ಡಿಕೆಶಿ ನಂತರ ಕಟೀಲ್ ಚಿತ್ತ ಕಲ್ಯಾಣ ಕರ್ನಾಟಕದತ್ತ ; ಪಕ್ಷ ಸಂಘಟನೆ ಮುಂದಾದ ಕಮಲ ಪಡೆ

ನಾಳೆಯಿಂದ ಎರಡು ದಿನಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಲ್ಯಾಣ ಕರ್ನಾಟಕದ ಪ್ರವಾಸ ಕೈಗೊಂಡಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರನ್ನು ಭೇಟಿಯಾಗಿ, ಸಭೆ ನಡೆಸಲು ಮುಹೂರ್ತ ನಿಗಧಿ ಮಾಡಲಾಗಿದೆ.

news18-kannada
Updated:August 26, 2020, 6:50 PM IST
ಡಿಕೆಶಿ ನಂತರ ಕಟೀಲ್ ಚಿತ್ತ ಕಲ್ಯಾಣ ಕರ್ನಾಟಕದತ್ತ ; ಪಕ್ಷ ಸಂಘಟನೆ ಮುಂದಾದ ಕಮಲ ಪಡೆ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್
  • Share this:
ಕಲಬುರ್ಗಿ(ಆಗಸ್ಟ್​. 26): ಕೊರೋನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ರಾಜಕೀಯ ಚಟುವಟಿಕೆಗಳು ನಿಧಾನವಾಗಿ ಗರಿಗೆದರಲು ಆರಂಭಿಸಿವೆ. ಒಬ್ಬೊಬ್ಬರಾಗಿ ರಾಜಕೀಯ ಪ್ರವಾಸ ಆರಂಭಿಸಿದ್ದು, ತಮ್ಮ ತಮ್ಮ ಪಕ್ಷದ ಸಂಘಟನೆಗೆ ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ನಂತರ ಇತ್ತೀಚೆಗಷ್ಟೇ ಡಿ.ಕೆ.ಶಿವಕುಮಾರ್ ಕಲಬುರ್ಗಿಗೆ ಭೇಟಿ ನೀಡಿ, ಕಲ್ಯಾಣ ಕರ್ನಾಟಕದ ಪಕ್ಷದ ಸಂಘಟನೆ ಕುರಿತು ಸಮಾಲೋಚಿಸಿದ್ದರು. ಕೈ ಪಡೆಯ ನಂತರ ಇದೀಗ ಕಮಲ ಪಡೆಯೂ ಪಕ್ಷ ಸಂಘಟನೆಗೆ ಮುಂದಾಗಿದೆ. ಕಲಬುರ್ಗಿ ವಿಭಾಗದತ್ತ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಚಿತ್ತ ನೆಟ್ಟಿದೆ. ಕಮಲ ಪಡೆ ಈ ಭಾಗದ ಪಕ್ಷ ಸಂಘಟನೆಗೆ ಚುರುಕುಗೊಳಿಸಲು ಮುಂದಾಗಿದೆ.

ನಾಳೆಯಿಂದ ಎರಡು ದಿನಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಲ್ಯಾಣ ಕರ್ನಾಟಕದ ಪ್ರವಾಸ ಕೈಗೊಂಡಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರನ್ನು ಭೇಟಿಯಾಗಿ, ಸಭೆ ನಡೆಸಲು ಮುಹೂರ್ತ ನಿಗಧಿ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಂದು ಹೋದ ಬೆನ್ನಲ್ಲೇ ಕಟೀಲು ಪ್ರವಾಸ ಕೈಗೊಂಡಿರುವುದು ವಿಶೇಷ. ಕಲಬುರ್ಗಿ ಜೊತೆ ಬೀದರ್ ರಾಯಚೂರು ಯಾದಗಿರಿಯಲ್ಲೂ ಕಟೀಲು ಪ್ರವಾಸ ಕೈಗೊಂಡಿದ್ದಾರೆ ಎಂದು ಶಾಸಕ ಹಾಗು ಬಿಜೆಪಿ ವಿಭಾಗೀಯ ಪ್ರಭಾರಿ ರಾಜಕುಮಾರ ಪಾಟೀಲ ತೇಲ್ಕೂರ ಮಾಹಿತಿ ನೀಡಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿರುವ ತೇಲ್ಕೂರ, ಬಿಜೆಪಿ ರಾಜ್ಯಾಧ್ಯಕ್ಷರ ಪ್ರವಾಸದ ಮಾಹಿತಿ ನೀಡಿದ್ದಾರೆ. ನಾಳೆ ರಾಯಚೂರು ಹಾಗೂ ಯಾದಗಿರಿಗಳಲ್ಲಿ ಪ್ರವಾಸ ಕೈಗೊಂಡು, ರಾತ್ರಿ ಕಲಬುರ್ಗಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಆಗಸ್ಟ್​​ 28 ರಂದು ಕಲಬುರ್ಗಿಯಲ್ಲಿ ಬಿಜೆಪಿ ಕಛೇರಿಯಲ್ಲಿ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ ಕಲಬುರ್ಗಿ ಗ್ರಾಮಿಣ ಮತ ಕ್ಷೇತ್ರದ ಕಮಲಾಪುರದಲ್ಲಿ ಸಭೆ ನಡೆಸಿ ಪಕ್ಷ ಸಂಘಟನೆ ಹಾಗೂ ಈ ಭಾಗದ ಅಭಿವೃದ್ಧಿ ಕುರಿತು ಚರ್ಚಿಸಲಿದ್ದಾರೆ.‌ ಬಳಿಕ ಬೀದರ್ ಕಡೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಹಿಂದಿನ ಸಿಎಂ ನೀಡಿದ ಅನುದಾನವನ್ನು ನಮ್ಮ ಸಿಎಂ ತಡೆ ಹಿಡಿದಿದ್ದಾರೆ ; ಸಚಿವ ಅಶೋಕ್​​ ಎದುರು ಯತ್ನಾಳ ಅತೃಪ್ತಿ

ರಾಜ್ಯಾಧ್ಯಕ್ಷರಾಗಿ ಒಂದು ವರ್ಷದ ಪೂರೈಸಿದ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಗ್ರಾಮ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕುರಿತು ಸಮಾಲೋಚಿಸಲಾಗುವುದು. ಕೊರೋನಾ ಹಿನ್ನೆಲೆಯಲ್ಲಿ ಯಾವುದೇ ಬಹಿರಂಗ ಸಭೆಗಳನ್ನು ನಡೆಸುತ್ತಿಲ್ಲ. ಪಕ್ಷದ ಕಛೇರಿಗಳಲ್ಲಿ ಬಿಜೆಪಿಯ ಪ್ರಮುಖರ ಸಭೆ ನಡೆಸಲಾಗುವುದು. ಪಕ್ಷದ ಸಂಘಟನೆ, ಕೊರೋನಾ ನಿಯಂತ್ರಣಕ್ಕೆ ಪಕ್ಷದ ಕಾರ್ಯಕರ್ತರು ಕೈಗೊಳ್ಳಬೇಕಿರುವ ವಿಷಯಗಳ ಕುರಿತು ಸಮಾಲೋಚಿಸುವುದಾಗಿ ರಾಜಕುಮಾರ ಪಾಟೀಲ ತೇಲ್ಕೂರ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ರಾಜ್ಯದ ಎರಡು ಪ್ರಮುಖ ಪಕ್ಷಗಳ ರಾಜ್ಯಾಧ್ಯಕ್ಷರ ಕಣ್ಣು ಕಲ್ಯಾಣ ಕರ್ನಾಟಕದತ್ತ ನೆಟ್ಟಿದೆ. ಒಬ್ಬರ ನಂತರ ಮತ್ತೊಬ್ಬರು ಪ್ರವಾಸ ಕೈಗೊಂಡು ತಮ್ಮ ಪಕ್ಷವನ್ನು ಬಲಪಡಿಸಲು ಮುಂದಾಗಿದ್ದಾರೆ. ಕೊರೋನಾ ಸಂದರ್ಭದಲ್ಲಿಯೂ ಪಕ್ಷವನ್ನು ಗಟ್ಟಿಗೊಳಿಸುವ ಮೂಲಕ ಮುಂದೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಖಂಡರನ್ನು ಸನ್ನದ್ಧಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕಟೀಲ್ ಸ್ವಾಗತಕ್ಕೆ ತುದಿಗಾಲ ಮೇಲೆ ನಿಂತಿದ್ದಾರೆ.
Published by: G Hareeshkumar
First published: August 26, 2020, 6:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading