• Home
  • »
  • News
  • »
  • district
  • »
  • 'ಗೀತಾ ಮಿಸ್​'ನ್ನ ಮಿಸ್ ಮಾಡ್ಕೊಂಡ ಮಕ್ಕಳಿಗೆ ಸರ್ಪ್ರೈಸ್ ಲೆಟರ್, Viral ಆಗ್ತಿದೆ ಶಿಕ್ಷಕಿ ಬರೆದ ಪತ್ರ !

'ಗೀತಾ ಮಿಸ್​'ನ್ನ ಮಿಸ್ ಮಾಡ್ಕೊಂಡ ಮಕ್ಕಳಿಗೆ ಸರ್ಪ್ರೈಸ್ ಲೆಟರ್, Viral ಆಗ್ತಿದೆ ಶಿಕ್ಷಕಿ ಬರೆದ ಪತ್ರ !

ಗೀತಾ ಮಿಸ್

ಗೀತಾ ಮಿಸ್

ಶಾಲೆ ಇಲ್ಲದಿದ್ದರೂ ಮಕ್ಕಳಿಗೆಲ್ಲಾ ಟೀಚರ್ ಪತ್ರ ಬರೆದಿದ್ದಾರೆ.. ಟೀಚರ್ ಬರೆದ ಪತ್ರ ಓದಿ ಮಕ್ಕಳಿಗಂತೂ ಶಾಲೆಗೆ ಹೋದಷ್ಟೇ ಖುಷಿ. ಶಿಕ್ಷಕಿ ಮತ್ತು ವಿದ್ಯಾರ್ಥಿಗಳ ನಡುವಿನ ಈ ಸುಂದರ ಬಾಂಧವ್ಯಕ್ಕೆ ಪತ್ರಗಳು ಕೊಂಡಿಯಾಗಿ ಬೆಸೆದಿವೆ.

  • Share this:

ಚಿಕ್ಕಮಗಳೂರು : ಕೊರೋನಾ ಕಾಲದಲ್ಲಿ ಮಕ್ಕಳು ಶಾಲೆಯನ್ನ ಮಿಸ್ ಮಾಡಿಕೊಂಡಿದ್ದಕ್ಕಿಂತ ಶಿಕ್ಷಕರೇ ಮಕ್ಕಳನ್ನ ಮಿಸ್ ಮಾಡಿಕೊಂಡಿದ್ದಾರೆ. ಯಾಕಂದ್ರೆ, ಮಕ್ಕಳೊಂದಿಗೆ ಮಕ್ಕಳಾಗಿ ಮನಮುಟ್ಟುವಂತೆ ಪಾಠ ಮಾಡ್ತಿದ್ದ ಕೆಲ ಶಿಕ್ಷಕರಿಗೆ ಮಕ್ಕಳದ್ದೇ ಚಿಂತೆ ಅಂದ್ರು ತಪ್ಪಿಲ್ಲ. ದಿನದಿಂದ ದಿನಕ್ಕೆ ಶಾಲೆ ಆರಂಭದ ದಿನ ಮುಂದೋಗ್ತಿದ್ದು ಮಕ್ಕಳನ್ನ ನೆನೆದು ಶಿಕ್ಷಕರು ಮಮ್ಮುಲು ಮರುಗಿದ್ದಾರೆ. ಹಾಗಾಗಿ, ಕಾಫಿನಾಡ ಈ ಶಿಕ್ಷಕಿ ಲಾಕ್‍ಡೌನ್‍ನಲ್ಲೂ ಮಕ್ಕಳ ಮನದಲ್ಲಿ ಅಕ್ಷರದ ಪ್ರೀತಿ ಬಿತ್ತಿದ್ದಾರೆ. ಫೋನ್, ವಾಟ್ಸಾಪ್ಪು, ಟ್ವಿಟ್ಟರ್, ಇ ಮೇಲ್ ಎಂಬ ಈ ಆಧುನಿಕ ತಂತ್ರಜ್ಞಾನಗಳ ಭರಾಟೆಯಲ್ಲೂ ಈ ಮಿಸ್ ಅಕ್ಷರದಲ್ಲೇ ಮಕ್ಕಳ ಮನ ಮುಟ್ಟಿದ್ದಾರೆ. ಅಲ್ಲಿ ಮಕ್ಕಳು ಶಿಕ್ಷಕರ ದಾರಿ ಕಾದ್ರೆ, ಇಲ್ಲಿ ಶಿಕ್ಷಕಿ ಕೂಡ ಮಕ್ಕಳ ದಾರಿ ಕಾಯ್ತಿದ್ದಾರೆ. ಆದ್ರೆ, ದಾರಿ ಬೇರೆ ಅಷ್ಟೆ. ಅದೇನು ಮಕ್ಕಳು-ಶಿಕ್ಷಕರ ಅಕ್ಷರದ ಪ್ರೀತಿ-ಪ್ರೇಮ ಅಂತೀರಾ. ಈ ವರದಿ ಓದಿ...


ಮನೆಯಲ್ಲಿ ಕೂತು ಪತ್ರ ಬರೆಯುತ್ತಿರೋ ಇವ್ರ ಹೆಸ್ರು ಗೀತಾ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಯಲಗುಡಿಗೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ. ಈ ಶಾಲೆಯಲ್ಲಿ 1ರಿಂದ 5ನೇ ತರಗತಿಯವರಗೆ ಎಲ್ಲಾ ತರಗತಿಗಳಿಗೂ ಇವರು ಪಾಠ ಮಾಡುತ್ತಾರೆ. ಕೊರೋನಾ ಕಾಲದಲ್ಲಿ ಎಲ್ಲರೂ ಮನೆಯಲ್ಲೇ ಲಾಕ್ ಆಗಿದ್ದಾರೆ. ಶಾಲೆಗೆ ಹೋಗಲಾರದೆ ಪುಟ್ಟ-ಪುಟ್ಟ ಮಕ್ಕಳು ತಮ್ಮ ಸ್ನೇಹಿತರು, ಅಚ್ಚುಮೆಚ್ಚಿನ ಶಿಕ್ಷಕರನ್ನ ಮಿಸ್ ಮಾಡಿಕೊಳ್ತಿದ್ದಾರೆ. ಶಿಕ್ಷಕರೂ ಕೂಡ. ಹಾಗಾಗಿ, ಶಿಕ್ಷಕಿ ಗೀತಾ, ತನ್ನ ಶಾಲೆಯ ಎಲ್ಲಾ ಮಕ್ಕಳಿಗೂ ಪ್ರೀತಿಯ ಪತ್ರ ಬರೆದು ಆಶ್ಚರ್ಯ ಮೂಡಿಸಿದ್ದಾರೆ. ತಾನು ಮನೆಯಲ್ಲಿದ್ದಾಗಲೂ ತನ್ನ ಹೆಸರಿಗೆ ಪತ್ರ ಬರೆದ ಶಿಕ್ಷಕಿಯ ಬಗ್ಗೆ ಪುಟ್ಟ-ಪುಟ್ಟ ಮಕ್ಕಳ ಸಂತೋಷಕ್ಕೆ ಸಾಟಿಯೇ ಇಲ್ಲದಂತಾಗಿದೆ.


ಇದನ್ನೂ ಓದಿ: Viral News: ಒಂದೇ ವರ್ಷದಲ್ಲಿ 20 ಮಕ್ಕಳನ್ನು ಪಡೆದ ಮಹಾತಾಯಿ ! ಆಗಲೇ ಮುಂದಿನ ಮಗುವಿಗೆ ಪ್ಲಾನಿಂಗ್ !


ಶಿಕ್ಷಕಿಯ ಪ್ರೀತಿಯ ಪತ್ರವನ್ನ ಮಕ್ಕಳು ಹೆತ್ತವರೆದುರು ಓದಿ ಸಂಭ್ರಮಿಸಿದ್ದಾರೆ. ಪ್ರತಿಯೊಂದು ಮಗುವಿನ ಜೊತೆಗಿನ ಶಾಲೆಯಲ್ಲಿನ ಹಳೆಯ ನೆನಪುಗಳ ಬುತ್ತಿಯನ್ನ ನೆನಪಿಸಿದ್ದಾರೆ. ಪ್ರತಿಯೊಂದು ಮಗುವಿಗೂ ಪತ್ರ ಬರೆದು ಆತ್ಮಸ್ಥೈರ್ಯ ತುಂಬಿದ್ದಾರೆ. ಮಕ್ಕಳ-ಪೋಷಕರು ಯೋಗಕ್ಷೇಮ ವಿಚಾರಿಸಿ, ಕೊರೊನಾದಿಂದ ಮನೆಯಲ್ಲಿರೋ ಮಕ್ಕಳು-ಶಿಕ್ಷಕರ ಬಾಂಧವ್ಯ ಗಟ್ಟಿಗೊಳಿಸಿದ್ದಾರೆ. ವರ್ಷದಿಂದ ಶಾಲೆ ಬಾಗಿಲು ಹಾಕಿದ್ರು ತಾವು ಆಗಾಗ ಪಾಠ ಮಾಡಿ ಕಳಿಸುತ್ತಿದ್ದ ವಿಡಿಯೋ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಶಿಕ್ಷಕಿಯ ಪತ್ರ ಓದಿ ಮಕ್ಕಳು ಫುಲ್ ಖುಷಿಯಾಗಿರೋದನ್ನ ಕೇಳಿ ಶಿಕ್ಷಕಿ ಗೀತಾ ಸಂತಸ ಪಟ್ಟಿದ್ದಾರೆ.


ಶಿಕ್ಷಕಿ ಗೀತಾ ಪತ್ರದಲ್ಲಿ ಕೇವಲ ಮಕ್ಕಳ ಯೋಗಕ್ಷೇಮವನ್ನ ಮಾತ್ರ ವಿಚಾರಿಸದೆ ಕೊರೊನಾದ ಬಗ್ಗೆ ಎಚ್ಚರ ವಹಿಸುವಂತೆಯೂ ಕಿವಿಮಾತು ಹೇಳಿದ್ದಾರೆ. ರಜೆ ಇರೋದ್ರಿಂದ ಹೊರಗಡೆ ಬಾವಿ, ಕೆರೆ, ದೂರದ ಸ್ಥಳಗಳಿಗೆ ಆಟವಾಡೋದಕ್ಕೆ ಹೋಗದಂತೆ ಪತ್ರದಲ್ಲಿ ತಿಳಿ ಹೇಳಿದ್ದಾರೆ. ಜೊತೆಗೆ ಮೊಬೈಲನ್ನೂ ಕೂಡ ಅಗತ್ಯಕ್ಕಿಂತ ಹೆಚ್ಚು ಬಳಸದಂತೆ ಮಕ್ಕಳಿಗೆ ತಿಳಿ ಹೇಳಿ ಪತ್ರ ಬರೆದಿದ್ದಾರೆ. ಇದಕ್ಕೆಲ್ಲಾ ಮಕ್ಕಳು ಓಕೆ ಮಿಸ್ ಅಂದಿದ್ದಾರೆ. ಅಲ್ಲದೇ ಮಿಸ್ ಪ್ರೀತಿಯಿಂದ ಬರೆದ ಪತ್ರವನ್ನ ಬೀರುವಿನಲ್ಲಿ ಜೋಪಾನವಾಗಿಟ್ಟಿದ್ದಾರೆ. ಶಿಕ್ಷಕಿ ಗೀತಾಗೂ ಮಕ್ಕಳು ಪ್ರೀತಿಯಿಂದ ಪತ್ರ ಬರೆದು ಖುಷಿ ಪಟ್ಟಿದ್ದಾರೆ. ನಾವೆಲ್ಲಾ ಆರೋಗ್ಯವಾಗಿದ್ದೇವೆ ಮಿಸ್. ನೀವು ಕೂಡ ಕ್ಷೇಮವಾಗಿರಿ ಅಂತ ಮಕ್ಕಳು ಕೂಡ ಶಿಕ್ಷಕಿಗೆ ಪ್ರೀತಿಯ ಪತ್ರ ಬರೆದಿದ್ದಾರೆ. ಮಕ್ಕಳ ಪತ್ರ ಕಂಡು ಶಿಕ್ಷಕಿ ಕೂಡ ಸಂತೋಷಪಟ್ಟಿದ್ದಾರೆ. ನಾಲ್ಕು ದಿನ ಹಗಲಿರುಳು ಪತ್ರ ಬರೆದಿದ್ದಕ್ಕೆ ಮಕ್ಕಳು ಸಂತೋಷ ಪಟ್ಟಿದ್ದಾರೆ. ನನಗೂ ಸಂತೋಷವಾಯ್ತು ಎಂದು ಶಿಕ್ಷಕಿ ಗೀತಾ ಕೂಡ ಮಕ್ಕಳಂತೆ ಸಂಭ್ರಮಿಸಿದ್ದಾರೆ. ಈ ಶಾಲೆಯಲ್ಲಿ ಒಟ್ಟು 16 ಮಕ್ಕಳು ಮಾತ್ರ ಕಲಿಯುತ್ತುಇದ್ದು ಎಲ್ಲಾ 16 ವಿದ್ಯಾರ್ಥಿಗಳಿಗೂ ಟೀಚರ್ ಪತ್ರ ಬರೆದಿದ್ದಾರೆ.


ಮಕ್ಕಳು ರಿಟರ್ನ್ ಪತ್ರ ಬರೆಯಲು ಶಿಕ್ಷಕಿ ತಾನು ಬರೆದ ಪತ್ರದಲ್ಲಿ ಖಾಲಿ ಇನ್ಲ್ಯಾಂಡ್ ಲೆಟರ್ ಕೂಡ ಕಳಿಸಿದ್ರು. ಲಾಕ್ ಡೌನ್ ಇದೆ. ಮಕ್ಕಳು ಲೆಟರ್ ತರಲು ಆಗಲ್ಲ ಎಂದು ಪತ್ರದಲ್ಲಿ ತನ್ನ ಮನೆ ವಿಳಾಸ ಬರೆದು ಖಾಲಿ ಪತ್ರವನ್ನೂ ಹಾಕಿ ಕಳಿಸಿದ್ದರು. ಸದ್ಯ ಒಂದೊಂದು ಮಗು ಕೂಡ ರಿಪ್ಲೆ ಮಾಡ್ತಿದ್ದು ಶಿಕ್ಷಕಿಗೂ ಸಂತಸವಾಗಿದೆ. ಶಿಕ್ಷಕಿಯ ಪತ್ರ ಮಕ್ಕಳು-ಶಿಕ್ಷಕರು ಮಧ್ಯೆ ಹೊಸ ಬಾಂಧವ್ಯ ಬೆಸೆದಿದೆ. ಒಟ್ಟಾರೆ, ಶಾಲೆಯಿಂದ ದೂರ ಉಳಿದ ಪ್ರತಿಯೊಂದು ಮಗುವಿಗೂ ಪತ್ರ ಬರೆದ ಶಿಕ್ಷಕಿಯ ಈ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Published by:Soumya KN
First published: