• Home
  • »
  • News
  • »
  • district
  • »
  • ಸ್ವಂತ ಸೂರಿಲ್ಲದೆ ಅಲೆಮಾರಿ ಜೀವನ ಸಾಗಿಸಿದ್ದ ಯುವತಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆ

ಸ್ವಂತ ಸೂರಿಲ್ಲದೆ ಅಲೆಮಾರಿ ಜೀವನ ಸಾಗಿಸಿದ್ದ ಯುವತಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆ

ಮಮತಾ

ಮಮತಾ

ತಾನು ಪಟ್ಟ ಕಷ್ಟ ನೋವುಗಳನ್ನು ದಿಟ್ಟವಾಗಿ ಎದುರಿಸಿ ಬಿಎಸ್‌ಸಿ ಪದವಿ ಪಡೆದು ತನ್ನ ಕರ್ಮಭೂಮಿಯಲ್ಲೇ ರಾಜಕೀಯ ಪ್ರವೇಶಿಸಿದ ಅಲೆಮಾರಿ ಯುವತಿ ಈಗ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ

  • Share this:

ಮಂಗಳೂರು (ಜನವರಿ 01): ರಾಜಕೀಯದಲ್ಲಿ ಗುರುತಿಸಿಕೊಳ್ಳಬೇಕಾದರೆ‌ ಆ ವ್ಯಕ್ತಿಯಲ್ಲಿ ರಾಜಕೀಯದ ಅನುಭವ ಇರಬೇಕು. ಕೈಯಲ್ಲಿ ಹಣದ ಹೊಳೆ ಹರಿಸುವ ತಾಕತ್ತೂ ಇರಬೇಕು. ಈ ತಾಕತ್ತುಗಳ ನಡುವೆ ಜನರ ಕಷ್ಟ ಗಳನ್ನು ಅಥೈಸುವ ಮೂಲಕ ನಿಜವಾದ ಜನನಾಯಕನಾಗಿ ಹೊರಹೊಮ್ಮಲೂ ಸಾಧ್ಯವಿದೆ ಎನ್ನುವುದನ್ನು ಸಾಧಿಸಿ ತೋರಿಸಿದ ದಿಟ್ಟ ಯುವತಿಯೊಬ್ಬಳು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆ ನಡೆದ ಬಳಿಕ ಬೆಳಕಿಗೆ ಬಂದಿದ್ದಾರೆ. ತಾನು ಪಟ್ಟ ಕಷ್ಟ ನೋವುಗಳನ್ನು ದಿಟ್ಟವಾಗಿ ಎದುರಿಸಿ ಬಿಎಸ್‌ಸಿ ಪದವಿ ಪಡೆದು ತನ್ನ ಕರ್ಮಭೂಮಿಯಲ್ಲೇ ರಾಜಕೀಯ ಪ್ರವೇಶಿಸಿದ ಅಲೆಮಾರಿ ಯುವತಿ ಈಗ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಉಡುಪಿ ಮೂಲದವರಾದ ಮಮತಾ ತಂದೆ ಕೃಷ್ಣಪ್ಪ, ತಾಯಿ ಪ್ರೇಮ ವಲಸೆ ಕಾರ್ಮಿಕರಾಗಿ ಊರುರು ಸುತ್ತಿ ಬೀದಿ ಬದಿ ಡೇರೆ ಹಾಕಿ ಜೀವನ ನಡೆಸುತ್ತಿದ್ದರು.


1995 ರಂದು ಏಕಾಏಕಿ ಕಾಣೆಯಾದ ತಂದೆಯ ನೆನಪಲ್ಲೇ ತಾಯಿ ಪ್ರೇಮ ಹಾಗೂ ಅವರ ಮೂವರು ಮಕ್ಕಳಾದ ಶಿವ, ಬೋಜ, ಮಮತ ಪಜಿರು ಹಾಗೂ ಪಾವೂರು, ಇನೋಳಿಯ ರಸ್ತೆ ಬದಿ, ಶೌಚಾಲಯ ಕೊಠಡಿ, ದನದ ಹಟ್ಟಿಯಲ್ಲಿ ವಾಸವಾಗಿದ್ದರು. ಶಿವ ಕ್ಯಾನ್ಸರ್ ಕಾಯಿಲೆ ತುತ್ತಾಗಿ ಅನಾರೋಗ್ಯದಿಂದಿದ್ದರೆ, ಬೋಜ ಹಾಗೂ ಮಮತ ಅವರನ್ನು ಸ್ಥಳೀಯ ಶಿಕ್ಷಕ ಮಧು ಮೇಷ್ಟ್ರ ತನ್ನದೇ ಮುತುವರ್ಜಿಯಲ್ಲಿ ಮಲಾರ್‌ಪದವು ಶಾಲೆಗೆ ಸೇರಿಸಿದ್ದರು.


ತಾಯಿಗೆ ಕೋರೆ ಕೆಲಸ, ಪತಿ ನಾಪತ್ತೆಯದ ದುಃಖದ ನಡುವೆಯೂ ತಾಯಿ ಪ್ರೇಮ ಸ್ಥಳೀಯ ಕೋರೆ ಹಾಗೂ ಮನೆ ಮನೆ ತೆರಳಿ ಕಾರ್ಮಿಕರಾಗಿ ದುಡಿದು ವಿದ್ಯಾಭ್ಯಾಸ ನಡೆಸುವ ಮಕ್ಕಳ ಜತೆ ಡೇರೆಯಲ್ಲೇ ದಿನ ಕಳೆದಿದ್ದರು. 2006ರಿಂದ ಮಮತ ಅವರು ಮಚ್ಚಿನ ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ, ದೇರಳಕಟ್ಟೆ ಮೊರಾರ್ಜಿ ದೇಸಾಯಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಿಯುಸಿ ಪಾಸಾಗಿದ್ದರು. ನಂತರ ಮಂಗಳೂರಿನ ಕೊಲಾಸೋ ವಿದ್ಯಾಸಂಸ್ಥೆಯಲ್ಲಿ 3 ವರ್ಷದ ಲ್ಯಾಬ್ ಟೆಕ್ನಿಷಿಯನ್ ಡಿಪ್ಲೊಮಾ ಪದವಿ ಪೂರೈಸಿದ್ದರು.


ಕೊಳಗೇರಿಯಲ್ಲಿದ್ದು ಮೆಡಿಕಲ್ ಬಿಎಸ್ಸಿ ಪದವಿ :


ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸು ಹೊಂದಿದ್ದ ಮಮತಾ ಸ್ಥಳೀಯ ಪತ್ರಕರ್ತರ ಹಾಗೂ ದಾನಿಗಳ ಸಹಕಾರದಿಂದ ಬೆಂಗಳೂರಿಗೆ ತೆರಾಲಿ 4 ವರ್ಷಗಳ ಕಾಲ ಬೆಂಗಳೂರಿನ ಬೆಂಗಳೂರು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣಕ್ಕೆ ಸೇರಿದ್ದರು. 2019ರಲ್ಲಿ ಮೆಡಿಕಲ್ ವಿಭಾಗದಲ್ಲಿ ಬಿಎಸ್​ಸಿ ಪದವಿಧರೆಯಾಗಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು. ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಶಿಕ್ಷಣ ಪಡೆಯುವ ಸಾವಿರಾರು ವಿದ್ಯಾರ್ಥಿಗಳ ಮಧ್ಯೆ ಬೆಂಗಳೂರಿನ ಆನೆಪಾಳ್ಯ ಎಂಬ ಕೊಳೆಗೇರಿ ಪ್ರದೇಶದಲ್ಲೇ ವಾಸಿಸುತ್ತಲೇ ಮಮತಾ ಅವರು ಮೆಡಿಕಲ್ ಬಿಎಸ್​ಸಿ ಪದವಿಧರೆಯಾಗಿದ್ದಾರೆ ಎಂಬುದೇ ವಿಶೇಷ‌. ಹತ್ತಾರು ವರ್ಷಗಳ ಕಾಲ ರಸ್ತೆ ಬದಿಯಲ್ಲಿ ಡೇರೆ ನಿರ್ಮಿಸಿ ಬದುಕು ಸಾಗಿಸಿದ್ದ ಮಮತಾ ಕುಟುಂಬಕ್ಕೆ ಆ ಕಾಲದಲ್ಲಿ ಒಂದು ಮನೆ ಸೌಲಭ್ಯವನ್ನು ಕಲ್ಪಿಸುವ ಜವಾಬ್ದಾರಿಯನ್ನು ಅಂದಿನ ಆಡಳಿತಗಳು ನಡೆಸಿಲ್ಲ.


ನನ್ನ ಜೀವನ ನನಗೆ ಬದುಕುವ ಪಾಠ ಕಲಿಸಿದೆ. ದೇಶದ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಸಂಪತ್ತಿನ ಸಮಾನ ಹಂಚಿಕೆ, ಬಳಕೆಯಾಗದಿರುವುದರಿಂದಲೇ ಹಳ್ಳಿಯ ಜನರು ಬಡತನದಲ್ಲೇ ಕಳೆಯುವಂತಾಗಿದೆ. ನನಗೆ ನನ್ನ ಜೀವನ ರೂಪಿಸುವಂತಹ ಶಿಕ್ಷಣ ದೊರೆಯದ ಕಾರಣ ಗ್ರಾಮೀಣ ಭಾಗದ ಜನತೆ ಇನ್ನೂ ತಮ್ಮ ಸ್ಟಷ್ಟ ಜೀವನ ರೂಪಿಸುವಂತಹ ವ್ಯವಸ್ಥೆಯಾಗಿಲ್ಲ. ಈ ನಿಟ್ಟಿನಲ್ಲಿ ನಾನು ಓಡಾಡಿ ಬೆಳೆದ ಹಳ್ಳಿಗೆ ಮತ್ತೆ ಹಿಂತಿರುಗುವ ಯೋಜನೆ ಮಾಡಿದೆ.


ಇದನ್ನೂ ಓದಿ : ಗ್ರಾ.ಪಂ. ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ ; ನೈತಿಕ ಹೊಣೆ ಹೊತ್ತು ರೇವೂರ ರಾಜೀನಾಮೆಗೆ ಆಗ್ರಹ


ಪ್ರಸ್ತುತ ನನ್ನ ಯೋಜನೆಗೆ ರಾಜಕೀಯ ಬೆಂಬಲವೂ ಸಿಕ್ಕಿದೆ. ನಾನು ನಡೆದು ಬಂದ ಅಲೆಮಾರಿ ಜೀವನ, ಕಷ್ಟದ ದಾರಿ ನನಗೆ ನೆನಪಿದೆ, ಅಂತಹ ಕಷ್ಟ ಮುಂದೆ ಯಾರಿಗೂ ಬರಬಾರದು ಎಂಬ ಆಸೆಯೊಂದಿಗೆ ರಾಜಕೀಯ ಪ್ರವೇಶಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.


ಹೊಸದಾಗಿ ಆಯ್ಕೆಯಾದ ಮಮತಾಗೆ ಬಿಜೆಪಿ ಪಕ್ಷವೂ ಬೆಂಬಲ ಸೂಚಿಸಿದ ಕಾರಣ ಮಮತಾ ಇದೀಗ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

Published by:G Hareeshkumar
First published: