ಚಿತ್ರದುರ್ಗ: ನಾವು ಸಿನಿಮಾ ಮಾಡೋದು ಎರಡು ಗಂಟೆ ನಿಮ್ಮ ಬೇಜಾರು ಕಳೆಯೋಕೆ. ಅದು ನಾವು ಮಾಡೋ ಕರ್ತವ್ಯ. ಅದು ಬಿಟ್ಟರೆ ನಾವ್ಯಾರೂ ನಿಮ್ಮ ಭಾಗದ ದೇವರುಗಳಲ್ಲ. ನಿಮ್ಮನ್ನ ತಲೆ ಮೇಲೆ ಹೊರೆಸಿಕೊಂಡು ಓಡಾಡುವವರೂ ನಾವಲ್ಲ. ನಾವು ಸ್ವಾರ್ಥಿಗಳು, ಬದುಕಲಿಕ್ಕೆ ಬಂದವರು. ನಮ್ಮನ್ನ ನಂಬಿ ಫೂಲ್ ಆಗಬೇಡಿ ಎಂದು ಚಿತ್ರದುರ್ಗದಲ್ಲಿ ನಟ, ಹಾಗೂ ರಾಜ್ಯ ಬಿಜೆಪಿ ವಕ್ತಾರ ಜಗ್ಗೇಶ್ ಹೇಳಿದ್ದಾರೆ.
ಚಿತ್ರದುರ್ಗ ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಆಯೋಜಿಸಿದ್ದ ಮಾಧ್ಯಮ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಗ್ಗೇಶ್, ಸಿನಿಮಾ ಮಂದಿ ಬಗ್ಗೆ ಯುವ ಪೀಳಿಗೆಯಲ್ಲಿರುವ ಅತಿಯಾನದ ಅಭಿಮಾನದ ಕುರಿತು ಮಾತನಾಡಿ ಒಂದಷ್ಟು ಸಲಹೆ ನೀಡಿದರು. ನಿಮಗೆ ಸಿನಿಮಾ ಮಂದಿಯಿಂದ ಏನೂ ಸಿಗೋದಿಲ್ಲ. ಯಾರೋ ಒಬ್ಬ ಹೀರೋಗೆ ಹೋಗಿ ಕಟೌಟ್, ಹಾರ, ಹಾಲಿನ ಅಭಿಷೇಕ ಮಾಡುವ ಬದಲು, ನೀವು ನಿಮ್ಮ ತಂದೆ ತಾಯಿಗಾಗಿ ಯೋಚಿಸಿ. ನಿಮ್ಮ ಮನೆಯಲ್ಲಿ ನೊಂದಿರೋ ಅಪ್ಪ ಅಮ್ಮನ ಯೋಗಕ್ಷೇಮ ನೋಡಿಕೊಳ್ಳಿ. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಅವರನ್ನ ನಡೆಸಿ, ಅವರಿಗೆ ಪ್ರೀತಿ ಕೊಡಿ, ನಮಸ್ಕರಿಸಿ, ಆಗ ನೀವು ಜೀವನದಲ್ಲಿ ಬ್ಯೂಟಿಫುಲ್ ಹೀರೋ ಹಾಕ್ತಿರಿ ಎಂದು ನವರಸ ನಾಯಕ ಕಿವಿಮಾತು ಹೇಳಿದರು.
ಯಾವನ್ಯಾವೋನೊ ಹೀರೋಗಳನ್ನ ಹೈಲೆಟ್ ಮಾಡ್ಕಂಡ್ ಇರುತ್ತೀರಿ. ನನ್ನಂಥ ಯಾವ ಸಿನಿಮಾ ಹೀರೋನಿಂದ ಬೋಣಿ ಆಗೋದಿಲ್ಲ. ಎರಡು ಗಂಟೆ ನಿಮ್ಮ ಬೇಜಾರು ಕಳೆಯೋಕೆ ನಾವು ಮಾಡೋ ಕರ್ತವ್ಯ ಅಷ್ಡೆ, ಅದು ಬಿಟ್ಟರೇ ನಾವೆಂದೂ ನಿಮ್ಮ ಭಾಗದ ದೇವರುಗಳಲ್ಲ. ನಿಮ್ಮನ್ನ ತಲೆ ಮೇಲೆ ಹೊರಸಿಕೊಂಡು ಓಡಾಡುವವರಲ್ಲ. ನಾವು ಸ್ವಾರ್ಥಿಗಳು, ಬದುಕಲಿಕ್ಕೆ ಬಂದಿರುವವರು. ಅಲ್ಲದೇ ನೀವೆಲ್ಲರೂ ಟಿಕೆಟ್ ಖರೀದಿಸಿ ಸಿನಿಮಾ ನೋಡಿ ಚಪ್ಪಾಳೆ ಹೊಡೆದರೆ ಅದು ನಮಗೆ ಸಿಗುವ ಬೆಲೆ, ನಮ್ಮ ಹಣೆಬರಹ ಎಂದು ನಂಬಿರೋನು ನಾನು. ನಮ್ಮನ್ನ ನೋಡಿ ಫೂಲ್ ಆಗಬೇಡಿ. ನೀವು ನಮ್ಮನ್ನ ಎಲ್ಲಿಡಬೇಕೊ ಅಲ್ಲೇ ಇಡಿ. ನಮ್ಮನ್ನ ದೇವರ ತರಹ ಮೆರೆಸಬೇಡಿ. ನಾವ್ಯಾರೂ ನಿಮ್ಮ ಹಣೆಬರಹ ಬದಲಿಸುವುದಿಲ್ಲ. ನಿಮಗೆ, ರಸ್ತೆ, ಚರಂಡಿ, ನೀರು ಕೊಡಲ್ಲ. ಕಷ್ಟಸುಖಗಳಿಗೆ ಬರಲ್ಲ. ನಾವು ಎಸಿ ರೂಮಲ್ಲಿರುತ್ತೇವೆ ಎಂದು ಜಗ್ಗೇಶ್ ಮಾರ್ಮಿಕವಾಗಿ ನುಡಿದರು.
ಇದನ್ನೂ ಓದಿ: Chaitra Kotur - ಮಾಜಿ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೋಟೂರು ಮದುವೆ ಹಾದಿರಂಪ; ಒಂದೇ ದಿನಕ್ಕೆ ಬೀದಿಗೆ ಬಂದ ದಾಂಪತ್ಯ
ಯುವ ಜನರು ದೇಶದ ಬಗ್ಗೆ ಯೋಚಿಸೋದನ್ನ ಬಿಟ್ಟು, ಯಾವ ನಟ ಯಾವ ಕಟಿಂಗ್ ಹೊಡ್ಕಂಡ, ಡೈಲಾಗ್ ಹೊಡೆದ ಅಂತ ತಲೆ ಕೆಡಿಸಿಕೊಳ್ಳುತ್ತಾರೆ. ಆ ಹೀರೋ ತರ ಕಲಿಬೇಕು, ಡ್ರೆಸ್ ಹಾಕಬೇಕು, ಲವ್ ಮಾಡ್ಬೇಕು ಅಂತ ಬದಕನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ನವರಸ ನಾಯಕ ಬೇಸರ ವ್ಯಕ್ತಪಡಿಸಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ಪರೋಕ್ಷವಾಗಿ ಮಾತನಾಡಿದ ಜಗ್ಗೇಶ್, ರಾಜ್ಯದಲ್ಲಿ ದೊಡ್ಡವರ ಹಣೆಬರಹಗಳನ್ನ ನೀವು ನೋಡುತ್ತಿದ್ದೀರಿ. ಯಾವ್ಯಾವ ತರಹ ಸಿಕ್ಕಾಕಿಸಬಹುದು ತಿಳಿಯುತ್ತಿದೆ. ಎಲ್ಲಿವರೆಗೂ ಸಿಕ್ಕಾಕಿಕೊಳ್ಳೋನು ಇರ್ತಾನೋ ಅಲ್ಲಿವರೆಗೆ ಸಿಕ್ಕಾಕಿಸುವವರು ಇರ್ತಾರೆ ಎಂದು ತಿಳಿಸಿದರು.
ವರದಿ: ವಿನಾಯಕ ತೊಡರನಾಳ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ