ವಿಜಯಪುರ ಜಿಲ್ಲಾಸ್ಪತ್ರೆಗೆ ಮತ್ತೆ ಸಿಕ್ತು ಕಾಯಕಲ್ಪ ಪ್ರಶಸ್ತಿ ; ಸರ್ಕಾರಿ ಆಸ್ಪತ್ರೆಗೆ ಮತ್ತೊಂದು ಗರಿ

ವಿಜಯಪುರ ಜಿಲ್ಲಾ ಆಸ್ಪತ್ರೆ

ವಿಜಯಪುರ ಜಿಲ್ಲಾ ಆಸ್ಪತ್ರೆ

  • Share this:
ವಿಜಯಪುರ(ಅ. 08): ಸರ್ಕಾರಿ ಆಸ್ಪತ್ರೆಗಳೆಂದರೆ ಸಾಕು ಎಲ್ಲರೂ ಮೂಗು ಮುರಿಯುವವರೇ ಹೆಚ್ಚು. ಆದರೆ, ಸಾಕಷ್ಟು ಟೀಕೆಗಳ ನಡುವೆಯೂ ಬಸವನಾಡಿನ ಜಿಲ್ಲಾಸ್ಪತ್ರೆ ಈಗ 3ನೇ ಬಾರಿಗೆ ಸ್ವಚ್ಛತೆ, ಸೇವೆ ಮತ್ತು ದಾಖಲೆಗಳ ನಿರ್ವಹಣೆಗೆ ನೀಡಲಾಗುವ ಕಾಯಕಲ್ಪ ಪ್ರಶಸ್ತಿಗೆ ಪಾತ್ರವಾಗುವ ಮೂಲಕ ಗಮನ ಸೆಳೆದಿದೆ. ಆಸ್ಪತ್ರೆಯ ಹೊರಗೆ ಮತ್ತು ಒಳಗೆ ಇರುವ ಸ್ವಚ್ಛತೆ, ಸಿಬ್ಬಂದಿ ನೀಡುವ ಸೇವೆ ಮತ್ತು ನಿರ್ವಹಿಸಲಾಗುವ ದಾಖಲಾತಿಗಳನ್ನು ಪರಿಗಣಿಸಿ 2015 ರಿಂದ ಸರಕಾರಿ ಆಸ್ಪತ್ರೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ಮೂರನೇ ಬಾರಿಗೆ ಈ ಪ್ರಶಸ್ತಿ ಅರಸಿಕೊಂಡು ಬಂದಿದೆ. 2015-16 ಮತ್ತು 2016-17ನೇ ವರ್ಷದಲ್ಲಿ ಸತತವಾಗಿ ಎರಡು ಬಾರಿ ಕಾಯಕಲ್ಪ ಪ್ರಶಸ್ತಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ವಿಜಯಪುರ ಜಿಲ್ಲಾಸ್ಪತ್ರೆ ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ಹೆಸರು ಮಾಡಿತ್ತು.  2017-18ರಲ್ಲಿ ಎನಕ್ಯಾಶ್ ಅವಾರ್ಡ್ ಗೆ ಪಾತ್ರವಾಗಿದ್ದ ಆಸ್ಪತ್ರೆ 2018-19ನೇ ಸಾಲಿನಲ್ಲಿ ಕೇವಲ ಅರ್ಧ ಅಂಕದ ಕೊರತೆಯಿಂದ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಈ ಬಾರಿ ವಿಜಯಪುರ ಜಿಲ್ಲಾಸ್ಪತ್ರೆ ಕಾಯಕಲ್ಪ ಪ್ರಶಸ್ತಿಯಲ್ಲಿ ಮತ್ತೆ 2ನೇ ಸ್ಥಾನ ಪಡೆದಿದೆ. ಆದರೆ, ಈ ಬಾರಿಯೂ ಕೆಲವು ಅರ್ಧ ಅಂಕದ ಹಿನ್ನಡೆಯಿಂದಾಗಿ ಮೊದಲನೇ ಸ್ಥಾನದಿಂದ ವಂಚಿತವಾಗಿದೆ. 

ಈ ಪ್ರಶಸ್ತಿಯ ಜೊತೆಗೆ ರೂ. 10 ಲಕ್ಷ ಬಹುಮಾನ ಸಿಗಲಿದ್ದು, ಇದರಲ್ಲಿ ಶೇ. 25ರಷ್ಟು ಹಣವನ್ನು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಡಿ ಗ್ರುಪ್ ನೌಕರರಿಂದ ಹಿಡಿದು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸಮಾನವಾಗಿ ಹಂಚಲಾಗುವುದು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

ಈ ಪ್ರಶಸ್ತಿಯ ಕುರಿತು ಸಂತಸ ವ್ಯಕ್ತಪಡಿಸಿರುವ ವಿಜಯಪುರ ಜಿಲ್ಲಾಸ್ಪತ್ರೆಯ ಮುಖ್ಯಸ್ಥ ಡಾ. ಶರಣಪ್ಪ ಕಟ್ಟಿ, ತಾವು ಈ ಆಸ್ಪತ್ರೆಗೆ ವರ್ಗವಾಗಿ ಬಂದು ಎರಡು ವರ್ಷಗಳಾಗಿದ್ದು, ಕಳೆದ ಬಾರಿ 3ನೇ ಸ್ಥಾನದಲ್ಲಿದ್ದ ನಾವು ಈ ಬಾರಿ 2ನೇ ಸ್ಥಾನಕ್ಕೇರಿದ್ದೇವೆ. ಮುಂದಿನ ಬಾರಿ ಮತ್ತೆ ಗತವೈಭವ ಮರಳಿ ಮೊದಲನೇ ಸ್ಥಾನ ಪಡೆಯುವ ವಿಶ್ವಾಸವಿದೆ. ವಿಜಯಪುರ ಜಿಲ್ಲಾಸ್ಪತ್ರೆಗೆ ಈ ಪ್ರಶಸ್ತಿ ಬರಲು ಸಿಬ್ಬಂದಿ ಸೇವಾ ಮನೋಭಾವನೆ, ಸ್ವಚ್ಛತೆ ಮತ್ತು ದಾಖಲೆಗಳ ಸಮರ್ಪಕ ನಿರ್ವಹಣೆ ಕಾರಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಸೇರ್ಪಡೆ ಕೇವಲ ಊಹಾಪೋಹ - ನನ್ನ ಜನರನ್ನ ಕೇಳಿಯೇ ನಿರ್ಧಾರ ತೆಗೆದುಕೊಳ್ತೇನೆ ; ವಿನಯ್ ಕುಲಕರ್ಣಿ

ಈ ಮಧ್ಯೆ, ಮೂರು ಹಂತದಲ್ಲಿ ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಅಧಿಕಾರಿಗಳು ಆಯಾ ಆಸ್ಪತ್ರೆಗಳಲ್ಲಿರುವ ಧನಾತ್ಮಕ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ರಾಜ್ಯದಲ್ಲಿ ವಿಜಯಪುರ ಜಿಲ್ಲಾಸ್ಪತ್ರೆ ಸತತವಾಗಿ ಪ್ರಶಸ್ತಿಗೆ ಪಾತ್ರವಾಗುತ್ತಿರುವುದು ಸಂತಸದ ವಿಷಯ ಎಂದು ಡಾ. ಶರಣಪ್ಪ ಕಟ್ಟಿ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಮುಂದಿನ ಬಾರಿ ಮತ್ತೆ ನಾವೇ ಮೊದಲು ಬರಲು ಶತಪ್ರಯತ್ನ ಮಾಡುವುದಾಗಿ ಡಾ. ಶರಣಪ್ಪ ಕಟ್ಟಿ ಹೇಳಿರುವುದು ಅವರ ಮುಂದಿನ ಗುರಿಯ ಸಂಕೇತವಾಗಿದೆ. ಸಾಕಷ್ಟು ಟೀಕೆಯ ಮಧ್ಯೆಯೇ ಕೊರೋನಾ ರೋಗಿಗಳ ಸೇವೆ ಮಾಡುತ್ತ ಇಂಥ ಕಷ್ಟಕರ ಕಾಲದಲ್ಲಿಯೂ ಉತ್ತಮ ಆಸ್ಪತ್ರೆ ಎಂದು ಗುರುತಿಸಿಕೊಂಡಿರುವ ವಿಜಯಪುರ ಜಿಲ್ಲಾಸ್ಪತ್ರೆಯ ಎಲ್ಲ ಸಿಬ್ಬಂದಿಗಳು ಮತ್ತು ವೈದ್ಯರಿಗೊಂದು ಹ್ಯಾಟ್ಸಾಫ್ ಹೇಳಲೇಬೇಕು.
Published by:G Hareeshkumar
First published: