ಭೀಮೆಯ ದಡದಲ್ಲಿ ದಿಢೀರ್ ಬಂದ್ ಆದ ಕಾಳಜಿ ಕೇಂದ್ರಗಳು ; ಮನೆಗಳತ್ತ ಮುಖ ಮಾಡಿದ ಸಂತ್ರಸ್ತರು

ಪ್ರವಾಹ ಒಂದಷ್ಟು ಇಳಿದಿದೆಯಾದರು ಪೂರ್ಣ ಪ್ರಮಾಣದಲ್ಲಿ ಇಳಿದಿಲ್ಲ. ಇಷ್ಟರ ನಡುವೆಯೇ ಜಿಲ್ಲಾಡಳಿತ ಬಹುತೇಕ ಕಡೆ ಕಾಳಜಿ ಕೇಂದ್ರ ಬಂದ್ ಮಾಡಿದೆ.

news18-kannada
Updated:October 22, 2020, 7:49 PM IST
ಭೀಮೆಯ ದಡದಲ್ಲಿ ದಿಢೀರ್ ಬಂದ್ ಆದ ಕಾಳಜಿ ಕೇಂದ್ರಗಳು ; ಮನೆಗಳತ್ತ ಮುಖ ಮಾಡಿದ ಸಂತ್ರಸ್ತರು
ಮನೆಗಳತ್ತ ಮುಖ ಮಾಡಿದ ಸಂತ್ರಸ್ತರು
  • Share this:
ಕಲಬುರ್ಗಿ(ಅಕ್ಟೋಬರ್​. 22): ಭೀಮಾ ನದಿ ವ್ಯಾಪ್ತಿಯಲ್ಲಿ ಪ್ರವಾಹ ಇನ್ನೂ ಸಂಪೂರ್ಣವಾಗಿ ಇಳಿಮುಖವಾಗಿಲ್ಲ. ಸದ್ಯಕ್ಕೆ 1.50 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ನೀರು ನದಿಯಲ್ಲಿ ಹರಿಯುತ್ತಿದೆ. ಹೀಗಿರುವಾಗಲೇ ಕಾಳಜಿ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಭೀಮಾ ನದಿಗೆ ಹೊಂದಿಕೊಂಡ ಗ್ರಾಮಗಳ ಸಂತ್ರಸ್ತರಿಗೆಂದು ಆರಂಭಿಸಿದ್ದ ಬಹುತೇಕ ಗಂಜಿ ಕೇಂದ್ರಗಳು ಬಂದ್ ಆಗಿವೆ. ಇದರಿಂದಾಗಿ ಅನಿವಾರ್ಯವಾಗಿ ಸಂತ್ರಸ್ತರು ಮನೆ ಕಡೆ ಮುಖಮಾಡಿದ್ದಾರೆ. ಇನ್ನೆರಡು ದಿನಗಳಾದರು ಊಟ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸಂತ್ರಸ್ತರು ಅಲವತ್ತುಕೊಂಡಿದ್ದಾರೆ. ಭೀಮಾ ನದಿ ಅಬ್ಬರಕ್ಕೆ ಕಲಬುರ್ಗಿ ಜಿಲ್ಲೆ ತತ್ತರಗೊಂಡಿದೆ. ಭೀಮಾ ನದಿಗೆ ಕೊಚ್ಚಿಕೊಂಡು ಹೋಗಿರುವ ಬದುಕನ್ನು ತಕ್ಷಣಕ್ಕೆ ಕಟ್ಟಿಕೊಳ್ಳುವ ದುಸ್ಸಾಧ್ಯ ಎಂಬುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಭೀಮಾ ನದಿ ದಂಡೆಯಲ್ಲಿ ಬರುವ 157 ಗ್ರಾಮಗಳ ಪೈಕಿ 92 ಗ್ರಾಮಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಹತ್ತಾರು ಗ್ರಾಮಗಳು ಜಲಾವೃತಗೊಂಡು, ಸಾವಿರಾರು ಮನೆಗಳಿಗೆ ನೀರು ನುಗ್ಗಿ ಜನ ಸಂಕಷ್ಟಕ್ಕೆ ಗುರಿಯಾಗುವಂತಾಗಿತ್ತು.

ದಾಖಲೆ ಪ್ರಮಾಣದಲ್ಲಿ 8.50 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ನೀರು ಬಿಟ್ಟಿದ್ದರಿಂದ ಕಲಬುರ್ಗಿ ಜಿಲ್ಲೆಯಲ್ಲಿ ಜನ ತೀವ್ರ ಸಂಕಷ್ಟಕ್ಕೆ ಗುರಿಯಾಗುವಂತಾಗಿತ್ತು. ನೆರೆ ಸಂತ್ರಸ್ತರಿಗಾಗಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಸುಮಾರು 160 ಕಾಳಜಿ ಕೇಂದ್ರ ಅಸ್ತಿತ್ವಕ್ಕೆ ತರಲಾಗಿತ್ತು. 23 ಸಾವಿರಕ್ಕೂ ಅಧಿಕ ಜನರಿಗೆ ಪುನರ್ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರವಾಹ ಒಂದಷ್ಟು ಇಳಿದಿದೆಯಾದರು ಪೂರ್ಣ ಪ್ರಮಾಣದಲ್ಲಿ ಇಳಿದಿಲ್ಲ. ಇಷ್ಟರ ನಡುವೆಯೇ ಜಿಲ್ಲಾಡಳಿತ ಬಹುತೇಕ ಕಡೆ ಕಾಳಜಿ ಕೇಂದ್ರ ಬಂದ್ ಮಾಡಿದೆ.

ಕೋಡಿ ಗ್ರಾಮದಲ್ಲಿದ್ದ ಮೂರೂ ಕಾಳಜಿ ಕೇಂದ್ರಗಳನ್ನು ಇಂದು ಬೆಳಿಗ್ಗೆಯಿಂದಲೇ ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯ ಇತರೆ ಕಾಳಜಿ ಕೇಂದ್ರದಗಳ ಸ್ಥಿತಿಯೂ ಇದೇ ಆಗಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬಂದ್ ಮಾಡಿರುವುದಾಗಿ ಕೆಳ ಹಂತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಕಾಳಜಿ ಕೇಂದ್ರ ಬಂದ್ ಮಾಡಿದ್ದರ ಪರಿಣಾಮ ಸಂತ್ರಸ್ತರು ಅನಿವಾರ್ಯವಾಗಿ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ : Mysore Dasara 2020: ಜಂಬೂ ಸವಾರಿಗೆ ತಾಲೀಮು ಈ ಬಾರಿ 300 ಮೀಟರ್ ಮಾತ್ರ ಮೆರವಣಿಗೆ

ಪ್ರವಾಹ ನೀರು ನುಗ್ಗಿ ಮನೆಗಳಲ್ಲಿದ್ದ ಆಹಾರ ಧಾನ್ಯ ಕೊಳತು ಹೋಗಿದೆ. ಮನೆಯಲ್ಲವೂ ರಾಡಿ ರಾಡಿಯಾಗಿದೆ. ಪ್ರವಾಹ ಇಳಿಮುಖವಾಗಿದ್ದರೂ ಅಡುಗೆ ಮಾಡಲಾರದ ಸ್ಥಿತಿ ಇದೆ. ಸ್ವಚ್ಛ ಮಾಡಿಕೊಳ್ಳಲೇ ನಮಗೆ ಎರಡು-ಮೂರು ದಿನ ಬೇಕು. ಇನ್ನು ಮನೆಯಲ್ಲಿದ್ದ ಆಹಾರ ಧಾನ್ಯಗಳೇ ನೀರು ಪಾಲಾಗಿರುವಾಗ ಹೊಸದನ್ನು ಖರೀದಿಸಬೇಕಿದೆ. ಇಂತಹ ದಯನೀಯ ಸ್ಥಿತಿ ಇರುವಾಗ ಇನ್ನೂ ಒಂದೆರಡು ದಿನ ಕಾಳಜಿ ಕೇಂದ್ರದಲ್ಲಿ ಊಟ ಹಾಕಿದ್ದರೆ ತುಂಬಾ ಉಪಕಾರವಾಗುತ್ತಿತ್ತು ಎಂದು ಜೇವರ್ಗಿ ತಾಲೂಕಿನ ಕೋಬಾಳ ಗ್ರಾಮದ ಸಂತ್ರಸ್ತೆ ಹೀರಾಬಾಯಿ ಮತ್ತು ನಿಲಗಂಗಾ ಅಲವತ್ತುಕೊಂಡಿದ್ದಾರೆ.

ಕಾಳಜಿ ಕೇಂದ್ರಗಳಲ್ಲಿ ಆರಂಭದಲ್ಲಿ ಅಸ್ತವ್ಯಸ್ತಗೊಂಡರೂ ನಂತರದಲ್ಲಿ ಕೆಲವೆಡೆ ಪರಿಸ್ಥಿತಿ ಸುಧಾರಿಸಿತ್ತು. ದಿನಕ್ಕೆರಡು ಬಾರಿಯಾದರು ಊಟ ಸಿಗುತ್ತಿತ್ತು. ಆದರೆ, ಈಗ ನಮಗೆ ಆಸರೆಯಾಗಿದ್ದ ಕೇಂದ್ರವನ್ನೇ ಮುಚ್ಚಲಾಗಿದೆ. ಅನಿವಾರ್ಯವಾಗಿ ನಾವು ಮನೆಗಳಿಗೆ ಹೋಗುತ್ತಿದ್ದೇವೆ. ಉಪವಾಸವೋ, ವನವಾಸವೋ ಅಲ್ಲಿಯೇ ಕಳೆಯುತ್ತೇವೆ ಎನ್ನುತ್ತಿದ್ದಾರೆ ಸಂತ್ರಸ್ತರು. ಒಟ್ಟಾರೆ ಕಾಳಜಿ ಕೇಂದ್ರಗಳಿಗೆ ಬೀಗ ಜಡಿಯಲಾಗಿದ್ದು, ಸಂತ್ರಸ್ತರ ಕೂಗನ್ನು ಕೇಳುವವರೇ ಇಲ್ಲದಂತಾಗಿದೆ.
Published by: G Hareeshkumar
First published: October 22, 2020, 7:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading