HOME » NEWS » District » A VEHICLE RIDERS TROUBLE ON ALTERNATE ROAD DKK HK

ಶಿರಸಿ-ಕುಮಟಾ ರಾಜ್ಯ ಹೆದ್ದಾರಿ ಮೇಲ್ದರ್ಜೆ ವಿಳಂಬ ; ಪರ್ಯಾಯ ರಸ್ತೆಯಲ್ಲಿ ವಾಹನ ಸವಾರರ ಪರದಾಟ

ಶಿರಸಿ ಹೋಗಿ ಬರುವವರಿಗೆ ಯಲ್ಲಾಪುರದ ಮೇಲೆ ಎನ್‌ಎಚ್ 63ರಲ್ಲಿ ತೆರಳುವಂತೆ, ಹೊನ್ನಾವರ ಭಾಗದಿಂದ ಹೋಗುವವರು ಮಾವಿನಗುಂಡಿ ರಸ್ತೆ ಮೂಲಕ ಮತ್ತು ಕುಮಟಾದಿಂದ ಬಡಾಳ ದೊಡ್ಮನೆ ಘಟ್ಟದ ಮೂಲಕ ಸಿದ್ದಾಪುರಕ್ಕೆ ತೆರಳಿ ಶಿರಸಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ

news18-kannada
Updated:November 1, 2020, 7:48 AM IST
ಶಿರಸಿ-ಕುಮಟಾ ರಾಜ್ಯ ಹೆದ್ದಾರಿ ಮೇಲ್ದರ್ಜೆ ವಿಳಂಬ ; ಪರ್ಯಾಯ ರಸ್ತೆಯಲ್ಲಿ ವಾಹನ ಸವಾರರ ಪರದಾಟ
ಹೊಂಡಗಳಿಂದ ತುಂಬಿರುವ ಪರ್ಯಾಯ ರಸ್ತೆ
  • Share this:
ಕಾರವಾರ(ನವೆಂಬರ್​. 01): ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆರಿಸಲಾಗುತ್ತಿದ್ದು, ಗುತ್ತಿಗೆ ಪಡೆದ ಕಂಪನಿ ಕಾಮಗಾರಿಗೆ ಎರಡು ವರ್ಷಗಳ ಕಾಲಾವಕಾಶ ಕೇಳಿದೆ. ಆದರೆ, ಕರಾವಳಿ ಹಾಗೂ ಮಲೆನಾಡು ಭಾಗವನ್ನು ಬೆಸೆಯುವ ಪ್ರಮುಖ ಹೆದ್ದಾರಿಯೇ ಇದಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗದಂತೆ ತಡೆಯಲು ಜಿಲ್ಲಾಡಳಿತ ಬದಲಿ ಮಾರ್ಗಗಳನ್ನು ಸೂಚಿಸಿದೆ. ಆದರೆ ಗುರುತಿಸಿದ ಬದಲಿ ರಸ್ತೆಯೊಂದು ದುರಸ್ಥಿಗೆ ತಲುಪಿ ಹಲವು ವರ್ಷಗಳೇ ಕಳೆದಿದ್ದು, ಗುಂಡಿಗಳಿಂದಲೇ ತುಂಬಿರುವ ರಸ್ತೆಯಲ್ಲಿ ಸಂಚರಿಸುವುದು ಇದೀಗ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶಿರಸಿ-ಕುಮಟಾ-ಬೆಲೆಕೇರಿ ರಾಷ್ಟ್ರೀಯ ಹೆದ್ದಾರಿ (766 ಇಇ)ಯನ್ನಾಗಿಸಲು ಭಾರತ್ ಮಾಲಾ ಪರಿಯೋಜನಾ ಅಡಿಯಲ್ಲಿ ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯಲ್ಲಿ 60 ಕಿ.ಮೀ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆಯನ್ನು 18 ತಿಂಗಳ ಕಾಲ ಬಂದ್ ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿತ್ತು. ಅದರಂತೆ ಜಿಲ್ಲಾಡಳಿತ ಹೆದ್ದಾರಿಗಳಲ್ಲಿ ಭಾರಿ ವಾಹನಗಳಿಗೆ ನಿಷೇಧ ಹೇರಿ ಪರ್ಯಾಯ ಮಾರ್ಗ ಸೂಚಿಸಿದೆ.

ಶಿರಸಿ ಹೋಗಿ ಬರುವವರಿಗೆ ಯಲ್ಲಾಪುರದ ಮೇಲೆ ಎನ್‌ಎಚ್ 63ರಲ್ಲಿ ತೆರಳುವಂತೆ, ಹೊನ್ನಾವರ ಭಾಗದಿಂದ ಹೋಗುವವರು ಮಾವಿನಗುಂಡಿ ರಸ್ತೆ ಮೂಲಕ ಮತ್ತು ಕುಮಟಾದಿಂದ ಬಡಾಳ ದೊಡ್ಮನೆ ಘಟ್ಟದ ಮೂಲಕ ಸಿದ್ದಾಪುರಕ್ಕೆ ತೆರಳಿ ಶಿರಸಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ. ಆದರೆ, ಕುಮಟಾ ಬಡಾಳ ಸಿದ್ದಾಪುರ ಮಾರ್ಗವಾಗಿ ಸೂಚಿಸಿದ ರಸ್ತೆಯೂ ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು ಕೆಲವೆಡೆ ಸಂಚಾರ ಮಾಡುವುದಕ್ಕೆ ಹರಸಾಹ ಪಡಬೇಕಾದ ಸ್ಥಿತಿ ಇದೆ. ಅದರಲ್ಲೂ ದೊಡ್ಮನೆ ಘಟ್ಟ ಪ್ರದೇಶ ಹಾಗೂ ಸಿದ್ದಾಪುರ ಪಟ್ಟಣದ ಆರಂಭದಲ್ಲಿ ಮೊಣಕಾಲುದ್ದದ ಗುಂಡಿಗಳು ಬಿದ್ದಿದ್ದು, ಸಂಚಾರ ಮಾಡಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಇನ್ನು ಈ ರಸ್ತೆಯೂ ಕಿರಿದಾಗಿದ್ದು, ಕಳೆದ ಏಳೆಂಟು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ರಸ್ತೆ ದುರಸ್ಥಿಗೊಳಿಸುವಂತೆ ಸಾಕಷ್ಟು ಭಾರಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದ ಈ ಭಾಗದಲ್ಲಿ ಇತ್ತೀಚೆಗೆ ಅಪಘಾತಗಳ ಸಂಖ್ಯೆ ಕೂಡ ಹೆಚ್ಚುತಿದ್ದು ಮೊದಲು ರಸ್ತೆ ದುರಸ್ತಿಗೊಳಿಸಿ ಬಳಿಕ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಇದನ್ನೂ ಓದಿ : ಉಪಚುನಾವಣೆ ಹಿನ್ನಲೆ ಪರಿಷತ್​ ಚುನಾವಣಾ ಮತ ಎಣಿಕೆ ದಿನಾಂಕ ಮುಂದೂಡಿಕೆ

ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ ಈ ಭಾರಿ ಮಳೆ ಜಾಸ್ತಿಯಾದ ಕಾರಣ ಸಾಕಷ್ಟು ರಸ್ತೆಗಳು ಹಾನಿಯಾಗಿದೆ. ಆದರೆ ಈಗಾಗಲೇ ಕೆಲ ರಸ್ತೆಗಳ ದುರಸ್ತಿಗೆ ಟೆಂಡರ್ ಆಗಿದ್ದು ಇನ್ನು ಕೆಲ ರಸ್ತೆಗಳ ಅಭಿವೃದ್ಧಿಗೆ ನೀತಿ ಸಂಹಿತೆ ಬಳಿಕ ಕ್ರಮ ಕೈಗೊಳ್ಳಲಾಗುತ್ತಿದೆ. ಈ ರಸ್ತೆ ಕೂಡ ಹದಗೆಟ್ಟಿದ್ದಲ್ಲಿ ದುರಸ್ಥಿಗೊಳಿಸುವುದಾಗಿ ತಿಳಿಸಿದ್ದಾರೆ.ಶಿರಸಿ ಕುಮಟಾ ರಸ್ತೆಯನ್ನು ಮೇಲ್ದರ್ಜೆಗೆರಿಸುವ ಕಾರಣ ಎರಡು ವರ್ಷಗಳ ಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಈ ಕಾರಣದಿಂದ ಕುಮಟಾ ಭಾಗದಿಂದ ಶಿರಸಿ ತೆರಳುವ ವಾಹನಗಳು ಅನಿವಾರ್ಯವಾಗಿ ಬಡಾಳ ಸಿದ್ದಾಪುರ ಮಾರ್ಗವಾಗಿ ಸಂಚಿರಿಸಬೇಕಾಗಿದ್ದು ಆದಷ್ಟು ಬೇಗ ಹದಗೆಟ್ಟಿರುವ ರಸ್ತೆ ದುರಸ್ತಿಗೊಳಿಸಲು ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
Published by: G Hareeshkumar
First published: November 1, 2020, 7:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading