ಜನಾಶೀರ್ವಾದ ಯಾತ್ರೆಯ ಬದಲು ಬಿಜೆಪಿಯವರು ಹೆಣಾಶೀರ್ವಾದ ಯಾತ್ರೆ ಮಾಡಲಿ: ಆಮ್​ ಆದ್ಮಿ ಪಕ್ಷ ವ್ಯಂಗ್ಯ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರು ಸಂಭ್ರಮಿಸಿದಂತೆ ಯಾದಗಿರಿಯಲ್ಲಿ ಕೇಂದ್ರ ಸಚಿವ ಖೂಬಾ ಅಭಿಮಾನಿಗಳು ಬಂದೂಕಿನಿಂದ ಗುಂಡುಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ. ಸರ್ಕಾರಕ್ಕೆ ನೈತಿಕತೆ ಇದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ” ಎಂದು ಆಗ್ರಹಿಸಿದರು.

ಎಎಪಿ

ಎಎಪಿ

 • Share this:
  ಬಿಜೆಪಿ ಎಂದಿಗೂ ಜನರ ಬಗ್ಗೆ ಕಾಳಜಿ ವಹಿಸದ ಪಕ್ಷ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಕ್ಕೆ, ದೇಶಕ್ಕೆ ಸೂತಕದ ಛಾಯೆ ಅಡಗಿದೆ. ರಾಜ್ಯದ ಸಾವಿರಾರು ಜನರು ಕೋವಿಡ್‌ಗೆ ಬಲಿಯಾಗುತ್ತಿದ್ದಾಗ ನೆರವಿಗೆ ಬಾರದೆ ಅವಿತು ಕುಳಿತು ಈಗ ದಿಢೀರ್‌ ಪ್ರತ್ಯಕ್ಷರಾಗಿರುವ ಬಿಜೆಪಿ ನಾಯಕರು ಜನ ಆಶೀರ್ವಾದ ಯಾತ್ರೆ ಮಾಡುತ್ತಿದ್ದು, ಇದನ್ನು ಹೆಣಾಶೀರ್ವಾದ ಯಾತ್ರೆ ಎಂದು ಕರೆಯುವುದು ಸೂಕ್ತ ಎಂದು ಆಮ್​ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಜಗದೀಶ್​ ವಿ ಸದಂ ಅವರು, “ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸೋಂಕಿತರಿಗೆ ಬೆಡ್‌, ಆಕ್ಸಿಜನ್‌ ಕಲ್ಪಿಸುವುದನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮವಾಗಿ ಮೂರು ಲಕ್ಷಕ್ಕೂ ಅಧಿಕ ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ. ಈ ಗಂಬೀರ ವಿಚಾರವನ್ನು ಸಮೀಕ್ಷೆ ನಡೆಸಿದ ಸಂಸ್ಥೆಗಳು ಸೇರಿದಂತೆ ಅನೇಕ ಮಾಧ್ಯಮಗಳ ವರದಿಗಳನ್ನು ಗಮನಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಬಿಜೆಪಿ ನಾಯಕರು ಜನಾಶೀರ್ವಾದ ಹೆಸರಿನಲ್ಲಿ ಸುಳ್ಳುಗಳನ್ನು ಪ್ರಚಾರ ಮಾಡುವ ಬದಲು ಹೆಣಾಶೀರ್ವಾದ ಹೆಸರಿನಲ್ಲಿ ಸ್ಮಶಾನಕ್ಕೆ ಹೋಗಿ, ಇಷ್ಟೊಂದು ಮೃತಪಟ್ಟ ಶವಗಳು ಇಲ್ಲಿಗೆ ಏಕೆ ಬಂದಿವೆ ಎಂಬುದನ್ನು ವಿಚಾರಿಸಲಿ” ಎಂದು ಕಿಡಿಕಾರಿದರು.
   ಅಗತ್ಯ ವಸ್ತುಗಳ ಬೆಲೆ ದಿನದಿನಕ್ಕೆ ಏರುತ್ತಲೇ ಇದೆ. 80 ರೂಪಾಯಿಗೆ ಸಿಗುತ್ತಿದ್ದ ಅಡುಗೆ ಎಣ್ಣೆಯ ಬೆಲೆ 150 ರೂಪಾಯಿಗೂ ಅಧಿಕವಾಗಿದೆ. ಕಳೆದ ಕೆಲವು ವರ್ಷಗಳಿಂದ ಕಚ್ಚಾ ತೈಲದ ಬೆಲೆ ಕಡಿಮೆಯಾಗುತ್ತಿದ್ದರೂ ತೆರಿಗೆಯನ್ನು ಏರಿಸಿದ್ದರಿಂದ ಭಾರತೀಯರು ಪೆಟ್ರೋಲ್‌, ಡೀಸೆಲ್‌ಗೆ ದುಬಾರಿ ಬೆಲೆ ತೆರಬೇಕಾಗಿದೆ. ಪ್ರತಿ ಲೀಟರ್‌ ಪೆಟ್ರೋಲ್‌ಗೆ 9 ರೂ. ಇದ್ದ ಕೇಂದ್ರ ಸರ್ಕಾರದ ತೆರಿಗೆಯನ್ನು ಮೋದಿ ಸರ್ಕಾರ ಹಂತಹಂತವಾಗಿ 32 ರೂ.ಗೆ ಏರಿಕೆ ಮಾಡಿದೆ. ಕೇಂದ್ರ ಸರ್ಕಾರವು ಅಡುಗೆ ಅನಿಲ (ಎಲ್‌ಪಿಜಿ) ಸಿಲೆಂಡರ್‌ ಸಬ್ಸಿಡಿಯನ್ನು ರದ್ದುಪಡಿಸಿದ್ದರಿಂದ 450 ರೂಪಾಯಿಗೆ ಜನರಿಗೆ ಸಿಗುತ್ತಿದ್ದ ಸಿಲೆಂಡರ್‌ಗೆ ಈಗ 900 ರೂಪಾಯಿ ಕೊಡಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
  ಬಿಜೆಪಿಯ ದೇಶಪ್ರೇಮ, ಹಿಂದುತ್ವ ಕೇವಲ ಭಾಷಣಕ್ಕೆ ಹಾಗೂ ಗಲಭೆ ಸೃಷ್ಟಿಸುವುದಕ್ಕೆ ಸೀಮಿತ. “ಹಿಂದೂ ರಾಷ್ಟ್ರ” ಮಾಡುತ್ತೇವೆ ಎಂದು ಹೇಳಿದವರು “ಹಿಂದುಳಿದ ರಾಷ್ಟ್ರ” ಮಾಡುತ್ತಿದ್ದಾರೆ. ಕೃಷಿ ಕಾಯಿದೆ, ಸಿಎಎ, ಎನ್‌ಆರ್‌ಸಿ ಮುಂತಾದವುಗಳಿಗೆ ತಿದ್ದುಪಡಿ ತಂದು ದೇಶದಲ್ಲಿ ಅಶಾಂತಿ ಸೃಷ್ಟಿಸಿದ್ದೇ ಕೇಂದ್ರ ಸರ್ಕಾರದ ಸಾಧನೆ ಎಂದು ಜಗದೀಶ್ ಸದಂ ವ್ಯಂಗ್ಯವಾಡಿದ್ದಾರೆ.

  ಆಪ್ ಕಚೇರಿ ಕಾರ್ಯದರ್ಶಿ ವೀಣಾ ಸೆರ್ರಾವ್‌ರವರು ಮಾತನಾಡಿ, “ಜನಾಶೀರ್ವಾದ ಯಾತ್ರೆಯಲ್ಲಿ ಕೋವಿಡ್‌ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಲಾಗುತ್ತಿದೆ. ಜನರಿಗೆ ಮಾತ್ರ ಬಿಗಿ ನಿಯಮಗಳನ್ನು ಜಾರಿಗೆ ತಂದು, ಸಚಿವರು ಮಾತ್ರ ಸ್ವೇಚ್ಛಾಚಾರದಿಂದ ಸಾವಿರಾರು ಬೆಂಬಲಿಗರನ್ನು ಸೇರಿಸುವುದು ಎಷ್ಟು ಸರಿ? ರಾಜ್ಯದಲ್ಲಿ ಬಿಜೆಪಿ ಸಚಿವರಿಗೇ ಒಂದು ಕಾನೂನು, ಸಾಮಾನ್ಯ ಜನರಿಗೆ ಮತ್ತೊಂದು ಕಾನೂನು ಎಂಬಂತಾಗಿದೆ.

  ಆರ್​ಎಸ್​ಎಸ್​ಅನ್ನು ತಾಲಿಬಾನಿಗೆ ಹೋಲಿಸಿದ ಕಾಂಗ್ರೆಸ್​ ನಾಯಕ ಧ್ರುವನಾರಾಯಣ್​; ಬಿಜೆಪಿ ಪಾಳಯ ಕೆಂಡಾಮಂಡಲ

  ಈ ಬಗ್ಗೆ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿದ್ದರೂ ಸಚಿವರುಗಳು ತಮ್ಮ ನಡೆಯನ್ನು ಬದಲಿಸಿಕೊಳ್ಳದಿರುವುದು ದುರಂತ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರು ಸಂಭ್ರಮಿಸಿದಂತೆ ಯಾದಗಿರಿಯಲ್ಲಿ ಕೇಂದ್ರ ಸಚಿವ ಖೂಬಾ ಅಭಿಮಾನಿಗಳು ಬಂದೂಕಿನಿಂದ ಗುಂಡುಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ. ಸರ್ಕಾರಕ್ಕೆ ನೈತಿಕತೆ ಇದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ” ಎಂದು ಆಗ್ರಹಿಸಿದರು.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: