ಕೊಡಗು: ಎರಡು ದಿನಗಳಿಂದ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ ಯುವಕ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್ಗಾಗಿ ಕಾದು ಕಾದು ಕೊನೆಗೆ ರಸ್ತೆಯಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೊಡಗು ಜಿಲ್ಲೆ ಬಜಗುಂಡಿಯಲ್ಲಿ ನಡೆದಿದೆ. ಸೋಮವಾರಪೇಟೆ ತಾಲ್ಲೂಕಿನ ಬಜೆಗುಂಡಿಯ ಯುವಕ ಮನು ಮೃತ ಯುವಕ. ಎರಡು ದಿನಗಳಿಂದ ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಯುವಕ ಮನು ಮೊನ್ನೆಯಷ್ಟೇ ಸೋಮವಾರಪೇಟೆ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಿದ್ದನಂತೆ. ಆದರೆ ಯುವಕನಿಗೆ ತೀವ್ರವಾಗಿ ಜ್ವರ ಮತ್ತು ಕೆಮ್ಮು ಇದ್ದಿದ್ದರಿಂದ ಆತನನ್ನು ಮಡಿಕೇರಿ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಲಾಗಿತ್ತಂತೆ.
ಬುಧವಾರ ಬೆಳಿಗ್ಗೆಯೇ ಮಡಿಕೇರಿಯ ಆ್ಯಂಬುಲೆನ್ಸ್ಗೆ ಬಜೆಗುಂಡಿ ಆಶಾ ಕಾರ್ಯಕರ್ತೆ ಫೋನ್ ಮಾಡಿದ್ದರಂತೆ. ಪೋನ್ ಮಾಡಿದವರು, ಯುವಕ ಮನುನನ್ನು ಬಸ್ ನಿಲ್ದಾಣಕ್ಕೆ ಕರೆತಂದಿದ್ದರಂತೆ. ಆದರೆ ಮಧ್ಯಾಹ್ನವಾದರೂ ಆ್ಯಂಬುಲೆನ್ಸ್ ಬಾರದಿದ್ದರಿಂದ ಯುವಕವನ್ನು ಬಸ್ ನಿಲ್ದಾಣದಲ್ಲೇ ಇರುವಂತೆ ಹೇಳಿ ಆಶಾ ಕಾರ್ಯಕರ್ತೆ ತಮ್ಮ ಮನೆಗೆ ತೆರಳಿದ್ದಾರೆ. ಅತ್ತ ಎಷ್ಟು ಹೊತ್ತಾದರೂ ಆ್ಯಂಬುಲೆನ್ಸ್ ಬಂದಿಲ್ಲ. ಈ ನಡುವೆ ಯುವಕ ಮನು ತೀವ್ರವಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದು ಬಜೆಗುಂಡಿಯ ರಸ್ತೆಯಲ್ಲೇ ಮೃತಪಟ್ಟಿದ್ದಾನೆ.
ತನ್ನ ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮನೆಯಲ್ಲಿದ್ದ ತಾಯಿ ಗೌರಿ ಸಂಜೆ ಐದು ಗಂಟೆ ಸಂದರ್ಭದಲ್ಲಿ ಯಾರೋ ಕರೆ ಮಾಡಿ ನಿಮ್ಮ ಮಗ ರಸ್ತೆಯಲ್ಲಿ ಬಿದ್ದು ಹೋಗಿರುವುದಾಗಿ ಹೇಳಿದ್ದಾರೆ. ಮನೆಯಿಂದ ಬಂದು ಗೌರಿ ಅವರು ನೋಡಿದಾಗ ತಮ್ಮ ಮಗ ಮನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ರಸ್ತೆಯಲ್ಲೇ ಬಿದ್ದಿದ್ದ ತನ್ನ ಮಗನ ಮೃತದೇಹವನ್ನು ತಬ್ಬಿ ತಾಯಿ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಇದನ್ನು ಓದಿ: ಜನರ ಮೇಲೆ ಕಳಕಳಿ, ಪ್ರೀತಿ ಇದ್ದರೆ ಕೊರೋನಾ ತಡೆಯಲು ನೀವು ಬಂದು ಕೆಲಸ ಮಾಡಿ; ಕಾಂಗ್ರೆಸ್ ನಾಯಕರಿಗೆ ಶ್ರೀರಾಮುಲು ಆಹ್ವಾನ
ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ಅಪ್ಪಚ್ಚು ರಂಜನ್
ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರಿಗೆ ಧೈರ್ಯ ತುಂಬುವ ದೃಷ್ಟಿಯಿಂದ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕುಶಾಲನಗರ ಸಮೀಪದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ ಗೆ ಅಪ್ಪಚ್ಚು ರಂಜನ್ ಪಿಪಿಇ ಕಿಟ್ ಧರಿಸಿ ಭೇಟಿ ನೀಡಿದ್ದರು. ಸೋಂಕಿತರ ಆರೋಗ್ಯ ವಿಚಾರಿಸಿ, ಚಿಕಿತ್ಸೆ ಪಡೆದು ಬೇಗ ಚೇರಿಸಿಕೊಳ್ಳುವಂತೆ ಕಿವಿಮಾತು ಹೇಳಿದ್ದರು.
ಅಲ್ಲದೇ ಸೋಮವಾರಪೇಟೆ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಮಾತನಾಡಿದ ಅವರು ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಆದರೆ ಸೋಂಕಿತರಿಗೆ ಧೈರ್ಯ ತುಂಬುವುದಕ್ಕಾಗಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು. ಆದರೆ ಅದೇ ದಿನ ಆ್ಯಂಬುಲೆನ್ಸ್ ತೀರ ತಡವಾಗಿ ಬಂದಿದ್ದರಿಂದ ಯುವಕ ರಸ್ತೆಯಲ್ಲೇ ಕುಸಿದು ಮೃತಪಟ್ಟಿರುವುದು ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಕೊರತೆಗಳಿವೆ ಎಂಬುದನ್ನು ಸಾಬೀತು ಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ