ಕಾರವಾರ; ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ದಿನ ವಿರಾಮ ನೀಡಿದ್ದ ಮಳೆ ಕಳೆದ ಮಧ್ಯರಾತ್ರಿಯಿಂದ ಮತ್ತೆ ಆರ್ಭಟ ಶುರು ಮಾಡಿದೆ. ಮಳೆಯ ಆರ್ಭಟಕ್ಕೆ ಕರಾವಳಿಯ ಶರಾವತಿ ಹಾಗೂ ಅದರ ಉಪನದಿಗಳು ಉಕ್ಕಿ ಹರಿದು ಗ್ರಾಮಗಳನ್ನು ಆವರಿಸಿಕೊಂಡಿದೆ. ಪ್ರವಾಹದೊಂದಿಗೆ ಮತ್ತೆ ಸಮಸ್ಯೆಗಳ ಮಹಾಪೂರವೇ ಹರಿದುಬಂದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿವೆ. ಜಿಲ್ಲೆಯ ಕುಮಟ, ಹೊನ್ನಾವರ ಭಾಗದಲ್ಲಿ ಎಡಬಿಡದೆ ವರುಣ ಅಬ್ಬರಿಸುತ್ತಿದ್ದು, ನೂರಕ್ಕೂ ಅಧಿಕ ಮನೆಗಳು ಜಲಾವೃತಗೊಂಡು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಮಟ ತಾಲೂಕಿನ ಕತ್ತಗಾಲ ಗ್ರಾಮದಲ್ಲಿ ಹರಿಯುತ್ತಿರುವ ಚಂಡಿಕಾ ನದಿ ಉಕ್ಕಿ ಹರಿದ ಪರಿಣಾಮ ಆ ಭಾಗದಲ್ಲಿ ಚಂಡಿಕಾ ನದಿ ನೀರು ರಸ್ತೆಯನ್ನು ಆಕ್ರಮಿಸಿಕೊಂಡು ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ನದಿ ಉಕ್ಕಿರುವುದರಿಂದ ಶಿರಸಿ - ಕುಮಟ ಮಾರ್ಗದಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಕುಮಟಾ ತಾಲೂಕಿನ ಕೂಜಳ್ಳಿ, ಹೆಗಡೆ, ಸೇರಿದಂತೆ ಅನೇಕ ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತಗ್ಗು ಪ್ರದೇಶದ ಜನರನ್ನು ಕಾಳಜಿ ಕೇಂದ್ರದಕ್ಕೆ ಸ್ಥಳಾಂತರ ಮಾಡಲಾಗಿದೆ.
ಹೊನ್ನಾವರ ತಾಲೂಕಿನ ಗುಂಡಬಾಳ ನದಿ ಉಕ್ಕಿದ ಪರಿಣಾಮ ಹಡಿನಬಾಳ, ಚಿಕ್ಕನಕೋಡ್ ಗ್ರಾಮ ನೀರಿನಿಂದ ಆವರಿಸಿಕೊಂಡಿದ್ದು, ಸುಮಾರು ನೂರಕ್ಕೂ ಹೆಚ್ಚು ಮನೆಗಳು ಪ್ರವಾಹದಿಂದ ನಲುಗಿವೆ. ಎಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯ ಕರವಾಳಿ, ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿರುವುದರಿಂದ ಪ್ರಮುಖ ನದಿಗಳಾಗಿರುವ ಶರಾವತಿ, ಅಘನಾಶಿನಿ, ವರದಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ತೀರದ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯಲ್ಲಿ ಇನ್ನೂ ಮೂರ್ನಾಲ್ಕು ದಿನ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಿಲ್ಲಾಡಳಿತ ಸಹ ನದಿ ತೀರದಲ್ಲಿನ ಜನತೆಯ ರಕ್ಷಣೆಗೆ ಮುಂದಾಗಿದೆ.
ಒಂದು ದಿನ ವಿರಾಮ ನೀಡಿದ್ದ ಮಳೆ ಮತ್ತೆ ಆಗುವುದಿಲ್ಲ ಎಂದು ಭಾವಿಸಿದ್ದ ಹೊತ್ತಲ್ಲೇ ಏಕಾಏಕಿ ಮಳೆ ಸುರಿದು ಸಾಕಷ್ಟು ಹಾನಿ ಮಾಡಿದೆ. ಶರಾವತಿ ನದಿ ತಟದ ಜನರು ಕಾಳಜಿ ಕೇಂದ್ರ ಸೇರಿದ್ದಾರೆ. ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಭತ್ತದ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಮಳೆ ಮುಗೀತು ಎಂದು ನಿಟ್ಟುಸಿರು ಬಿಡುವಾಗಲೇ ಮಳೆ ಮತ್ತೆ ಅಬ್ಬರಿಸಿ ದೊಡ್ಡ ಮಟ್ಟದ ಹಾನಿ ಉಂಟುಮಾಡಿದೆ. ಕಳೆದ ಹತ್ತು ದಿನದಿಂದ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಕಡಲ ಅಬ್ಬರಕ್ಕೆ ಮೀನುಗಾರರು ನಲುಗಿ ಹೋಗಿದ್ದಾರೆ. ಮಲೆನಾಡಿನ ಬನವಾಸಿಯಲ್ಲಿ ವರದಾ ನದಿ ಉಕ್ಕಿ ಹರಿದ ಪರಿಣಾಮ ನೂರಾರು ಎಕರೆ ಅಡಿಕೆ ಮತ್ತು ಬಾಳೆ ತೋಟ ಹಾನಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ