ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಂದ ರಾಜ್ಯಕ್ಕೆ ಹೆಚ್ಚುವರಿ 25,000 ರೆಮ್ಡಿಸಿವಿರ್ ಔಷಧ ಲಭ್ಯ

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

  • Share this:
ನವದೆಹಲಿ (ಏ.22) : ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದಗೌಡ ಅವರ ಮಧ್ಯಪ್ರವೇಶದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚುವರಿಯಾಗಿ 25,000 ವೈಯಲ್ಸ್ ರೆಮ್​ಡಿಸಿವಿರ್ ಪೂರೈಕೆಯಾಗಲಿದೆ. ಕರ್ನಾಟಕ ರಾಜ್ಯಕ್ಕೆ ಹೆಚ್ಚು ಆಮ್ಲಜನಕ ಒದಗಿಸುವಂತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವ ಸದಾನಂದಗೌಡ‌‌ ಅವರು ಶುಕ್ರವಾರ ಬೆಂಗಳೂರಿನ ಬೊಬ್ಬಸಂದ್ರದಲ್ಲಿರುವ ಮೈಲಾನ್ ಫಾರ್ಮಾ ಕಂಪನಿಗೆ ಭೇಟಿ ನೀಡಿ ರೆಮ್​ಡಿಸಿವಿರ್ ಉತ್ಪಾದನೆ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ರಾಜ್ಯಕ್ಕೆ ಹೆಚ್ಚುವರಿಯಾಗಿ ನಿಗದಿಯಾಗಿರುವ ರೆಮ್​ಡಿಸಿವಿರ್ ಔಷಧವನ್ನು ಮೈಲಾನ್ ಕಂಪನಿಯೇ ಪೂರೈಸಲಿದೆ.

ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಮನ್ವಯ ಸಮಿತಿಯು ಬುಧವಾರ ವಿವಿಧ ರಾಜ್ಯಗಳಿಗೆ ಈ ತಿಂಗಳ ಕೊನೆತನಕ ಎಷ್ಟು ರೆಮ್​ಡಿಸಿವಿರ್ ಔಷಧ ಅಗತ್ಯವಿದೆ ಎಂಬುದನ್ನು ಲೆಕ್ಕ ಹಾಕಿತ್ತು. ಆ ಪ್ರಕಾರ ಕರ್ನಾಟಕಕ್ಕೆ 25,352 ರೆಮ್​ಡಿಸಿವಿರ್ ವೈಯಲ್ಸ್​​​ನ್ನು ನಿಗದಿಪಡಿಸಲಾಗಿತ್ತು. ಆದರೆ ಗುರುವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ) ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೆಮ್​ಡಿಸಿವಿರ್ ಬೇಕು ಎಂಬ ಬೇಡಿಕೆ ಇಟ್ಟಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಕೆ. ಸುಧಾಕರ, ರಾಜ್ಯದ ಕೆಲ ಸಂಸದರು ಮತ್ತು ಅಧಿಕಾರಿಗಳು ಫಾರ್ಮಾಸ್ಯುಟಿಕಲ್ (ಔಷಧ) ಇಲಾಖೆಯನ್ನು ಹೊಂದಿರುವ ಸದಾನಂದಗೌಡ ಅವರನ್ನು ಸಂಪರ್ಕಿಸಿ ರಾಜ್ಯಕ್ಕೆ ಹೆಚ್ಚುವರಿ ರೆಮ್​ಡಿಸಿವಿರ್ ಒದಗಿಸುವಂತೆ ಕೋರಿದ್ದರು.

ಇದನ್ನು ಓದಿ: ಶಾನೇ ಟಾಪ್​​ ಆಗ್ವಳೆ ನಮ್​ ಹುಡ್ಗಿ.. ಹೆಣ್ಣು ಮಗು ಹುಟ್ಟಿದ್ದಕ್ಕೆ ಹೆಲಿಕಾಪ್ಟರ್​ನಲ್ಲಿ ವೆಲ್​ಕಮ್​..!

ತಕ್ಷಣವೇ ಇದಕ್ಕೆ ಸ್ಪಂದಿಸಿದ ಸಚಿವ ಸದಾನಂದಗೌಡರು ಇಲಾಖಾ  ಅಧಿಕಾರಿಗಳಿಗೆ (ಸಮನ್ವಯ ಸಮಿತಿಯ ಸದಸ್ಯರೂ ಹೌದು) ರಾಜ್ಯದ ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತದನಂತರ ರಾಜ್ಯಕ್ಕೆ ಹೆಚ್ಚುವರಿ ರೆಮ್​ಡಿಸಿವಿರ್ ಪೂರೈಕೆ ಆದೇಶ ಹೊರಬಿದ್ದಿದೆ. ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೆಚ್ಚುವರಿ ಆಮ್ಲಜನಕ ಪೂರೈಕೆಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹಾಗೂ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರಿಗೆ ಬರೆದಿರುವ ಪತ್ರಕ್ಕೆ ಸದಾನಂದಗೌಡರೂ ಧ್ವನಿಗೂಡಿಸಿದ್ದಾರೆ.

ರಾಜ್ಯದಲ್ಲಿ ದಿನವೊಂದಕ್ಕೆ ಸ್ಥಾಪಿತ ಆಮ್ಲಜನಕ ಉತ್ಪಾದನೆ 812 ಮೆಟ್ರಿಕ್ ಟನ್ ಮಾತ್ರ. ಆದರೆ ದಿನದಿಂದ ದಿನಕ್ಕೆ ಆಮ್ಲಜನಕ ಬಳಕೆ ಏರಿಕೆಯಾಗುತ್ತಿದೆ. ಏಪ್ರಿಲ್ 25ರಿಂದ ರಾಜ್ಯಕ್ಕೆ ಪ್ರತಿದಿನ 1,142 ಮೆಟ್ರಿಕ್ ಟನ್ ಆಮ್ಲಜನಕ ಬೇಕು. ಹಾಗೆಯೇ ಏಪ್ರಿಲ್ 30ರಿಂದ ಪ್ರತಿದಿನ 1,471 ಮೆಟ್ರಿಕ್ ಟನ್ ಆಮ್ಲಜನಕ ಬೇಕು ಎಂದು ಲೆಕ್ಕ ಹಾಕಲಾಗಿದೆ. ಇದರ ಪೂರೈಕೆ ಹಾಗೂ ಸಾಗಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಯಡಿಯೂರಪ್ಪ ಅವರು ಕೇಂದ್ರ ಸಚಿವರನ್ನು ಕೇಳಿಕೊಂಡಿದ್ದರು. ರಾಜ್ಯದ ಬೇಡಿಕೆಯನ್ನು ಆದ್ಯತೆ ಮೇರೆಗೆ ಈಡೇರಿಸುವಂತೆ ಸದಾನಂದಗೌಡರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ. ಹಾಗೆಯೇ ಸಚಿವದ್ವಯರೊಂದಿಗೆ ಈ ಬಗ್ಗೆ ದೂರವಾಣಿಯಲ್ಲಿಯೂ ಚರ್ಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Published by:Kavya V
First published: