Accident: ವಿಜಯಪುರದಲ್ಲಿ ಲಾರಿ-ಟ್ಯಾಂಕರ್ ನಡುವೆ ಡಿಕ್ಕಿ, ಮೂವರು ಸಾವು; ಅಪಘಾತದಲ್ಲಿ ಗಾಯಗೊಂಡವರಿಗೆ ನಟ ಅಜಯ್ ರಾವ್ ಚಿಕಿತ್ಸೆ

ಹೊಸಪೇಟೆಯಿಂದ ಬೆಂಗಳೂರಿಗೆ ಹೊರಟಿದ್ದ ಅಜಯ್ ರಾವ್. ಮೈಸೂರಿನಿಂದ ಹೊಸಪೇಟೆಗೆ ಬರ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಕಾರ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಇದನ್ನು ಗಮನಿಸಿ ತಮ್ಮ ಕಾರ್ ನಲ್ಲಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿದ್ದ ಮೆಡಿಕಲ್ ವಸ್ತುಗಳನ್ನು ಬಳಸಿ ಅಜಯ್ ರಾವ್ ಅವರು ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಭೀಕರ ಅಪಘಾತ (Accident) ಸಂಭವಿಸಿದ್ದು, ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಮತ್ತೊಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ. ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ರೋಣಿಹಾಳ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ  ಇಂದು ಸಂಜೆ ಲಾರಿ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಆಗಿದೆ. ಎಮ್ಮೆಗಳನ್ನು ಸಾಗಾಟ ಮಾಡುತ್ತಿದ್ದ ಕ್ಯಾಂಟರ್​ನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಸರಕು ಸಾಗಣೆಯ ಲಾರಿಯಲ್ಲಿದ್ದ ಮೂವರಲ್ಲಿ ಇಬ್ಬರು ಅಸುನೀಗಿದ್ದಾರೆ. ಮತ್ತೊಬ್ಬರ ಪರಿಸ್ಥಿರಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  MH 13 AX 4999 ನಂಬರಿನ ಕ್ಯಾಂಟರ್ ವಿಜಯಪುರದಿಂದ ಹುಬ್ಬಳ್ಳಿ ಕಡೆಗೆ ಎಮ್ಮೆಗಳನ್ನು ತುಂಬಿಕೊಂಡು ಹೋಗುತ್ತಿತ್ತು. TN 52 F 7099 ನಂಬರಿನ ತಮಿಳುನಾಡು ಮೂಲದ ಲಾರಿ ಹುಬ್ಬಳ್ಳಿಯಿಂದ ವಿಜಯಪುರ ಕಡೆಗೆ ಬರುತ್ತಿತ್ತು. ಈ ವೇಳೆ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭಿವಿಸಿದೆ. ಸ್ಥಳದಲ್ಲೇ ಕ್ಯಾಂಟರ್ ಚಾಲಕ ಮೃತಪಟ್ಟಿದ್ದಾರೆ. ಲಾರಿಯಲ್ಲಿ ಸಿಲುಕಿರುವ ಮೂವರನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಹರಸಾಹಸ ಪಟ್ಟು ಹೊರ ತೆಗೆದರು. ಕ್ಯಾಂಟರ್ ನಲ್ಲಿದ್ದ ಐದಕ್ಕೂ ಹೆಚ್ಚು ಎಮ್ಮೆಗಳ ಸಾವನ್ನಪ್ಪಿವೆ. ಕೋಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  ಆಟೋ- ಕಾರಿನ ನಡುವೆ ಡಿಕ್ಕಿ; ಓರ್ವ ಸಾವು

  ಆಟೋ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಆಟೋ ಚಾಲಕ‌ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ ಕಾಮಸಮುದ್ರ ಬಳಿ ಮಂಗಳವಾರ ನಡೆದಿದೆ. ಐಚನಹಳ್ಳಿ ಗ್ರಾಮದ ನಾಗರಾಜು (40) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಓರ್ವನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿದ್ದು, ಆಟೋ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಕರಡಿ ಸಾವು

  ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ರಾಷ್ಟ್ರೀಯ ಹೆದ್ದಾರಿ 50 ರ ಬಳಿ  ಇಂದು ಬೆಳಗಿನ ಜಾವ ಅಪರಿಚಿತ ವಾಹನವೊಂದು ಕರಡಿಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಕರಿಡಿ ಒಂದು ಸಾವನ್ನಪ್ಪಿದೆ. ಹೊಲಕ್ಕೆ ತೆರಳುವ ರೈತರು ಕರಡಿ ಸತ್ತು ಬಿದ್ದಿರುವುದನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕೂಡ್ಲಿಗಿ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

  ನಿಂತಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದ ಕೆಎಸ್​ಆರ್​ಟಿಸಿ

  ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳಬಳಿ ಬಳಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕೆ.ಎಸ್.ಆರ್. ಟಿ.ಸಿ ಬಸ್ ಗುದ್ದಿದ ಪರಿಣಾಮ ಬಸ್ಸಿನಲ್ಲಿದ್ದ 15 ಜನರಿಗೆ ಸಾಮಾನ್ಯ ಗಾಯಗಳಾಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ರಾಯದುರ್ಗದಿಂದ ಬೆಂಗಳೂರಿಗೆ‌ ಹೊರಟಿದ್ದ ಬಸ್ ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಇದನ್ನು ಓದಿ: Explained; Privilege Motion, ಹಕ್ಕುಚ್ಯುತಿ ಎಂದರೇನು? ಶಾಸಕರು, ಸಂಸದರಿಗೆ ನೀಡಲಾದ ಈ ಹಕ್ಕಿನ ಮಹತ್ವವೇನು?

  ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಚಿತ್ರನಟ

  ಅಪಘಾತವಾದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ  ಮಾಡುವ ಮೂಲಕ ತಾಜ್ ಮಹಲ್ ಖ್ಯಾತಿಯ, ಹೊಸಪೇಟೆಯ ಹುಡುಗ ಅಜಯ್ ರಾವ್ ಮಾನವೀಯ ಕಾರ್ಯ ಮಾಡಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಗ್ರಾಮದ ಹೊರವಲಯದ ರಾ.ಹೆ.50 ರಲ್ಲಿ ಘಟನೆ ನಡೆದಿದೆ. ಹೊಸಪೇಟೆಯಿಂದ ಬೆಂಗಳೂರಿಗೆ ಹೊರಟಿದ್ದ ಅಜಯ್ ರಾವ್. ಮೈಸೂರಿನಿಂದ ಹೊಸಪೇಟೆಗೆ ಬರ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಕಾರ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಇದನ್ನು ಗಮನಿಸಿ ತಮ್ಮ ಕಾರ್ ನಲ್ಲಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿದ್ದ ಮೆಡಿಕಲ್ ವಸ್ತುಗಳನ್ನು ಬಳಸಿ ಅಜಯ್ ರಾವ್ ಅವರು ಪ್ರಥಮ ಚಿಕಿತ್ಸೆ ನೀಡಿದ್ದಾರೆ.
  Published by:HR Ramesh
  First published: