ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕನಿಗೆ ಮತ್ತೆ ಆಫ್ರಿಕನ್ ಹುಳಗಳ ಕಾಟ; ಗಮನ ಹರಿಸದ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು

ರಾತ್ರಿ ಹೊತ್ತಿನಲ್ಲೇ ಈ ಹುಳುಗಳು ತಿನ್ನುವ ಕಾಯಕದಲ್ಲಿ ತೊಡಗುತ್ತಿದ್ದು, ಹಗಲಿನಲ್ಲಿ ಈ ಹುಳುಗಳು ತರಗೆಲೆಗಳ ಮಧ್ಯೆ ಅವಿತುಕೊಂಡಿರುತ್ತವೆ. ಪ್ರತೀ ಮಳೆಗಾಲದ ಸಂದರ್ಭದಲ್ಲಿ ಈ ಹುಳಗಳ ಬಾಧೆ ಹೆಚ್ಚಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಈ ಕುರಿತು ಗಮನಹರಿಸಬೇಕಿದೆ.

ರೈತರ ಬೆಳೆ ತಿನ್ನುತ್ತಿರುವ ಆಫ್ರಿಕನ್ ಹುಳ.

ರೈತರ ಬೆಳೆ ತಿನ್ನುತ್ತಿರುವ ಆಫ್ರಿಕನ್ ಹುಳ.

  • Share this:
ಪುತ್ತೂರು; ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರ ತೋಟಗಳಿಗೆ ರಾಕ್ಷಸನಾಗಿ ಕಾಡುತ್ತಿರುವ ಆಫ್ರಿಕಲ್ ದೈತ್ಯ ಹುಳಗಳ ಕಂಟಕ ಇದೀಗ ಮತ್ತೆ ಕಾಡಲಾರಂಭಿಸಿದೆ. ಈ ಹುಳುಗಳು ಪುತ್ತೂರು ತಾಲೂಕಿನ ನೂರಾರು ಎಕರೆಗೂ ಮಿಕ್ಕಿದ ಫಸಲುಭರಿತ ತೋಟಗಳನ್ನು ಈಗಾಗಲೇ ಆವರಿಸಿಕೊಂಡಿದ್ದು, ಬೆಳೆಯ ಅರ್ಧ ಭಾಗವನ್ನು ಈ ಹುಳುಗಳಿಗೇ ಬಿಟ್ಟುಕೊಡಬೇಕಾದ ಪರಿಸ್ಥಿತಿಯಿದೆ.

ಪ್ರತೀ ಮಳೆಗಾಲದ ಸಂದರ್ಭದಲ್ಲಿ ಕೃಷಿಕನನ್ನು ಕಾಡುವ ಈ ಹುಳುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾದ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಮಾತ್ರ ಈ ಬಗ್ಗೆ ಪರಿಣಾಮಕಾರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವುದು ಕೃಷಿಕರ ಆರೋಪವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಹಾಗೂ ಕಡಬ ತಾಲೂಕಿನ ಬಹುತೇಕ ತೋಟಗಳಲ್ಲಿ ಕಾಣಸಿಗುವ ಆಫ್ರಿಕನ್ ದೈತ್ಯ ಹುಳುಗಳು ಆ ಭಾಗದ ಕೃಷಿಕನನ್ನು ಹೈರಾಣಾಗಿಸಿದೆ. ತೋಟದಲ್ಲಿ ಬಗೆದಷ್ಟೂ ಸಿಗುತ್ತಿದ್ದ ಆಫ್ರಿಕನ್ ಜೈಂಟ್ ಹುಳುಗಳು ಇದೀಗ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ವಲಸೆ ಹೋಗಲು ಆರಂಭಿಸಿವೆ. ಆಫ್ರಿಕಾ ಮೂಲದ ಈ ಹುಳುಗಳು ಕಳೆದ ನಾಲ್ಕೈದು ವರ್ಷಗಳಿಂದೀಚೆಗೆ ಕೃಷಿಕನ ತೋಟಗಳಿಗೆ ನುಗ್ಗಿ ತೋಟದಲ್ಲಿರುವ ಅಡಿಕೆ, ಬಾಳೆ, ಕರಿಮೆಣಸು, ತರಕಾರಿಗಳು ಹೀಗೆ 500ಕ್ಕೂ ಮಿಕ್ಕಿದ ಸಸ್ಯಗಳನ್ನು ತಿಂದು ಮುಗಿಸುತ್ತಿದೆ. ರಾತ್ರಿ ಸಂದರ್ಭದಲ್ಲೇ ಹೆಚ್ಚಾಗಿ ತನ್ನ ಕಾರ್ಯಚಟುವಟಿಕೆ ಆರಂಭಿಸುವ ಸಾವಿರಾರು ಸಂಖ್ಯೆಯ ಈ ಹುಳುಗಳು ಬೆಳಗ್ಗೆ ಆಗುತ್ತಿದ್ದಂತೆ ಸಣ್ಣ ಪುಟ್ಟ ಗಿಡಗಳನ್ನು ಅಪೋಷಣ ಮಾಡುತ್ತಿದೆ.

ಆಫ್ರಿಕಾದಿಂದ ಆಮದು ಮಾಡಿರುವಂತಹ ಮರದ ದಿಮ್ಮಿಗಳ ಮೂಲಕ ಈ ಹುಳುಗಳು ಜಿಲ್ಲೆಗೆ ಬಂದಿರುವ ಸಾಧ್ಯತೆಯಿದ್ದು, ಇದೀಗ ಈ ಹುಳುಗಳು ಕೃಷಿಕನ ತೋಟವನ್ನೇ ತನ್ನ ಮೂಲಸ್ಥಾನವನ್ನಾಗಿ ಮಾಡಿಕೊಂಡಿವೆ. ಅಡಿಕೆ ಮರ, ತರಕಾರಿ, ಬಾಳೆ ಗಿಡ ಹೀಗೆ ಯಾವುದನ್ನೂ ಬಿಡದೆ ತಿನ್ನುತ್ತಿರುವ ಈ ಹುಳುಗಳಿಂದ ಕೃಷಿಕನನ್ನು ಮುಕ್ತ ಮಾಡಬೇಕೆಂದು ಹಲವು ಬಾರಿ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಿಗೆ ಮನವಿ ಮಾಡಿದರೂ, ಇಲಾಖೆಗಳ ವತಿಯಿಂದ ಈ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳಲಾಗಿಲ್ಲ. ಹುಳುಗಳ ಬಾಧೆ ಜಾಸ್ತಿಯಾದಾಗ ಕೇವಲ ತೋಟಗಳ ಭೇಟಿಗಷ್ಟೇ ಅಧಿಕಾರಿಗಳ ಕರ್ತವ್ಯ ಮುಗಿಯುವಂತಹ ವ್ಯವಸ್ಥೆ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಹೆಚ್ಚಾಗಿ ಈ ಹುಳುಗಳು ನದಿ ತೀರದಲ್ಲಿರುವಂತಹ ತೋಟಗಳನ್ನೇ ಗುರಿ ಮಾಡುತ್ತಿದ್ದು, ನದಿ ನೀರಿನಲ್ಲಿ ಹರಿದು ಬಂದಿರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಇದನ್ನು ಓದಿ: Karnataka Health Bulletin: ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 213 ಹೊಸ ಕೊರೋನಾ ಪ್ರಕರಣಗಳ ಪತ್ತೆ, ಇಬ್ಬರ ಸಾವು!

ಪುತ್ತೂರು ಹಾಗೂ ಕಡಬ ತಾಲೂಕಿನ ಅಲಂಗಾರು, ವಳಾಲು, ನೆಕ್ಕಿಲ್ಲಾಡಿ ಪರಿಸರದ ಹಲವು ತೋಟಗಳಲ್ಲಿ ಈ ಹುಳುಗಳ ಬಾಧೆ ಕಾಣಿಸಿಕೊಂಡಿದೆ. ಲಕ್ಷಾಂತರ ಸಂಖ್ಯೆಯಲ್ಲಿ ತೋಟದಲ್ಲಿ ಕಾಣಿಸಿಕೊಳ್ಳುವ ಈ ಹುಳುಗಳ ನಿಯಂತ್ರಣವೂ ಕಷ್ಟ ಸಾಧ್ಯವಾಗಿದೆ. ಪ್ರತೀ ಹುಳುಗಳನ್ನು ಆಯ್ದು, ಅವುಗಳನ್ನು ಉಪ್ಪು ಮಿಶ್ರಿತ ನೀರಿನಲ್ಲಿ ಹಾಕಿದಲ್ಲಿ ಮಾತ್ರ ಈ ಹುಳುಗಳು ಸಾಯುತ್ತಿದೆ. ಆದರೆ ಕೃಷಿ ಕೆಲಸದ ನಡುವೆ ಪ್ರತೀ ಹುಳುಗಳನ್ನು ಆಯ್ದು, ಕೊಲ್ಲುವುದು ಹೇಗೆ ಎನ್ನುವ ಪ್ರಶ್ನೆಯೂ ಕಾಡಲಾರಂಭಿಸಿದೆ. ರಾತ್ರಿ ಹೊತ್ತಿನಲ್ಲೇ ಈ ಹುಳುಗಳು ತಿನ್ನುವ ಕಾಯಕದಲ್ಲಿ ತೊಡಗುತ್ತಿದ್ದು, ಹಗಲಿನಲ್ಲಿ ಈ ಹುಳುಗಳು ತರಗೆಲೆಗಳ ಮಧ್ಯೆ ಅವಿತುಕೊಂಡಿರುತ್ತವೆ. ಪ್ರತೀ ಮಳೆಗಾಲದ ಸಂದರ್ಭದಲ್ಲಿ ಈ ಹುಳಗಳ ಬಾಧೆ ಹೆಚ್ಚಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಈ ಕುರಿತು ಗಮನಹರಿಸಬೇಕಿದೆ.
First published: