ಕೊಡಗು: ಆ ಮಕ್ಕಳಿಗೆ ಬಂದಿರೋದು ಡೆಂಘಿ ಜ್ವರವೂ ಅಲ್ಲ, ಚಿಕನ್ ಗುನ್ಯವೂ ಅಲ್ಲ. ಆದ್ರೂ ಆ ಮಕ್ಕಳು ಮಾತ್ರ ವಿಚಿತ್ರ ಜ್ವರದಿಂದ (Weird Fever)ಬಳಲುತ್ತಿದ್ದಾರೆ. ಹೌದು ಕೊಡಗು ಜಿಲ್ಲೆಯ ಕುಶಾಲನಗರ (Kushalanagara) ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಕ್ಕಳಿಗೆ ವಿಚಿತ್ರ ಜ್ವರ ಕಾಣಿಸಿಕೊಂಡಿದೆ. ಕುಶಾಲನಗರ ಪಟ್ಟಣ, ಮುಳ್ಳುಸೋಗೆ ಗ್ರಾಮ ಮತ್ತು ಜನತಾ ಕಾಲೋನಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 30 ಕ್ಕೂ ಹೆಚ್ಚು ಮಕ್ಕಳಿಗೆ ವಿಚಿತ್ರ ಜ್ವರ ಕಾಣಿಸಿಕೊಂಡಿದೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಜ್ವರ, ಬಳಿಕ ಅದು ತೀವ್ರ ಸ್ವರೂಪಕ್ಕೆ ತಿರುಗುತ್ತಿದೆ. ಅಷ್ಟೇ ಅಲ್ಲ, ಜ್ವರ ಜಾಸ್ತಿ ಆಗುತ್ತಿದ್ದಂತೆ ಮಕ್ಕಳ ಮೈ ಕೈಗಳಲೆಲ್ಲಾ ತುರಿಕೆ, ಬೊಬ್ಬೆಗಳು ಕಾಣಿಸಿಕೊಳ್ಳುತ್ತಿವೆ. ಜೊತೆಗೆ ವಾಂತಿಯೂ ಆಗುತ್ತಿದೆ ಎನ್ನೋದು ಸ್ಥಳೀಯ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯೆ ಪದ್ಮ ಅವರ ಅಭಿಪ್ರಾಯ.
ಜ್ವರ ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಗೆ ತೋರಿಸಿದೆವು. ಆದರೆ ನಿರಂತರವಾಗಿ ಜ್ವರ ಜಾಸ್ತಿಯಾಗಿ ಬಳಿಕ ಮೈಯಲೆಲ್ಲಾ ಬೊಬ್ಬೆಗಳು ಮೂಡಿದವು. ಇದು ನಮ್ಮನ್ನು ತೀವ್ರ ಆತಂಕಕ್ಕೆ ದೂಡಿದೆ. ವೈದ್ಯರನ್ನು ಕೇಳಿದರೆ ಸೊಳ್ಳೆಗಳ ಕಡಿತದಿಂದಾಗಿ ಹೀಗೆ ಆಗಿದೆ ಎನ್ನೋ ಉತ್ತರ ಬರುತ್ತಿದೆ. ದಯಮಾಡಿ ಸ್ಥಳೀಯ ಪಂಚಾಯಿತಿಯವರು ಸೊಳ್ಳೆಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು ಎನ್ನೋದು ಪೋಷಕರಾದ ರಾಕಿ ಅವರ ಒತ್ತಾಯ. ಈ ಮಕ್ಕಳ ಆರೋಗ್ಯ ಪರಿಶೀಲನೆ ಮಾಡಿದರೆ ಮಕ್ಕಳಿಗೆ ಕೋವಿಡ್ ಆಗಲಿ, ಡೆಂಘಿ ಅಥವಾ ಚಿಕನ್ ಗುನ್ಯವಾಗಲಿ ಎಲ್ಲವುಗಳ ವರದಿಯೂ ನೆಗೆಟಿವ್ ಎಂದು ಬರುತ್ತಿವೆ. ಆಸ್ಪತ್ರೆಗಳಿಗೆ ಕರೆದೊಯ್ದರೆ, ಅಂತಹ ಮಕ್ಕಳ ಚಿಕಿತ್ಸೆಗೆ ವೈದ್ಯರು ಮೈಸೂರಿಗೆ ರೆಫರ್ ಮಾಡುತ್ತಿದ್ದಾರೆ. ಇದರಿಂದ ಪೋಷಕರು ಕೂಡ ತೀವ್ರ ಆತಂಕಕ್ಕೆ ಒಳಗಾಗುತ್ತಿದ್ದಾರೆ.
ಹೆಚ್ಚಿನ ಮಕ್ಕಳಿಗೆ ಹೀಗೆ ವಿಚಿತ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಡಗು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ಮಕ್ಕಳ ಪೋಷಕರಿಂದ ಚಿಕಿತ್ಸೆ ಕೊಡಿಸಿರುವ ವರದಿಗಳನ್ನು ಪಡೆದು ಪರಿಶೀಲನೆ ಮಾಡಿದ್ದಾರೆ. ಈ ವಿಚಿತ್ರ ಜ್ವರದ ಕುರಿತು ಕೊಡಗು ಡಿಎಚ್ಓ ಅವರನ್ನು ವಿಚಾರಿಸಿದರೆ, ಜ್ವರದಿಂದ ಬಳಲಿದ ಮಕ್ಕಳಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸೊಳ್ಳೆ ಕಡಿತದಿಂದ ಇಂತಹ ಜ್ವರ ಕಾಣಿಸಿಕೊಳ್ಳುತ್ತಿರಬಹುದು. ಆದರೆ ಖಾಸಗಿ ಆಸ್ಪತ್ರೆಗಳು ಅದನ್ನೇ ಜನರಿಗೆ ಭಯ ಪಡಿಸಿರಲೂಬಹುದು. ಮಕ್ಕಳಿಗೆ ಚಿಕಿತ್ಸೆ ನೀಡಿರುವ ಮೈಸೂರಿನ ಖಾಸಗಿ ಆಸ್ಪತ್ರೆಯಿಂದ ಮಾಹಿತಿಯನ್ನೂ ಪಡೆಯುತ್ತೇವೆ. ಆದರೆ ಪೋಷಕರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಮತ್ತು ಯಾವುದೇ ಆತಂಕಕ್ಕೆ ಒಳಗಾಗಬೇಡಿ. ಕುಶಾಲನಗರದ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಿದ್ದಾರೆ. ಅಲ್ಲಿಯೇ ಚಿಕಿತ್ಸೆ ಕೊಡಿಸಿ, ಒಂದು ವೇಳೆ ವೈದ್ಯರು ಹೊರ ಜಿಲ್ಲೆಗೆ ಹೋಗುವಂತೆ ಹೇಳಿದರೆ ನನ್ನ ಗಮನಕ್ಕೆ ತನ್ನಿ. ನಾನು ಕ್ರಮ ವಹಿಸುತ್ತೇನೆ ಎಂದಿದ್ದಾರೆ. ಏನೇ ಆಗಲಿ ಕೋವಿಡ್ ಮೂರನೆ ಅಲೆಯ ಆತಂಕದ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ತೀವ್ರ ಜ್ವರ ಕಾಣಿಸಿಕೊಳ್ಳುತ್ತಿರುವುದು ಪೋಷಕರನ್ನು ಮಾತ್ರ ಆತಂಕಕ್ಕೆ ದೂಡಿರುವುದು ಸುಳ್ಳಲ್ಲ.
ಇದನ್ನು ಓದಿ: Accident: ವಿಜಯಪುರದಲ್ಲಿ ಲಾರಿ-ಟ್ಯಾಂಕರ್ ನಡುವೆ ಡಿಕ್ಕಿ, ಮೂವರು ಸಾವು; ಅಪಘಾತದಲ್ಲಿ ಗಾಯಗೊಂಡವರಿಗೆ ನಟ ಅಜಯ್ ರಾವ್ ಚಿಕಿತ್ಸೆ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ