ಅಪೌಷ್ಟಿಕತೆ ನಿವಾರಣೆಗೆ ಮನೆ ಮನೆಗೆ ತೆರಳಿ ಬಾಳೆಹಣ್ಣು ವಿತರಣೆ ; ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ

ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ವಿಶೇಷ ಕಾಳಜಿ ವಹಿಸಿ ಉಪಹಾರ ವ್ಯವಸ್ಥೆ ಕಲ್ಪಿಸಿದ್ದ ಶಿಕ್ಷಕ ರಾಮಚಂದ್ರ ನಾಯ್ಕ ಲಾಕ್ ಡೌನ್ ವೇಳೆಯೂಬಾಳೆಹಣ್ಣು ನೀಡುತ್ತಿದ್ದು ಮಕ್ಕಳು ಮಾತ್ರವಲ್ಲದೆ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.

ಮಕ್ಕಳಿಗೆ ಬಾಳೆಹಣ್ಣು ನೀಡುತ್ತಿರುವ ಶಿಕ್ಷಣ ರಾಮಚಂದ್ರ ನಾಯ್ಕ

ಮಕ್ಕಳಿಗೆ ಬಾಳೆಹಣ್ಣು ನೀಡುತ್ತಿರುವ ಶಿಕ್ಷಣ ರಾಮಚಂದ್ರ ನಾಯ್ಕ

  • Share this:
ಕಾರವಾರ(ಸೆಪ್ಟೆಂಬರ್​. 07): ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವುದರ ಜೊತೆಗೆ ಆರೋಗ್ಯ ವೃದ್ಧಿಗಾಗಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ. ಆದರೆ, ಇದೀಗ ಕೊರೋನಾ ಕಾರಣದಿಂದಾಗಿ ಶಾಲೆಗಳು ಬಂದಾಗಿದ್ದು, ಮಕ್ಕಳ ಮನೆಗೆ ಆಹಾರ ಪದಾರ್ಥಗಳನ್ನ ಪೂರೈಸಲಾಗುತ್ತಿದೆ. ಆದರೆ , ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿಕ್ಷಕರೊಬ್ಬರು ತಮ್ಮ ಶಾಲೆಯ ಬಡ ಮಕ್ಕಳ ಅಪೌಷ್ಟಿಕತೆಯನ್ನ ಗುರುತಿಸಿ ಬೆಳಿಗ್ಗೆ ನೀಡುತ್ತಿದ್ದ ಉಪಹಾರದ ಬದಲಿಗೆ ಬಾಳೆಹಣ್ಣುಗಳನ್ನು ನೀಡುತ್ತಿದ್ದು, ಲಾಕ್ ಡೌನ್ ನಡುವೆಯೂ ಮಕ್ಕಳ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಮಾದರಿ ಕಾರ್ಯ ಮಾಡುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿಗಲ್ಲಿ ಪ್ರಾಥಮಿಕ‌ ಶಾಲೆಯ ಶಿಕ್ಷಕ ರಾಮಚಂದ್ರ ನಾಯ್ಕ ಇಂತಹದೊಂದು ಮಾದರಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 2011 ರಲ್ಲಿ ಶಾಲೆಗೆ ವರ್ಗಾವಣೆಗೊಂಡಿದ್ದ ಅವರು ಕಳೆದ ವರ್ಷ ಶಾಲೆಯಲ್ಲಿ ಪಾಠ ಮಾಡುವಾಗ ಮಕ್ಕಳು ಹೊಟ್ಟೆ ಹಿಡಿದುಕೊಂಡು ಸಪ್ಪೆ ಮುಖಮಾಡುವುದನ್ನು ಗಮನಿಸಿದ್ದರು. ಈ ಬಗ್ಗೆ ಮಕ್ಕಳನ್ನ ವಿಚಾರಿಸಿದಾಗ ಬಹುತೇಕರು ಸರಿಯಾಗಿ ತಿಂಡಿ ಮಾಡಿಕೊಂಡು ಬರದೆ ಇರುವುದು ಗಮನಕ್ಕೆ ಬಂದಿದೆ.

ಪಾಲಕರನ್ನು ಕರೆದು ತಿಳಿಸಿದರಾದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಶಾಲೆಯ ಎಸ್​ಡಿಎಂಸಿ ಹಾಗೂ ಅಡುಗೆಯವರ ಸಹಕಾರದೊಂದಿಗೆ ತಮ್ಮದೇ ಸ್ವಂತ ಖರ್ಚಿನಲ್ಲಿ ನಿತ್ಯವೂ ಉಪಹಾರದ ವ್ಯವಸ್ಥೆ ಕಲ್ಪಿಸಿದ್ದರು. ಬೆಳಿಗ್ಗೆ ಶಾಲೆ ಪ್ರಾರಂಭವಾಗುವ ಮೊದಲೆ ಸರ್ಕಾರ ನೀಡುವ ಹಾಲಿನ ಜೊತೆಗೆ ಉಪ್ಪಿಟ್ಟು, ಅವಲಕ್ಕಿ, ಪುಳಿಯೋಗರೆ ಸೇರಿದಂತೆ ದಿನವೊಂದು ರೀತಿಯ ಉಪಹಾರವನ್ನು ನೀಡುತ್ತಿದ್ದರು.‌

ತಮ್ಮ ಶಾಲೆಯ ಮಕ್ಕಳು ಮಾತ್ರವಲ್ಲದೆ ಪಕ್ಕದ ಅಂಗನವಾಡಿಯ ಮಕ್ಕಳು ಸೇರಿ ನಿತ್ಯ 45 ಕ್ಕೂ ಹೆಚ್ಚು ಮಕ್ಕಳು  ಉಪಹಾರ ಸೇವಿಸುತ್ತಿದ್ದರು. ಆದರೆ, ಲಾಕ್ ಡೌನ್ ಘೋಷಣೆಯಾದ ಬಳಿಕ ಶಾಲೆಗಳು ಬಂದಾಗಿತ್ತು. ಮಕ್ಕಳಲ್ಲಿ ಅಪೌಷ್ಠಿಕತೆ ಕಾಡಬಾರದು ಎನ್ನುವ ಕಾರಣಕ್ಕೆ ಉಪಹಾರದ ಬದಲಿಗೆ ದಿನಕ್ಕೊಂದು ಬಾಳೆಹಣ್ಣಿನಂತೆ ಪ್ರತಿ ಗುರುವಾರದಂದು ಮಕ್ಕಳ ಮನೆ ಮನೆಗೆ ತೆರಳಿ ನೀಡುತ್ತಿದ್ದೇನೆ ಎಂದು ಶಿಕ್ಷಕ ರಾಮಚಂದ್ರ ನಾಯ್ಕ ಹೇಳುತ್ತಾರೆ.

ಇನ್ನು ಪಟ್ಟಣದ ಹತ್ತಿರವೇ ಇರುವ ಶಾಲೆಗೆ ಬಹುತೇಕ ಚಿಂದಿ ಆಯುವ ಹಾಗೂ ಕೂಲಿಕಾರರ ಮಕ್ಕಳು ಬರುತ್ತಾರೆ. ಪಾಲಕರೂ ಕೂಡ ಬೇಗ ಕೆಲಸಕ್ಕೆ ತೆರಳುವ ಕಾರಣ ಕೆಲ ಮಕ್ಕಳು ಸರಿಯಾಗಿ ಉಪಹಾರ ಮಾಡದೆ ಹಾಗೆ ಬರುತ್ತಿದ್ದರು. ಆದರೆ, ಈ ಅಕ್ಷರ ದಾಸೋಹ ಪ್ರಾರಂಭಿಸಿದ ಬಳಿಕ ಮಕ್ಕಳು ಖುಷಿಯಾಗಿದ್ದಾರೆ. ಅಲ್ಲದೆ ಲಾಕ್ ಡೌನ್ ವೇಳೆಯೂ ಶಿಕ್ಷಕರರು ಮನೆ ಬಾಗಿಲಿಗೆ ತೆರಳಿ ಮಕ್ಕಳಿಗೆ ಬಾಳೆಹಣ್ಣು ನೀಡಿದ್ದಾರೆ.

ಪ್ರತಿ ವರ್ಷವೂ ಮಕ್ಕಳ ಶಾಲಾ ದಾಖಲಾತಿ ಕೂಡ ಹೆಚ್ಚುತ್ತಿದೆ. ಮಾತ್ರವಲ್ಲದೆ ವಿದ್ಯಾಗಮ ಆರಂಭಕ್ಕೂ ತಿಂಗಳ ಮುಂಚೆಯೇ ಕೊವೀಡ್ ಸುರಕ್ಷಾ ಕ್ರಮದೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದ್ದ ಅವರು ಇದೀಗ ಮಾದರಿಯಾಗಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಇದನ್ನೂ ಓದಿ : ಹಾಡ ಹಗಲೇ ದೇವಸ್ಥಾನದ ಹುಂಡಿ ಕಳುವು ; ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಹುಂಡಿ ಕಳ್ಳರು

ಇನ್ನು ಹಾಸನದ ಬೇಲೂರು ತಾಲೂಕಿನ ಮುತುಗನ್ನೆ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಅಲ್ಲಿನ  ಮಕ್ಕಳಿಗೂ ಬಾಳೆಹಣ್ಣನ್ನು ನೀಡುತ್ತಿದ್ದರು.‌ ಶಾಲೆ ಪ್ರಾರಂಭವಾದ ಬಳಿಕ ಮತ್ತೆ ಪ್ರಾರಂಭಿಸಲು ಮುಂದಾಗಿದ್ದಾರೆ. ಜತೆಗೆ ಹತ್ತಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಅವರು ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ ದೇಶದ ರಕ್ಷಣಾ ನಿಧಿ, ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ನಿಧಿಗೆ ಒಟ್ಟು 1,500 ರೂಪಾಯಿ ಜಮಾ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಒಟ್ಟಾರೆ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ವಿಶೇಷ ಕಾಳಜಿ ವಹಿಸಿ ಉಪಹಾರ ವ್ಯವಸ್ಥೆ ಕಲ್ಪಿಸಿದ್ದ ಶಿಕ್ಷಕ ರಾಮಚಂದ್ರ ನಾಯ್ಕ ಲಾಕ್ ಡೌನ್ ವೇಳೆಯೂ ಬದಲಿಯಾಗಿ ಬಾಳೆಹಣ್ಣು ನೀಡುತ್ತಿದ್ದು ಮಕ್ಕಳು ಮಾತ್ರವಲ್ಲದೆ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.
Published by:G Hareeshkumar
First published: