HOME » NEWS » District » AGAIN EARTH QUAKE IN NARAGUNDA TOWN RHHSN SKG

ನರಗುಂದ ಪಟ್ಟಣದಲ್ಲಿ ಮತ್ತೆ ಮರುಕಳಿಸಿದ ಭೂ ಕುಸಿತ; ಕಾರಣ ತಿಳಿಯದೆ ಕಂಗಾಲಾದ ಜನರು, ತಜ್ಞರು

ನರಗುಂದ ಪಟ್ಟಣ ಹಿಂದಿನ ರಾಜವಂಶಸ್ಥ ಸ್ಥಳವಾದ್ದರಿಂದ ರಾಜ ಮನೆತನದವರು ತಮ್ಮ ಧವಸಧಾನ್ಯಗಳನ್ನು ಸಂಗ್ರಹಿಸಿಡಲು ದೊಡ್ಡ ಹಗೆವುಗಳನ್ನು ನಿರ್ಮಿಸುತ್ತಿದ್ದರಂತೆ. ಮೇಲಾಗಿ ಎರಡ್ಮೂರು ಸಾರಿ ಪ್ರವಾಹ ಬಂದು ಅಂತರ್ಜಲ ಮಟ್ಟ ಹೆಚ್ಚಾಗಿದ್ದು ಹಗೆವುಗಳು ಬಾಯ್ತರೆದು ಇದೀಗ ಭೂಕುಸಿತಕ್ಕೆ ಕಾರಣವಾಗಿರಬಹುದು ಅಂತ ಹೇಳಲಾಗುತ್ತಿದೆ.

news18-kannada
Updated:May 11, 2021, 7:43 AM IST
ನರಗುಂದ ಪಟ್ಟಣದಲ್ಲಿ ಮತ್ತೆ ಮರುಕಳಿಸಿದ ಭೂ ಕುಸಿತ; ಕಾರಣ ತಿಳಿಯದೆ ಕಂಗಾಲಾದ ಜನರು, ತಜ್ಞರು
ಮನೆಯಲ್ಲಿ ಭೂ ಕುಸಿತ ಉಂಟಾಗಿರುವುದು.
  • Share this:
ಗದಗ: ಕೊರೋನಾ ಮಹಾಮಾರಿ ರಾಜ್ಯಾದ್ಯಂತ ತನ್ನ ಆರ್ಭಟ ಮುಂದುವರೆಸಿದೆ. ಸರಕಾರ ಸಹಿತ ಲಾಕ್ಡೌನ್ ಮೇಲೆ ಲಾಕ್ಡೌನ್ ಜಾರಿ ಮಾಡ್ತಿದೆ. ಜನರನ್ನು ಹೊರಗಡೆ ಬಾರದ ಹಾಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಈ ಊರಿನ ಜನರ ಸಂಕಷ್ಟ ಮಾತ್ರ ಹೇಳತೀರದಾಗಿದೆ. ಕಳೆದ ಮೂರ್ನಾಲ್ಕು ವರ್ಷದಿಂದ ಈ ಭಾಗದ ಜನರು ಭೂ ಕುಸಿತದ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಕಾರಣ ತಿಳಿಯಲು ಈವರೆಗೂ ತಜ್ಞರಿಂದಲೂ ಸಾಧ್ಯವಾಗಿಲ್ಲ.

ಹೌದು, ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಮೊದಲೇ ಹೇಳಿದ ಹಾಗೆ ಇಲ್ಲಿನ ಜನರ ಪರಿಸ್ಥಿತಿ ಮನೆಯಲ್ಲಿ ಕೂರುವಂತಿಲ್ಲ, ಹೊರಗಡೆನೂ ಬರುವಂತಿಲ್ಲ. ಹೊರಗೆ ಬಂದ್ರೆ ಪೊಲೀಸರ ಲಾಠಿ ಏಟು. ಮನೆಯಲ್ಲಿ ಇದ್ದರೆ ಭೂಮಿ ಏಟು ಅನ್ನುವಂತಾಗಿದೆ. ಯಾಕೆಂದರೆ ನರಗುಂದ ಪಟ್ಟಣದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಭೂ ಕುಸಿತದ ಸಮಸ್ಯೆ ಅಲ್ಲಿನ ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ ರಾತ್ರಿಯಷ್ಟೇ ಇಲ್ಲಿನ ಕಸಬಾ ಬಡಾವಣೆಯ ಫತ್ತೇಕಾನ್ ಪಠಾಣ ಅನ್ನೋರ ಮನೆಯಲ್ಲಿ ಭೂ ಕುಸಿತ ಉಂಟಾಗಿದೆ. ಫತ್ತೇಕಾನ್ ಮತ್ತು ಅವರ ಪತ್ನಿ ಅಡುಗೆ ಮನೆಯಲ್ಲಿ, ಸಹೋದರ  ಸಹೋದರಿಯರು ಇನ್ನೊಂದು ಕೋಣೆಯಲ್ಲಿ‌ ಮಲಗಿದ್ದರು. ಆದರೆ ಮನೆ ಪಡಸಾಲೆಯಲ್ಲಿ ಮಲಗಿದ್ದ ಫಯಾಜ್, ಮಲ್ಲಿಕಜಾನ್ , ಆಫ್ರೀನ್, ಆಯಾಜ್, ಇರ್ಫಾನ್, ಇಮ್ರಾನ್ ಇವರೆಲ್ಲರೂ ಆದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಟ್ಟು 12 ಕ್ಕೂ ಹೆಚ್ಚು ಸದಸ್ಯರು ಈ‌ ಮನೆಯಲ್ಲಿ ವಾಸವಿದ್ದು ಪಡಸಾಲೆಯಲ್ಲಾದ ಭೂಕುಸಿತಕ್ಕೆ ಸಿಗದೇ ಪಾರಾಗಿದ್ದಾರೆ.

ಇದನ್ನು ಓದಿ: ಮನೆ ಆರೈಕೆಯಲ್ಲಿರುವವರ ಮೇಲೆ ನಿಗಾ ವಹಿಸಬೇಕು, ಬೂತ್ ಮಟ್ಟದಲ್ಲೇ ಮನೆ ಮನೆ ಸರ್ವೆಗೆ ಸಚಿವ ಸುಧಾಕರ್ ಸೂಚನೆ

ಇನ್ನು 12 ಅಡಿ ಅಗಲ, 30 ಅಡಿ ಆಳದಷ್ಟು ಗುಂಡಿ ಪಠಾಣವರ ಮನೆಯಲ್ಲಿ ಬಿದ್ದಿದ್ದು ಪಡಸಾಲೆಯಲ್ಲಿ ಹಾಕಿದ್ದ ಐದಾರು ಪರಸಿ ಕಲ್ಲುಗಳು ಸಹ ಕಿತ್ತು ಮೇಲೆ ಬಂದಿವೆ. ಗುಂಡಿಯಲ್ಲಿ ಅಪಾರ ಪ್ರಮಾಣದ ಕಲುಷಿತ ನೀರು ಸಂಗ್ರಹವಾಗುತ್ತಿದ್ದು ಪಂಪ್​ಸೆಟ್ ಮೂಲಕ ಹೊರಹಾಕೋಕೆ ಹರಸಾಹಸ ಪಡ್ತಿದ್ದಾರೆ. ಈ ರೀತಿಯ ಘಟನೆಗಳು ಇಲ್ಲಿನ ಜನರಿಗೆ ಸಾಮಾನ್ಯವಾಗಿದ್ದು ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸಹ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಹೋಗಿದ್ದಾರೆ. ಆದರೆ ಈವರೆಗೂ ಸಹ ಭೂಕುಸಿತಕ್ಕೆ ಸ್ಪಷ್ಟ ಕಾರಣ ತಿಳಿಯುತ್ತಿಲ್ಲ. ಇಲ್ಲಿನ ಪುರಸಭೆ ಆಡಳಿತ ಮಂಡಳಿ ಈ ಸಮಸ್ಯೆಗೆಂದೇ ಟಾಸ್ಕ್​ ಫೋರ್ಸ್ ಸಮಿತಿ ಮಾಡಿಕೊಂಡಿದ್ದು ಮಳೆಗಾಲ ಆರಂಭವಾದ ತಕ್ಷಣ ಭೂಕುಸಿತ ಪ್ರಾರಂಭವಾಗುತ್ತೆ. ಸರಕಾರ ಈ ಸಮಸ್ಯೆಗೆ ಅಂತಿಮವಾಗಿ ಸೂಕ್ತ ಪರಿಹಾರದ ಕ್ರಮ ಒದಗಿಸಲಿ ಅಂತ ಸ್ವತಃ ಪುರಸಭೆ ಮುಖ್ಯಾಧಿಕಾರಿಗಳೇ ಒತ್ತಾಯಿಸಿದ್ದಾರೆ.
Youtube Video

ಇನ್ನು ನರಗುಂದ ಪಟ್ಟಣ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರ ಕ್ಷೇತ್ರವಾಗಿದ್ದು ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದಾಗ ಈ ಸಮಸ್ಯೆ ಬಗೆಹರಿಸೋಕೆ ಎಲ್ಲ ರೀತಿಯ ಪ್ರಯತ್ನಗಳನ್ನು ಸಹ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ನರಗುಂದ ಪಟ್ಟಣ ಹಿಂದಿನ ರಾಜವಂಶಸ್ಥ ಸ್ಥಳವಾದ್ದರಿಂದ ರಾಜ ಮನೆತನದವರು ತಮ್ಮ ಧವಸಧಾನ್ಯಗಳನ್ನು ಸಂಗ್ರಹಿಸಿಡಲು ದೊಡ್ಡ ಹಗೆವುಗಳನ್ನು ನಿರ್ಮಿಸುತ್ತಿದ್ದರಂತೆ. ಮೇಲಾಗಿ ಎರಡ್ಮೂರು ಸಾರಿ ಪ್ರವಾಹ ಬಂದು ಅಂತರ್ಜಲ ಮಟ್ಟ ಹೆಚ್ಚಾಗಿದ್ದು ಹಗೆವುಗಳು ಬಾಯ್ತರೆದು ಇದೀಗ ಭೂಕುಸಿತಕ್ಕೆ ಕಾರಣವಾಗಿರಬಹುದು ಅಂತ ಹೇಳಲಾಗುತ್ತಿದೆ. ಅದೇನೆ ಇರಲಿ. ಒಂದೆಡೆ ಕೊರೋನಾ ಸಂಕಟ, ಮತ್ತೊಂದೆಡೆ ಭೂ ಕುಸಿತದ ಸಂಕಟ, ಇದರ ಮಧ್ಯೆ ಲಾಕ್ಡೌನ್ ಬೇರೆ. ಒಟ್ಟಾರೆ ನರಗುಂದದ ಜನರಿಗೆ ಮನೆಯಲ್ಲೂ ಇರಲು ಆಗದೇ ಅತ್ತ ಹೊರಗಡೆ ಬರಲು ಆಗದೇ ಭೂ ಕುಸಿತದ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ.

ವರದಿ: ಸಂತೋಷ ಕೊಣ್ಣೂರ
Published by: HR Ramesh
First published: May 11, 2021, 7:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories