ಕೋಲಾರ(ನ. 27): ವಿಧಾನಸಭೆ ಚುನಾವಣೆಯಲ್ಲಿ ಸೋತನಂತರ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಜಿ ಶಾಸಕ ಮಂಜುನಾಥ್ ಗೌಡ ಸದ್ಯ ರಾಜಕೀಯ ಚಟುವಟಿಕೆಯಿಂದ ದೂರವಿದ್ದಾರೆ. ಚುನಾವಣೆ ನಂತರ ಅಷ್ಟಾಗಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದ ಮಂಜುನಾಥ್ ಗೌಡ, ಇತ್ತೀಚೆಗೆ ಸಂಸದೆ ಸುಮಲತ ಅಂಬರೀಶ್ ಅವರ ಕುಟುಂಬದ ಜೊತೆಗೆ ಗುರ್ತಿಸಿ ಕೊಂಡಿರುವ ಪೋಟೋಗಳು ಹರಿದಾಡುತ್ತಿತ್ತು. ಈ ಮಧ್ಯೆ ಮಂಜುನಾಥ್ ಗೌಡ ತಮ್ಮ ಆಪ್ತ ರಘು ಎನ್ನುವರ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಟ ಅಭಿಷೇಕ್ ಅಂಬರೀಶ್ ಜೊತೆಗೂಡಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸಂಪಂಗೆರೆ ಗ್ರಾಮಕ್ಕೆ ಭೇಟಿ ನೀಡಿದರು. ಗ್ರಾಮಕ್ಕೆ ನಟ ಅಭಿಶೇಕ್ ಆಗಮಿಸಿದಾಗ ಕಾರಿನ ಮೇಲೆ ಹೂವಿನ ಮಳೆಯನ್ನೇ ಸುರಿಸಿ ಸ್ವಾಗತಿಸಿದರು. ಸಂಪಂಗೆರೆ ಗ್ರಾಮದಿಂದ ವೇದಿಕೆ ಕಾರ್ಯಕ್ರಮ ನಡೆಯುವ ಸ್ಥಳದ ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಮಾಡಿದ್ದು ವಿಶೇಷವಾಗಿತ್ತು. ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಹೊಸೂರು - ಮಾಲೂರು ಮಾರ್ಗದ ರಸ್ತೆ ಸಂಚಾರಕ್ಕೆ ಸುಮಾರು 30 ನಿಮಿಷಗಳ ಕಾಲ ಅಡಚಣೆ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು.
ಖಾಸಗಿ ಪಾರ್ಮ್ ಹೌಸ್ನಲ್ಲಿ ಆಯೋಜಿಸಿದ್ದ ಹುಟ್ಟುಹಬ್ಬದ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಂಜುನಾಥ್ಗೌಡ, ನಟ ಅಭಿಷೇಕ್ ಅಂಬರೀಶ್ ಭಾಗಿಯಾಗಿ, ರಘು ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಇದೇ ವೇಳೆ ವೇದಿಕೆಯಲ್ಲಿ ಮಾತನಾಡಿದ ನಟ ಅಭಿಶೇಕ್, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಂಜುನಾಥ್ ಗೌಡ ಅವರು ಗೆದ್ದು ವಿಧಾನಸೌಧಕ್ಕೆ ಹೋಗಬೇಕಿದೆ. ಅದು ನನ್ನ ಮತ್ತು ನನ್ನ ತಾಯಿಯ ಕೋರಿಕೆಯೂ ಆಗಿದೆ. ಹಾಗಾಗಿ ನಾನೇ ಬಂದು ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುವೆ ಎಂದರು.
ಭಾಷಣ ಮುಗಿಸುವ ವೇಳೆ ಅಭಿಮಾನಿಗಳು ಅಂಬರೀಶ್ ಅವರ ಡೈಲಾಗ್ ಹೇಳಲು ಒತ್ತಾಯಿಸಿದರು. ಅಂಬರೀಶ್ ನಟನೆಯ ಸಿನಿಮಾವೊಂದರ 'ನಾನ್ ಹೀರೋನೇ ಏನಿವಾಗ' ಎನ್ನುವ ಡೈಲಾಗ್ ಅನ್ನ ತಂದೆಯ ಕಂಠಧ್ಚನಿಯಲ್ಲೇ ಹೇಳುತ್ತಾ ಎಲ್ಲರನ್ನ ರಂಜಿಸಿದರು.
ಇದನ್ನೂ ಓದಿ: ಮೊದಲು ನಿಮ್ಮ ಊರು ಕಾಯಿರಿ, ಆಮೇಲೆ ದೇಶ ಕಾಯಿರಿ – ಸಿ.ಟಿ. ರವಿ ವಿರುದ್ಧ ಋಷಿಕುಮಾರ ಸ್ವಾಮೀಜಿ ಆಕ್ರೋಶ
ಅಧಿಕಾರ ಇಲ್ಲದ್ದಾಗ ಸಿಗುವ ಬೆಲೆಯೇ ಬೇರೆ - ಮಂಜುನಾಥ್ ಗೌಡ
ಬಹುದಿನಗಳ ನಂತರ ಮಾಲೂರು ತಾಲೂಕಿಗೆ ಆಗಮಿಸಿದ್ದ ಮಾಜಿ ಶಾಸಕ ಮಂಜುನಾಥ್ ಗೌಡ ಮುಂದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆಂಬ ಮಾತು ಕೇಳಿಬರುತ್ತಿದೆ. ಆದರೆ ರಾಜಕೀಯದ ಬಗ್ಗೆ ಅವರನ್ನ ಕೇಳಿದಾಗಲೆಲ್ಲ, ಆ ಬಗ್ಗೆ ಮಾತನಾಡೋದೆ ಬೇಡ, ಈಗ ರಾಜಕೀಯ ಕೆಟ್ಟಿದೆ. ಜನರು ನನಗೆ ಬಹುಮತ ನೀಡಿಲ್ಲ. ಹಾಗಾಗಿ ನಾನು ಸುಮ್ಮನಿದ್ದೇನೆ ಎಂದಿದ್ದಾರೆ.
ವೇದಿಕೆಯಲ್ಲಿ ಎಲ್ಲರನ್ನ ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯದಲ್ಲಿ ಶಾಸಕನಾದಾಗ ಸಿಕ್ಕ ಬೆಲೆಯೇ ಬೇರೆಯಿದೆ. ಅಧಿಕಾರ ಇಲ್ಲದ್ದಾಗ ಸಿಗುವ ಬೆಲೆಯಲ್ಲಿ ವ್ಯತ್ಯಾಸವಿದೆ. ಆದರೆ ನಾನು ಸೋತಾಗಲು ನನ್ನ ಬೆಂಬಲಕ್ಕೆ ಅಭಿಷೇಕ್ ಅಂಬರೀಶ್ ನಿಂತು ಧೈರ್ಯ ತುಂಬಿದ್ದರು ಎಂದು ಹಾಡಿ ಹೊಗಳಿದರು.
ಇದನ್ನೂ ಓದಿ: Bangalore Rain: ನಿವಾರ್ ಚಂಡಮಾರುತದ ಎಫೆಕ್ಟ್; ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ, ಸಂಜೆ ಮಳೆ ಸಾಧ್ಯತೆ
ದಿವಂಗತ ಅಂಬರೀಶ್ ಅವರಿಗೆ ಹೊಟ್ಟೆ ಕಿಚ್ಚು ಇರಲಿಲ್ಲ. ಅವರ ಕುಟುಂಬದವರಿಗೂ ಅಂಥದ್ದೆ ಗುಣವಿದೆ. ಅಭಿಷೇಕ್ ಅಂಬರೀಶ್ ಹೃದಯವಂತಿಕೆಯಿಂದ ಸ್ವಚ್ಚವಾಗಿದ್ದಾರೆ. ಅಂತಹವರ ಸ್ನೇಹ ಸಿಗುವುದು ಅಪರೂಪ. ಮುಂದೆ ಅಭಿಷೇಕ್ ಅಂಬರೀಶ್ ಅವರ ಅಭಿಮಾನಿಗಳ ಸಂಘವನ್ನ ಕಟ್ಟಿ ಅವರ ಮುಂದಿನ ಸಿನಿಮಾ ಪ್ರಚಾರ ಮಾಡೋಣ ಎಂದು ತಿಳಿಸಿದರು.
ಒಟ್ಟಿನಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ ಅವರ ರಾಜಕೀಯದ ಮುಂದಿನ ನಿರ್ಧಾರದ ಬಗ್ಗೆ ಸಾಕಷ್ಟು ಕುತೂಹಲವಿದೆ. ಬಿಜೆಪಿ ಸೇರುವ ಬಗ್ಗೆ ಸ್ಪಷ್ಟತೆ ನೀಡದೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.
ವರದಿ: ರಘುರಾಜ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ