ಕಷ್ಟಕ್ಕೆ ನೆರವಾದ ‘ಕೋಟಿಗೊಬ್ಬ’.. ಹಾಸನದ ಬಡ ವಿದ್ಯಾರ್ಥಿಯ ಸಂಕಷ್ಟಕ್ಕೆ ಮಿಡಿದ ನಟ Kiccha Sudeep

ಇಂದು ಗಿರೀಶ್ ನನ್ನು ಬೆಂಗಳೂರಿಗೆ ಕರೆಸಿಕೊಂಡು ಗಿರೀಶ್ ಕುಟುಂಬದ ಕಷ್ಟ ಆಲಿಸಿದ ಕಿಚ್ಚ ಸುದೀಪ್, ತಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ  21,500 ರೂ. ಚೆಕ್ ನೀಡಿ ಮಾನವೀಯತೆ ಮೆರೆದಿದ್ದಾರೆ.

ವಿದ್ಯಾರ್ಥಿ ಗಿರೀಶ್​​ಗೆ ಸುದೀಪ್​ ನೆರವು

ವಿದ್ಯಾರ್ಥಿ ಗಿರೀಶ್​​ಗೆ ಸುದೀಪ್​ ನೆರವು

  • Share this:
ಹಾಸನ: ಸಿನಿಮಾ ನಟರೆಂದರೆ (Movie Actors) ಕೇವಲ‌ ತಮ್ಮ ಸ್ವಂತಕ್ಕೆ ಹಣ ಮಾಡಿಕೊಳ್ಳುತ್ತಾರೆ ಎಂಬ ಮಾತಿದೆ. ಆದರೆ ಅದಕ್ಕೆ ತದ್ವಿರುದ್ಧ ಎಂಬಂತೆ ಇತ್ತೀಚೆಗೆಷ್ಟೇ ಕೋಟ್ಯಾಂತರ ಅಭಿಮಾನಿಗಳನ್ನು (Fans) ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಮಾಡಿರುವ ಸಮಾಜಮುಖಿ ಕೆಲಸಗಳು ಅವರು‌ ನಿಧನದ‌ ನಂತರ ಒಂದೊಂದಾಗಿ ಹೊರ ಬರುತ್ತಿವೆ. ಪುನೀತ್ ಸಹಾಯ ಕಂಡ ಕರುನಾಡ ಜನತೆ ಮೊಮ್ಮಲ ಮರಗುತ್ತಿದ್ದಾರೆ. ಸಾವಿರಾರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು, ಗೋಶಾಲೆ, ವೃದ್ಧಾಶ್ರಮ‌ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಅದೇ ಹಾದಿಯಲ್ಲಿ ಮತ್ತೊಬ್ಬ ಕನ್ನಡದ ಸ್ಟಾರ್ ನಟ ಹೊರಟಿದ್ದಾರೆ. ಈಗಾಗಲೇ ಹಲವು ಬಡ ಕುಟುಂಬದ ಕೆಲವರಿಗೆ ಶಸ್ತ್ರ ಚಿಕಿತ್ಸೆ ಆರ್ಥಿಕ ನೆರವು, ಕೊರೊನಾ ಸಂದರ್ಭದಲ್ಲಿ ಸಿನಿಮಾರಂಗದ ಅನೇಕ ಕಲಾವಿದರಿಗೆ ಸಹಾಯದ ಹಸ್ತ ಚಾಚಿದ್ದ ಕಿಚ್ಚ ಸುದೀಪ್ ಹಾಸನದ ವಿದ್ಯಾರ್ಥಿಯ ನೆರವಿಗೆ ನಿಂತಿದ್ದಾರೆ.

ಮಳೆಹಾನಿಯಿಂದ ಆರ್ಥಿಕ ಸಂಕಷ್ಟ 

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ರಾಮಕೃಷ್ಣ-ಜ್ಯೋತಿ ಎಂಬುವವರ ಪುತ್ರ ಗಿರೀಶ್ ಕುಮಾರ್ ಜಿ.ಆರ್. ಹಾಸನದ  ರಾಜೀವ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದಾನೆ. ಗಿರೀಶ್ ತಂದೆ ರಾಮಕೃಷ್ಣ ರೈತರಾಗಿದ್ದು ಇದ್ದ ಅಲ್ಪಸ್ವಲ್ಪ ಜಮೀನಿನಲ್ಲಿ ರಾಗಿ ಬೆಳೆದಿದ್ದರು.‌ ಆದರೆ ಕಳೆದ ಒಂದು ತಿಂಗಳಿನಿಂದ ಸುರಿದ ಅಕಾಲಿಕ ಮಳೆಗೆ ರಾಗಿ ಸಂಪೂರ್ಣ ‌ನಾಶವಾಗಿ ಬಡಕುಟುಂಬ ಕಂಗಾಲಾಗಿ, ಸಂಕಷ್ಟಕ್ಕೆ ಸಿಲುಕಿತ್ತು. ಇತ್ತ ಮಗ ಹೊರ‌ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಆತನ ಪರೀಕ್ಷೆಗೆ ಫೀಸ್ ಕಟ್ಟಲು ಹಣವಿಲ್ಲದೆ ಪರದಾಡುವಂತಾಗಿತ್ತು. ಗಿರೀಶ್ ಪರೀಕ್ಷೆಗೆ ಹಾಜರಾಗಲು 21,500 ರೂ ಶುಲ್ಕ ಕಾಲೇಜಿಗೆ ಪಾವತಿಸಬೇಕಿತ್ತು. ಆದರೆ ಶುಲ್ಕ ಕಟ್ಟಲಾಗದೆ ಪರೀಕ್ಷೆ  ಬರೆಯಲಾಗದ ಆತಂಕ ಎದುರಾಗಿತ್ತು. ಎಲ್ಲರ ಬಳಿ ಹಣ ಕೇಳಿದರೂ ಯಾರೂ ನೀಡಿರಲಿಲ್ಲ.

ಮನೆಗೆ ಕರೆಸಿಕೊಂಡು ನೆರವು ನೀಡಿದ ಕಿಚ್ಚ ಸುದೀಪ್​

ಕೊನೆಗೆ ಗಿರೀಶ್  ಹಾಸನ ಜಿಲ್ಲಾ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರನ್ನು ಸಂಪರ್ಕ ಮಾಡಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾನೆ. ಕೂಡಲೇ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಖುದ್ದು ಸುದೀಪ್ ಅವರೇ ಸ್ಪಂದಿಸಿದ್ದಾರೆ.  ಇಂದು ಗಿರೀಶ್ ನನ್ನು ಬೆಂಗಳೂರಿಗೆ ಕರೆಸಿಕೊಂಡು ಗಿರೀಶ್ ಕುಟುಂಬದ ಕಷ್ಟ ಆಲಿಸಿ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ವತಿಯಿಂದ  21,500 ಚೆಕ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಪರೀಕ್ಷೆ ಬರೆಯಲಾಗದ ಆತಂಕ ಗಿರೀಶ್ ನಿಂದ ದೂರವಾಗಿದ್ದು ನಾಳೆ ಬೆಳಗ್ಗೆ ಶುಲ್ಕ ಪಾವತಿಸಿ ರಾಜೀವ್ ಕಾಲೇಜಿನಲ್ಲಿ ಗಿರೀಶ್ ಪರೀಕ್ಷೆಗೆ ಹಾಜರಾಗಲಿದ್ದಾರೆ.

ಸಿನಿಮಾ ನಟರು ಮಾತ್ರ ತೆರೆಮರೆಯಲ್ಲಿ ಬಡವರ ನೆರವಿಗೆ ನಿಲ್ಲುತ್ತಿರುವುದು ನಿಜಕ್ಕೂ ಪ್ರಶಂಸನೀಯವಾದದ್ದು. ಎಲ್ಲಾ ನಟರು ಈ ರೀತಿ ಸಮಾಜಮುಖಿ‌ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಅದೆಷ್ಟೋ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ.

ಇದನ್ನೂ ಓದಿ: Duniya Vijay ಬರೋವರೆಗೂ ತಾಳಿ ಕಟ್ಟಿಸಿಕೊಳ್ಳಲ್ಲ: ಹಠ ಹಿಡಿದ ದಾವಣೆಗೆರೆಯ ಮದುಮಗಳು!

ಇನ್ನು ಅಗಲಿದ ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದಿದೆ. ಕಳೆದ ವರ್ಷ ಕೊರೊನಾದಿಂದಾಗಿ ಲಾಲ್ ಬಾಗ್ (Lalbag) ನಲ್ಲಿ ನಡೆಯುವ ಫಲಪುಷ್ಟ (Flower Show) ಪ್ರದರ್ಶನ ರದ್ದುಗೊಂಡಿತ್ತು. ಕೊರೊನಾ ಪಸರಿಸುವ ಪ್ರಮಾಣ ಕಡಿಮೆಯಾದ ಹಿನ್ನೆಲೆ ಜನವರಿಯಲ್ಲಿ ಫಲಪುಷ್ಟ ಪ್ರದರ್ಶನ ನಡೆಯಲಿದೆ. ಈ ಬಾರಿಯ ಫಲಪುಷ್ಟ ಪ್ರದರ್ಶನ ಅಪ್ಪು ಅಭಿಮಾನಿಗಳಿಗೆ ವಿಶೇಷವಾಗಿರಲಿದೆ.ಗಣರಾಜ್ಯೋತ್ಸವ ಅಂಗವಾಗಿ ಲಾಲ್ ಬಾಗ್ ನಲ್ಲಿ ಫಲಪುಷ್ಟ ಪ್ರದರ್ಶನ ನಡೆಸಲಾಗುತ್ತದೆ. ಈ ಬಾರಿ ಅಪ್ಪು ಅವರನ್ನ ಫಲಪುಷ್ಟ ಪ್ರದರ್ಶನದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Published by:Kavya V
First published: