• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸಿಎಂ ಬಿಎಸ್ವೈಗೆ ಕೊರೊನಾ ಸೋಂಕು, ಜೊತೆಗಿದ್ದ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಆತಂಕ ಶುರು

ಸಿಎಂ ಬಿಎಸ್ವೈಗೆ ಕೊರೊನಾ ಸೋಂಕು, ಜೊತೆಗಿದ್ದ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಆತಂಕ ಶುರು

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

ಏಪ್ರಿಲ್ 14ಕ್ಕೆ ಬೆಳಗಾವಿಗೆ ಸಿಎಂ ಆಗಮಿಸಿದ್ದ ವೇಳೆಯಲ್ಲಿಯೇ ಜ್ವರ ಇತ್ತು. ಆದರೂ ಸಿಎಂ ಉಪಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇದೀಗ ಸಿಎಂಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಸಿಎಂ ತಂಗಿದ್ದ ಹೋಟೆಲ್ ಸಿಬ್ಬಂದಿಗೆ ಆತಂಕ ಶುರುವಾಗಿದೆ.

  • Share this:

ಬೆಳಗಾವಿ:  ರಾಜ್ಯದಲ್ಲಿ ಉಪಚುನಾವಣೆಯ ಮತದಾನ ಆರಂಭವಾಗಿದ್ದು, ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗಿವೆ. ಆದರೇ ಇಷ್ಟು ದಿನ ಮೈ ಮರೆತು ಮತ ಬೇಟೆಯಲ್ಲಿ ಬ್ಯುಸಿಯಾಗಿದ್ದ ನಾಯಕರಿಗೆ ಇದೀಗ ಸೋಂಕು ಕಾಣಿಸಿಕೊಳ್ಳುತ್ತಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜನರಿಗೆ ಜಾಗೃತಿ ಬಗ್ಗೆ ಅರಿವು ಮೂಡಿಸುತ್ತಿದ್ದ ಸಿಎಂ ಸ್ವತಃ ತಾವೇ ತಮ್ಮ ಆರೋಗ್ಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೇ ಎನ್ನುವ ಅನುಮಾನ ಇದೀಗ ಕಾಡುತ್ತಿದೆ.


ಏಪ್ರಿಲ್ 14ಕ್ಕೆ ಬೆಳಗಾವಿಗೆ ಸಿಎಂ ಆಗಮಿಸಿದ್ದ ವೇಳೆಯಲ್ಲಿಯೇ ಜ್ವರ ಇತ್ತು. ಆದರೂ ಸಿಎಂ ಉಪಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇದೀಗ ಸಿಎಂಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಸಿಎಂ ತಂಗಿದ್ದ ಹೋಟೆಲ್ ಸಿಬ್ಬಂದಿಗೆ ಆತಂಕ ಶುರುವಾಗಿದೆ. ಸಿಎಂ ವಾಸ್ತವ್ಯ ಮಾಡಿದ್ದ ಬೆಳಗಾವಿಯ ಯುಕೆ 27 ಹೋಟೆಲ್ ನ 40 ಜನ ಸಿಬ್ಬಂದಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೋವಿಡ್ ಸೋಂಕಿನ ಪರೀಕ್ಷೆ ನಡೆಸಿದ್ರು. ಅಷ್ಟೇ ಅಲ್ಲದೇ ಸಿಎಂ ಜತೆಗೆ ಇರುತ್ತಿದ್ದ ಸಚಿವರಾದ ಜಗದೀಶ ಶೆಟ್ಟರ್, ಉಮೇಶ ಕತ್ತಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಗೆ ಕೋವಿಡ್ ಆತಂಕ ಇದೆ.


ಸಿಎಂ ರೋಡ್ ಶೋ ವೇಳೆಯಲ್ಲಿ ಭಾಗಿಯಾಗಿದ್ದ ಶಾಸಕ ಅಭಯ ಪಾಟೀಲ್ ಸಹ ಸೋಂಕಿನ ಪರೀಕ್ಷೆಗೆ ಒಳಗಾಗಿದ್ದಾರೆ. ಆದರೇ ಅಭಯ ಪಾಟೀಲ್ ವರದಿ ನೆಗೆಟಿವ್ ಬಂದಿದ್ದು, ಈ ಬಗ್ಗೆ ಮಾಧ್ಯಮಗಳಿಗೆ ಅಭಯ ಪಾಟೀಲ್ ಮಾಹಿತಿ ನೀಡಿದ್ದಾರೆ. ಸಿಎಂ ಮೂಡಲಗಿ, ಗೋಕಾಕ್ ನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದರು. ನಂತರ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠ, ಹುಕ್ಕೇರಿ ಹಿರೇಮಠದಲ್ಲಿ ನಡೆದ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡಿದ್ದರು.  ರೋಡ್ ಶೋ ವೇಳೆಯಲ್ಲಂತೂ ಸಾವಿರಾರು ಜನ ಪಾಲ್ಗೊಂಡಿದ್ದರು.


ಬೆಳಗಾವಿ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಇದೀಗ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರಚಾರ ನಡೆಸಿದ್ದ ಕಡೆಯಲ್ಲಿ ಹೆಚ್ಚಿನ ಸೋಂಕಿನ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣ, ಸಮಾವೇಶ ನಡೆದ ಸ್ಥಳ, ಸಿಎಂ ಜತೆಗೆ ಸಂಪರ್ಕ ಹೊಂದಿರೋ ಅಧಿಕಾರಿಗಳ ಪರೀಕ್ಷೆ ನಡೆಸಲು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಬಾಲಕೃಷ್ಣ ತುಕ್ಕಾರ ಸೂಚನೆ ನೀಡಿದ್ದಾರೆ.


ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಹೋದರ ಚನ್ನರಾಜ್ ಹಟ್ಟಿಹೊಳಿಗೆ ಸಹ ಕೊರೊನಾ ಸೋಂಕು ದೃಢಪಟ್ಟಿದೆ. ಹೆಬ್ಬಾಳ್ಕರ್ ಸಹ ಕಳೆದ 15 ದಿನಗಳಿಂದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಅನೇಕ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೇ ಹೆಬ್ಬಾಳ್ಕರ್ ಕುಟುಂಬದ ಸದಸ್ಯರು ಹಾಗೂ ಅಡಿಗೆ ಸಿಬ್ಬಂದಿ ಹಾಗೂ ಚಾಲಕನಿಗು ಸೋಂಕು ದೃಢಪಟ್ಟಿದೆ.

Published by:Soumya KN
First published: