• Home
  • »
  • News
  • »
  • district
  • »
  • ವಿಜಯನಗರ ಬೆನ್ನಲ್ಲೇ ಚಿಕ್ಕೋಡಿ ಜಿಲ್ಲೆಗೆ ಹೆಚ್ಚಿದ ಒತ್ತಡ; ಜಿಲ್ಲೆಗಾಗಿ ಮತ್ತೊಂದು ಸುತ್ತಿನ ಹೋರಾಟದ ಎಚ್ಚರಿಕೆ

ವಿಜಯನಗರ ಬೆನ್ನಲ್ಲೇ ಚಿಕ್ಕೋಡಿ ಜಿಲ್ಲೆಗೆ ಹೆಚ್ಚಿದ ಒತ್ತಡ; ಜಿಲ್ಲೆಗಾಗಿ ಮತ್ತೊಂದು ಸುತ್ತಿನ ಹೋರಾಟದ ಎಚ್ಚರಿಕೆ

ಜಿಲ್ಲಾ ಹೋರಾಟ ಸಮಿತಿ

ಜಿಲ್ಲಾ ಹೋರಾಟ ಸಮಿತಿ

ಮೊದಲು ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಿ ನಂತರ ವಿಜಯನಗರ ಜಿಲ್ಲೆ ಮಾಡಿ ಎಂದು ಜಿಲ್ಲಾ ಹೋರಾಟ ಸಮಿತಿ ಆಕ್ರೋಶ ಹೊರ ಹಾಕಿದೆ.

  • Share this:

ಚಿಕ್ಕೋಡಿ(ನವೆಂಬರ್​. 19): ಬಳ್ಳಾರಿ ಜಿಲ್ಲೆಯನ್ನ ವಿಭಜನೆ ಮಾಡಿ ನೂತನವಾಗಿ ವಿಜಯನಗರ ಜಿಲ್ಲೆ ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸುತ್ತಿದ್ದಂತೆ. ವಿಜಯನಗರ ಜಿಲ್ಲೆಗೆ ಚಿಕ್ಕೋಡಿಯಲ್ಲಿ ವಿರೋಧ ವ್ಯಕ್ತವಾಗಿದೆ. ಜಿಲ್ಲೆ ಮಾಡುವುದಾದರೆ ಮೊದಲು ಚಿಕ್ಕೋಡಿ ಜಿಲ್ಲೆ ಮಾಡಿ ಇಲ್ಲವಾದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನೀಡಿದೆ. ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆ ಎನ್ನುವ ಹೆಗ್ಗಳಿಕೆ ಹೊಂದಿದಂತಹ ಜಿಲ್ಲೆ 18 ವಿಧಾನಸಭಾ, ಎರಡು ಲೋಕಸಭಾ ಕ್ಷೇತ್ರ ಹೊಂದಿರುವ ಜಿಲ್ಲೆ 250 ಕಿಲೋ ಮೀಟರ್‌ ವ್ಯಾಪ್ತಿಯನ್ನ ಹೊಂದಿದೆ. ಆಡಳಿತ ದೃಷ್ಟಿಯಿಂದ ಜಿಲ್ಲೆ ವಿಭಜನೆ ಮಾಡಬೇಕು ಎನ್ನುವ ಕೂಗು ಕಳೆದ 20 ವರ್ಷಗಳಿಂದ ಕೇಳುತ್ತಲೆ ಇದೆ. ಇದಕ್ಕಾಗಿ ಹಲವು ಬಾರಿ ಹೋರಾಟಗಳು ನಡೆದಿವೆ. ಹಲವು ರಾಜಕೀಯ ನಾಯಕರು ಸಹ ತಮ್ಮ ಹಿತಾಸಕ್ತಿಗಾಗಿ ಚುನಾವಣೆ ಬಂದಂತಹ ಸಂದರ್ಭದಲ್ಲಿ ಜಿಲ್ಲೆ ಮಾಡುವ ಭರವಸೆ ನೀಡಿ ಚುನಾವಣೆ ಬಳಿಕ ಮರೆತು ಬಿಡುತ್ತಾರೆ. ಆದರೆ, ಜಿಲ್ಲೆಯ ಕನಸು ಮಾತ್ರ 20 ವರ್ಷಗಳಿಂದಲು ಕನಸಾಗಿಯೆ ಉಳಿದಿದೆ.


ಈಗಾಗಲೇ ಚಿಕ್ಕೋಡಿ ಜಿಲ್ಲಾ ಆಗಲು ಎಲ್ಲಾ ಅರ್ಹತೆಯನ್ನು ಹೊಂದಿದ ಕ್ಷೇತ್ರವಾಗಿದೆ. ಎಲ್ಲಾ ಜಿಲ್ಲಾ ಮಟ್ಟದ ಕಾರ್ಯಾಲಯಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸರ್ಕಾರ ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಕನಸು ನನಸಾಗುತ್ತಿಲ್ಲ. ಹಾಗಾಗಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಮತ್ತೊಮ್ಮೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.


ವಿಜಯನಗರ ಜಿಲ್ಲೆ ರಚನೆಗೆ ನಿರ್ಧಾರ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯನ್ನ ವಿಭಜನೆ ಮಾಡಿ ಚಿಕ್ಕೋಡಿ ಜಿಲ್ಲೆ ರಚನೆ ಮಾಡುವಂತೆ ಕೂಗು ಎದ್ದಿದೆ. ಬರೀ ಒಬ್ಬ ಶಾಸಕರು ಹೇಳಿದ ಮಾತ್ರಕ್ಕೆ ವಿಜಯನಗರ ಜಿಲ್ಲೆ ರಚನೆಗೆ ಮುಂದಾಗಿರುವ ಸರ್ಕಾರದ ವಿರುದ್ದ ಚಿಕ್ಕೋಡಿಯಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮೊದಲು ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಿ ನಂತರ ವಿಜಯನಗರ ಜಿಲ್ಲೆ ಮಾಡಿ ಎಂದು ಜಿಲ್ಲಾ ಹೋರಾಟ ಸಮಿತಿ ಆಕ್ರೋಶ ಹೊರ ಹಾಕಿದೆ.


ಕಳೆದ ಎರಡು ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬಿಜೆಪಿ ಶಾಸಕರು ಪ್ರಧಾನಿ ನರೇಂದ್ರ ಮೋದಿಯವರ ಎದುರಿಗೆ ಜಿಲ್ಲೆ ಮಾಡುವ ಭರವಸೆ ಕೊಟ್ಟಿದ್ದರು. ಆದರೆ, ಈಗ ಅದನ್ನ ಮರೆತಿದ್ದಾರೆ. ಸಚಿವ ಆನಂದ್ ಸಿಂಗ್ ಒಬ್ಬರಿಗೊಸ್ಕರ ಬಳ್ಳಾರಿ ಜಿಲ್ಲೆಯನ್ನ ಸರ್ಕಾರ ಒಡೆಯಲು ಮುಂದಾಗಿದೆ. ವಿಜಯನಗರ ಜಿಲ್ಲೆ ಮಾಡುವುದಾದರೆ ಮೊದಲು ಚಿಕ್ಕೋಡಿ ಜಿಲ್ಲೆ ಮಾಡಿ ಬಳಿಕ ವಿಜಯನಗರ ಮಾಡಿ ಇಲ್ಲದಿದ್ದರೆ ಮಾಡಬೇಡಿ ಎಂದಿದ್ದಾರೆ. ಡಿಸೆಂಬರ್ ವರೆಗೂ ಗಡುವು ನೀಡಿರುವ ಹೋರಾಟ ಸಮಿತಿ ಜಿಲ್ಲೆ ಮಾಡದೆ ಇದ್ರೆ ಉಗ್ರ ಹೋರಾಟ ಮಾಡುವುದಾಗಿ ಹೇಳಿದೆ.


ಇದನ್ನೂ ಓದಿ : ನಿಗಮ ಸ್ಥಾಪನೆಗೆ ಸ್ವಾಗತ; ವೀರಶೈವ ಲಿಂಗಾಯಿತರಿಗೆ 2ಎ ಮೀಸಲಾತಿಯನ್ನೂ ನೀಡಿ ಎಂದ್ರು ಕಾಂಗ್ರೆಸ್ ಶಾಸಕ


2018 ರಲ್ಲಿ ಜಿಲ್ಲೆಗಾಗಿ ಸತತ 52 ದಿನಗಳ ವರೆಗೆ ಪ್ರತಿಭಟನೆ ನಡೆಸಿದಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು ಅಂದು ಬಿಜೆಪಿಯ ಶಾಸಕರು ಹಾಗೂ ನಾಯಕರು ಬಂದು ಬಿಜೆಪಿ ಸರ್ಕಾರ ಬಂದ್ರೆ ಚಿಕ್ಕೋಡಿ ಜಿಲ್ಲೆ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಅಲ್ಲದೇ ಲೋಕಸಭಾ ಚುನಾವಣೆ ಬಂದಾಗ ಒಂದು ಲಕ್ಷ ಇರುವಾಗ ಚಿಕ್ಕೋಡಿಯಲ್ಲಿ ನರೇಂದ್ರ ಮೋದಿಯವರ ಎದುರಲ್ಲೆ ಬಿಜೆಪಿ ಅಭ್ಯರ್ಥಿಯಲ್ಲಿ ಗೆಲ್ಲಿಸಿದ್ರೆ ಚಿಕ್ಕೋಡಿ ಜಿಲ್ಲೆ ಮಾಡುವ ಮಾತು ಕೊಟ್ಟು ಈಗ ಮರೆತಿದ್ದಾರೆ. ಕೂಡಲೆ ನಮ್ಮ ಜಿಲ್ಲೆಯ ಶಾಸಕರು ಜಿಲ್ಲಾ ರಚನೆಗೆ ಮುಂದಾಗದೆ ಇದ್ದಲ್ಲಿ ನಿಮಗೆ ಬಳೆ ತೊಡಿಸುವ ಪರಿಸ್ಥಿತಿ ಬರುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.


ಒಟ್ಟಿನಲ್ಲಿ ಕಳೆದ 20 ವರ್ಷಗಳಿಂದಲೂ ಚಿಕ್ಕೋಡಿ ಜಿಲ್ಲೆಗಾಗಿ ಜನ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ, ಪ್ರಯೋಜನ ಮಾತ್ರ ಆಗಿಲ್ಲ. ವಿಜಯನಗರ ಜಿಲ್ಲೆ ಬೆನ್ನಲ್ಲೇ ಈಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಜಿಲ್ಲಾ ಹೋರಾಟ ಸಮಿತಿ ಮುಂದಾಗಿದ್ದು, ಜನ ಪ್ರತಿನಿಧಿಗಳ ಮನೆಗಳ ಮುಂದೆಯೇ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

Published by:G Hareeshkumar
First published: