆ, ಇನ್ನೊಂದೆಡೆ ಇಟಾಚಿ ಬಳಸಿ ನದಿಯಲ್ಲಿ 10 ರಿಂದ 20 ಅಡಿ ಆಳದವರೆಗೆ ಮರಳನ್ನು ತೆಗೆದು ಬೃಹತ್ ಗಾತ್ರದ ಗುಂಡಿಗಳನ್ನು ಮಾಡಲಾಗಿದೆ. ಹರಿಹರ ಬಳಿಯ ಗುತ್ತೂರು, ನಾರಾಯಣ ಆಶ್ರಮದ ಹಿಂಭಾಗ, ಸಾರಥಿ, ಎಲ್ಲಮ್ಮ ದೇವಸ್ಥಾನ ರಸ್ತೆ, ಹರ್ಲಾಪುರ, ಕೈಲಾಸ ನಗರ, ಮೆಟ್ಟಿಲುಹೊಳೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಮರಳನ್ನು ನದಿಯಿಂದ ತೆಗೆಯಲು ಅನ್ಯ ರಾಜ್ಯದಿಂದ ಕಾರ್ಮಿಕರನ್ನು ಮರಳು ದಂಧೆಕೋರರು ಹರಿಹರಕ್ಕೆ ಕರೆಸಿಕೊಂಡಿದ್ದಾರಂತೆ.

ಹರಿಹರ ತಾಲ್ಲೂಕಿನಲ್ಲಿ ಹಾದುಹೋಗುವ ತುಂಗಭದ್ರೆಯ ನದಿಯನ್ನು ಮೂರು ಭಾಗವನ್ನು ಮಾಡಿಕೊಂಡಿದ್ದಾರಂತೆ. ಸ್ಥಳೀಯರು ಹೇಳುವ ಪ್ರಕಾರ ಮೂರು ಪಕ್ಷದ ಜನಪ್ರತಿನಿಧಿಗಳ ನಿಷ್ಠಾವಂತ ಬೆಂಬಲಿಗರಿಗೆ ವರದಾನವಾಗಿದೆಯಂತೆ. ಇವರ ಕಾರ್ಯಕರ್ತರೇ ಪ್ರಮುಖವಾಗಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರಂತೆ. ತುಂಗಭದ್ರ ನದಿಯಲ್ಲಿ ಅಧಿಕೃತವಾಗಿ ಮರಳು ಗಣಿಗಾರಿಕೆ ಮಾಡಲು 4 ಪಾಯಿಂಟ್ ಗಳನ್ನು ಗುರುತಿಸಲಾಗಿದೆ. ಆದರೆ ಮಳೆಗಾಲ ಮುಗಿಯುವವರೆಗೆ ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಮರಳು ಗಣಿಗಾರಿಕೆ ಮಾಡಕೂಡದು ಎಂಬ ನಿಯಮವನ್ನು ಗಾಳಿಗೆ ತೂರಿ ಅಕ್ರಮಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ  ಸರ್ವರಿಗೂ ಸಮಪಾಲು ಎಂಬಂತೆ ಅಧಿಕಾರಿಗಳೊಡನೆ ಒಳಒಪ್ಪಂದ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಅಕ್ರಮವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆ.


ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸರ್ಕಾರ ಹಲವು ಆದೇಶಗಳನ್ನು ಮಾಡಿದೆ. ಆದರೆ ಇದಕ್ಕೆ ಸಂಬಂಧಿಸಿದ ಗಣಿ ಮತ್ತು ಭೂ ಇಲಾಖೆ ಅಧಿಕಾರಿಗಳಿಗೆ ಇದ್ಯಾವುದು ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಕಾಟಾಚಾರಕ್ಕೆ ಅಲ್ಲೊಂದು ಇಲ್ಲೊಂದು ಕಡೆ ಚಿಕ್ಕದಾಗಿ ಮರಳನ್ನು ಸೀಜ್ ಮಾಡಿದ್ದು, ಬಿಟ್ಟರೆ ನಿರಂತರವಾಗಿ ದೊಡ್ಡಮಟ್ಟದಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಲು ವಿಫಲವಾಗಿರುವುದಂತೂ ಸತ್ಯ.

ತುಂಗಭದ್ರೆ ನದಿಯಲ್ಲಿ ನಡೆಸಲಾಗುತ್ತಿರುವ ಅಕ್ರಮ ಮರಳು ಗಣಿಗಾರಿಕೆ.


ನಿನ್ನೆ ರಾತ್ರಿ ಗುತ್ತೂರು ಭಾಗದಲ್ಲಿ ಬಿಜೆಪಿ ಪ್ರಭಾವಿ ವ್ಯಕ್ತಿಯೊಬ್ಬರ ಕುಮ್ಮಕ್ಕಿನಿಂದ ಇಟಾಚಿ ಬಳಸಿ ತುಂಗಭದ್ರಾ ನದಿಯಲ್ಲಿ ಮರಳನ್ನು ತೆಗೆದು ಸಾಗಾಟ ಮಾಡುವ ವೇಳೆ ಗುತ್ತೂರು ಗ್ರಾಮದ ಜನರು ತಡೆದಿದ್ದಾರೆ. ಅಲ್ಲದೆ ದೂರು ನೀಡಲು ಹೋದವರಿಗೆ ಅಧಿಕಾರಿಗಳು ಕ್ಯಾರೆ ಎಂದಿಲ್ಲವಂತೆ. ಪ್ರತಿನಿತ್ಯ ರಾತ್ರಿ ವೇಳೆ ನೂರಕ್ಕೂ ಹೆಚ್ಚು ವಾಹನಗಳಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ಈ ಅಕ್ರಮ ಮರಳು ಸಾಗಾಣಿಕೆಗೆ ಪರೋಕ್ಷವಾಗಿ ಹರಿಹರದ ಜನಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆ ಶಾಮೀಲಾಗಿರುವ ಅನುಮಾನಗಳು ಸ್ಥಳೀಯ ಜನರಲ್ಲಿ ಕಾಡುತ್ತಿದೆ. ಇದರ ಬಗ್ಗೆ ಜನರು ಹೇಳಲು ಭಯಭೀತರಾಗಿದ್ದಾರೆ.

ಇದನ್ನು ಓದಿ: ಪಟಾಕಿ ನಿಷೇಧದ ನಡುವೆಯು ಹಸಿರು ಪಟಾಕಿ ಭರಾಟೆ; ಬೆಂಗಳೂರು ಹೊರವಲಯದಲ್ಲಿ ಭರ್ಜರಿ ವ್ಯಾಪಾರ

ಅಕ್ರಮವಾಗಿ ನದಿಯ ಓಡಲನ್ನು ಬಗೆಯುತ್ತಿರುವುದರಿಂದ ಜಲಚರ ಪ್ರಾಣಿಗಳು ಜೀವಕ್ಕೆ ಸಂಚಕಾರ ಬರುತ್ತಿದೆ. ಇತ್ತೀಚೆಗೆ ಹರಿಹರ ತಾಲ್ಲೂಕಿನಲ್ಲಿ  ಉತ್ತಮ ಮಳೆಯಾಗಿತ್ತು. ಹೀಗಾಗಿ ತುಂಗಭದ್ರೆ ತನ್ನ ಓಡಲನ್ನ ತುಂಬಿಕೊಂಡು ಸರಾಗವಾಗಿ ಹರಿಯುತ್ತಿದ್ದಳು, ಇದೀಗ ಮಳೆ ನಿಂತ ಹಿನ್ನೆಲೆ ಹಾಗೂ ನದಿ ನೀರು ಕೂಡ ಇಳಿಮುಖವಾದ ಕಾರಣ ಅಕ್ರಮ ಮರಳು ದಂಧೆಕೋರರಿಗೆ ವರದಾನವಾಗಿದೆ. ಕಳೆದ ಒಂದು ವಾರದಿಂದ ರಾತ್ರಿ 8 ಗಂಟೆಯಾದರೆ ಸಾಕು ಅಕ್ರಮ ಮರಳುಗಾರಿಕೆ ಪ್ರಾರಂಭವಾಗುತ್ತೆ, ರಾತ್ರಿ 11 ರ ನಂತರ ಟಿಪ್ಪರ್, ಮಜ್ಡಾ ಲಾರಿಗಳು ಹಾಗೂ ಟ್ರಾಕ್ಟರ್ ಗಳು ಸದ್ದು ಮಾಡುತ್ತಿವೆ.

ದಾವಣಗೆರೆ ಜಿಲ್ಲೆಯಲ್ಲಿ ರಾತ್ರೋರಾತ್ರಿ ಅಕ್ರಮ ಮರಳುಗಾರಿಕೆ ನಡೆಯುತ್ತೆ ಎಂಬ ದೂರುಗಳಿಗೆ ಹಿಂದಿನ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ರಾತ್ರಿ ವೇಳೆ ಖುದ್ದು ತಾವೇ ಕಾರ್ಯಾಚರಣೆ ನಡೆಸಿ ಹಲವರನ್ನು ಬಂಧಿಸಿದ್ದ ಉದಾಹರಣೆಗಳಿವೆ. ಅದೇ ರೀತಿ ಇದೀಗ ಪುನಃ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕಯನ್ನು ನಿಲ್ಲಿಸಲು ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿ ರಾತ್ರಿ  ವೇಳೆ ಖುದ್ದು ಕಾರ್ಯಾಚರಣೆ ನಡೆಸಿ, ದಂಧೆ ನಡೆಸುವವರಿಗೆ ಕಡಿವಾಣ ಹಾಕಬೇಕಿದೆ.

  • ತುಂಗಭದ್ರೆ ಗರ್ಭದಲ್ಲಿ ಅಕ್ರಮ ಮರಳು ಗಣಿಗಾರಿಕೆ ಭಾಗ -1 (ನಾಳೆ ಭಾಗ-2)

  • ವಿಶೇಷ ವರದಿ : ಹೆಚ್ ಎಂ ಪಿ ಕುಮಾರ್ 

Published by:HR Ramesh
First published: