ಕಲಬುರ್ಗಿ; ರಾಜ್ಯದಲ್ಲಿಂದು ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಬೇಟೆಯಾಡಿದ್ದಾರೆ. ಬಿಸಿಲೂರು ಕಲಬುರ್ಗಿಯಲ್ಲೂ ಎಸಿಬಿ ಅಧಿಕಾರಿಗಳು ಭಾರಿ ಬೇಟೆಯಾಡಿದ್ದಾರೆ. ಮಾಗಡಿ ಪಿಡಬ್ಲ್ಯುಡಿಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ಚನ್ನಬಸಪ್ಪ ಅವಟೆ ಅವರ ಕಲಬುರ್ಗಿ ಮನೆ, ತೋಟದ ಮನೆ, ಡೆವೆಲಪರ್ ಕಚೇರಿ ಮೂರು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೀದರ್, ಯಾದಗಿರಿ ಮತ್ತು ಕಲಬುರ್ಗಿ ಮೂರು ಜಿಲ್ಲೆಯ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಲಬುರ್ಗಿಯ ಹಳೆ ಜೇವರ್ಗಿ ರಸ್ತೆಯ ಓಂ ರೆಸಿಡೆನ್ಸಿ ಅಪಾರ್ಟ್ಮೆಂಟ್ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ.
ಓಂ ರೆಸಿಡೆನ್ಸಿ ಅಪಾರ್ಟ್ಮೆಂಟ್ನಲ್ಲಿಯೇ ಅಧಿಕಾರಿ ಅವಟೆ ತಮ್ಮ ಮಗ, ಹೆಂಡತಿ ಹೆಸರಿನಲ್ಲಿ ಖರೀದಿ ಮಾಡಿರುವ ಸುಮಾರು 8 ಫ್ಲ್ಯಾಟ್ ಗಳ ದಾಖಲೆಗಳು ಪತ್ತೆಯಾಗಿವೆ. ಅಲ್ಲದೇ ಉದನೂರು ರಸ್ತೆಯ ಖುಷಿ ಡೆವಲಪರ್ ನಲ್ಲಿ ಮಗನ ಪಾಲುದಾರಿಕೆ ಕುರಿತಾದ ದಾಖಲೆಗಳು ಪತ್ತೆಯಾಗಿವೆ. ಜೊತೆಗೆ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮಗದಮ್ ಪುರ ಗ್ರಾಮದಲ್ಲಿರುವ 23 ಎಕರೆ ಪ್ರದೇಶದ ತೋಟದ ಮನೆಗೆ ಸಂಬಂಧಿಸಿದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಅಲ್ಲದೇ ಬೀದರ್ ನ ಬಸವಕಲ್ಯಾಣದಲ್ಲಿ ಖರೀದಿ ಮಾಡಿರುವ 3 ಎಕರೆ ಜಮೀನಿಗೆ ಸಂಬಂಧಿಸಿದ ಪತ್ರಗಳು ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿವೆ. ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪ ಹೊತ್ತಿರುವ ಸಹಾಯಕ ಎಂಜಿನಿಯರ್ ಚನ್ನಬಸಪ್ಪ ಅವಟೆ, ತಮ್ಮ ಮಗ, ಹೆಂಡತಿ ಹಾಗೂ ಅಳಿಯನ ಹೆಸರಿನಲ್ಲಿ ಅಕ್ರಮ ಆಸ್ತಿ ಮಾಡಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ.
ಇದನ್ನು ಓದಿ: ಜಾರ್ಖಂಡ್ನಲ್ಲಿ ಕುಡಿದು ತಾಯಿಯನ್ನೇ ಕೊಂದ ಪಾಪಿ: ಚಿತೆ ಮೇಲೆ ಚಿಕನ್ ರೋಸ್ಟ್ ಮಾಡಿ ತಿಂದ ಮಗ!
ಎಸಿಬಿ ಅಧಿಕಾರಿಗಳ ಮಾಹಿತಿ ಪ್ರಕಾರ ಸುಮಾರು 2 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಬಗ್ಗೆ ದಾಖಲೆಗಳು ಪತ್ತೆಯಾಗಿವೆ ಅಂತಾ ತಿಳಿಸಿದ್ದಾರೆ. ಇನ್ನು ಕೂಡ ಎಸಿಬಿ ಅಧಿಕಾರಿಗಳು ಮೂರು ಕಡೆಗಳಲ್ಲಿ ದಾಖಲೆ- ಪತ್ರಗಳ ಪರಿಶೀಲನೆ ಮುಂದುವರಿಸಿದ್ದಾರೆ. ಇನ್ನು ಬ್ಯಾಂಕ್ ಲಾಕರ್ ಓಪನ್ ಸಹ ಮಾಡಿದ್ದಾರೆ. ಕಲಬುರ್ಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ ಲಾಕರ್ ಓಪನ್ ಮಾಡಲಾಗಿದೆ. ಲಾಕರ್ ನಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ ಆಭರಣ ಪತ್ತೆಯಾಗಿದೆ. ಚನ್ನಬಸಪ್ಪರ ಮಗ ಶ್ರೀಕಾಂತ್ ನನ್ನ ಕರೆದುಕೊಂಡು ಹೋಗಿ ಲಾಕರ್ ಓಪನ್ ಮಾಡಿದ್ದಾರೆ. ಲಾಕರ್ ನಲ್ಲಿದ್ದ ಚಿನ್ನಾಭರಣ ತೂಕ ಮಾಡೋದಕ್ಕೆ ಎ.ಸಿ.ಬಿ. ಅಧಿಕಾರಿಗಳು ಮುಂದಾಗಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ನಗದು, ಬಂಗಾರ, ಬೆಳ್ಳಿ ಆಭರಣ ಸೇರಿದಂತೆ ಆಸ್ತಿ ಪಾಸ್ತಿ ದಾಖಲೆಗಳ ಸಂಪೂರ್ಣ ಪರಿಶೀಲನೆ ನಂತರ ಎಷ್ಟು ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ ಅನ್ನೋದು ಗೊತ್ತಾಗಲಿದೆ.
ವರದಿ - ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ