• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ನೆಟ್​​ವರ್ಕ್ ಸಮಸ್ಯೆ ನೀಗಿಸಲು ಹೊಸ ಉಪಾಯ; 20 ಅಡಿ ಎತ್ತರದಲ್ಲಿ ಅಟ್ಟಣಿಗೆ ನಿರ್ಮಿಸಿಕೊಂಡ ಕೊಡಗಿನ ಶಿಕ್ಷಕ

ನೆಟ್​​ವರ್ಕ್ ಸಮಸ್ಯೆ ನೀಗಿಸಲು ಹೊಸ ಉಪಾಯ; 20 ಅಡಿ ಎತ್ತರದಲ್ಲಿ ಅಟ್ಟಣಿಗೆ ನಿರ್ಮಿಸಿಕೊಂಡ ಕೊಡಗಿನ ಶಿಕ್ಷಕ

ಅಟ್ಟಣಿಗೆ

ಅಟ್ಟಣಿಗೆ

ಅಟ್ಟಣಿಗಾಗಿ ಸ್ಥಳೀಯವಾಗಿ ಸಿಗುವ ಬಿದಿರಿನ ಬೊಂಬು, ಬೈನೆ ಮತ್ತು ಅಡಿಕೆ ಮರದ ತಡಿಕೆಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ತಂತಿ, ಬಲೆ ಮತ್ತು ತಮ್ಮ ಮನೆಯಲ್ಲೇ ಇದ್ದ ಭತ್ತದ ಹುಲ್ಲನ್ನು ಬಳಸಿಕೊಂಡು ಟ್ರೀಹೌಸ್ ಮಾದರಿಯಲ್ಲಿ ಆನ್‌ಲೈನ್ ತರಗತಿಯ ಕೊಠಡಿ ಮಾಡಿಕೊಂಡಿದ್ದಾರೆ.

  • Share this:

ಕೊಡಗು(ಜೂ.29) : ಕೋವಿಡ್ ಲಾಕ್​​ಡೌನ್​ನಿಂದ ಶಾಲೆಗಳು ಬಂದ್ ಆಗಿ ಒಂದೂವರೆ ವರ್ಷವೇ ಕಳೆದಿದೆ. ಸರ್ಕಾರ ಆನ್‌ಲೈನ್ ತರಗತಿಗಳನ್ನು ಮಾಡಲು ಆದೇಶಿಸಿದೆಯಾದರೂ ಕೊಡಗಿನ ಬೆಟ್ಟ ಗುಡ್ಡದ ಪರಿಸರದಲ್ಲಿ ನೆಟ್​ವರ್ಕ್ ಸಿಗೋದೇ ದುಸ್ಥರ. ಹೀಗಾಗಿಯೇ ಪಾಠ ಮಾಡೋದಕ್ಕೆ ಶಿಕ್ಷಕರು ಪಡಬಾರದ ಕಷ್ಟ ಪಡ್ತಾ ಇದಾರೆ ಎನ್ನೋದು. ಆದರೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮೂಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸತೀಶ್ ನೆಟ್ ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಶಾಲೆಗಳಿಗೆ ರಜೆ ಇರುವುದರಿಂದ ತಮ್ಮ ಊರಾದ ಚಿಕ್ಕಕೊಳತ್ತೂರು ಗ್ರಾಮದಲ್ಲಿರುವ ತಮ್ಮ ಮನೆ ಪಕ್ಕದಲ್ಲೇ ಶಿಕ್ಷಕ ಸತೀಶ್ 20 ಅಡಿ ಎತ್ತರದಲ್ಲಿ ಅಟ್ಟಣಿಗೆ ನಿರ್ಮಿಸಿಕೊಂಡಿದ್ದಾರೆ.


ತಮ್ಮ ಊರಿನಲ್ಲೂ ನೆಟ್ ವರ್ಕ್ ಸಮಸ್ಯೆ ಇದೆಯಂತೆ. ಆದರೆ ಯಾವ ಜಾಗದಲ್ಲಿ ನೆಟ್ ವರ್ಕ್ ಸಿಗುತ್ತದೆಯೋ ಆ ಜಾಗವನ್ನು ಗುರುತಿಸಿ ಅದೇ ಸ್ಥಳದಲ್ಲಿ 20 ಅಡಿ ಎತ್ತರದಲ್ಲಿ ಅಟ್ಟಣಿಗೆ ಸಿದ್ಧಗೊಳಿಸಿಕೊಂಡಿದ್ದಾರೆ. ಅಟ್ಟಣಿಗಾಗಿ ಸ್ಥಳೀಯವಾಗಿ ಸಿಗುವ ಬಿದಿರಿನ ಬೊಂಬು, ಬೈನೆ ಮತ್ತು ಅಡಿಕೆ ಮರದ ತಡಿಕೆಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ತಂತಿ, ಬಲೆ ಮತ್ತು ತಮ್ಮ ಮನೆಯಲ್ಲೇ ಇದ್ದ ಭತ್ತದ ಹುಲ್ಲನ್ನು ಬಳಸಿಕೊಂಡು ಟ್ರೀಹೌಸ್ ಮಾದರಿಯಲ್ಲಿ ಆನ್‌ಲೈನ್ ತರಗತಿಯ ಕೊಠಡಿ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ:Karnataka Weather Today: ಇಂದಿನಿಂದ 3 ದಿನ ಕರ್ನಾಟಕದಲ್ಲಿ ಭಾರೀ ಮಳೆ; ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ


ಇಪ್ಪತ್ತು ಅಡಿ ಎತ್ತರದಲ್ಲಿ ಇರುವುದರಿಂದ ಉತ್ತಮವಾಗಿ ನೆಟ್ ವರ್ಕ್ ಸಿಗುತ್ತಿದೆಯಂತೆ. ಜೊತೆಗೆ ಮನೆಯಲ್ಲಾದರೆ, ಮನೆಯವರು, ಮಕ್ಕಳು ಅವರೆಲ್ಲರೂ ಮಧ್ಯೆ ಮಧ್ಯೆ ಕಿರಿಕಿರಿ ಉಂಟುಮಾಡುತ್ತಿರುತ್ತಾರೆ. ಆದರೆ ಅಟ್ಟಣಿಗೆ ಮನೆಯಿಂದ ಹೊರಗೆ ಪ್ರತ್ಯೇಕವಾಗಿ ಇರುವುದರಿಂದ ಯಾವುದೇ ತೊಂದರೆ ಇಲ್ಲದಂತೆ ತರಗತಿ ಮಾಡಬಹುದು ಎನ್ನೋದು ಶಿಕ್ಷಕ ಸತೀಶ್ ಅವರ ಮಾತು.


ಮೊಬೈಲ್ ಬಳಸಿ ಆನ್‌ಲೈನ್ ತರಗತಿ ನಡೆಸುವ ಅವರು ಅದಕ್ಕೆ ಅನುಕೂಲ ಆಗಲೆಂದು 500 ರೂಪಾಯಿ ವೆಚ್ಚದಲ್ಲಿ ಮೊಬೈಲ್ ಸ್ಟ್ಯಾಂಡ್ ಮತ್ತು ಇಯರ್ ಫೋನ್ ಖರೀದಿಸಿದ್ದಾರೆ. ಜೊತೆಗೆ ಮಕ್ಕಳಿಗೆ ಆಕರ್ಷಣೀಯವಾಗಿರುವಂತೆ ಕಾಣಲು ಮೂರು ಬಗೆಯ ಬ್ಲಾಕ್ ಬೋರ್ಡುಗಳನ್ನು ಖರೀದಿಸಿದ್ದಾರೆ. ಮಕ್ಕಳಿಗೆ ಹೋಂವರ್ಕ್ ಮಾಡಿಸುವುದು, ವಿಜ್ಞಾನ ಪಾಠಗಳನ್ನು ಹೇಳಿಕೊಡುವುದು. ಜೊತೆಗೆ ಪರಿಸರದ ವಿಷಯಗಳನ್ನು ಹೇಳಿಕೊಡುತ್ತಿದ್ದಾರೆ. ಬೆಳಿಗ್ಗೆ ಒಂದಷ್ಟು ವಾಟ್ಸಾಪ್ ಚಾಲೆಂಜ್ ಗಳನ್ನು ನೀಡುವ ಶಿಕ್ಷಕ ಸತೀಶ್, ಸಂಜೆ ಮಕ್ಕಳೊಂದಿಗೆ ಗೂಗಲ್ ಮೀಟ್ ಮೂಲಕ ನೇರವಾಗಿ ವಿಷಯಗಳ ಚರ್ಚಿಸುವುದನ್ನು ಮಾಡುತ್ತಿದ್ದಾರೆ.


ಇದನ್ನೂ ಓದಿ:Explained: 2 ಡೋಸ್ ವ್ಯಾಕ್ಸಿನ್ ಪಡೆದವರನ್ನೂ ಕಾಡಲಿದೆಯಾ ಡೆಲ್ಟಾ ಪ್ಲಸ್ ರೂಪಾಂತರಿ? ತಜ್ಞರು ಏನಂತಾರೆ?


ನೆಟ್ ವರ್ಕ್ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ವಾಟ್ಸಾಪ್ ಮೂಲಕ ಎಲ್ಲವನ್ನೂ ವಿಡಿಯೋ ಕಳುಹಿಸಿ ಕಲಿಸುತಿದ್ದಾರೆ. ಈ ಅಟ್ಟಣಿಗೆ ಮಾಡಲು ಶಿಕ್ಷಕ ಸತೀಶ್ ಎರಡು ತಿಂಗಳು ಪರಿಶ್ರಮ ಹಾಕಿದ್ದಾರೆ. ಶಿಕ್ಷಕ ಸತೀಶ್ ಅವರು ಈ ಹಿಂದೆಯೂ ಸರ್ಕಾರ ವಿದ್ಯಾಗಮ ತರಗತಿ ಆರಂಭಿಸುವುದಕ್ಕೂ ಮುಂಚೆಯೆ ಆನ್‌ಲೈನ್ ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆ ಮಾಡಿಸಿ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಇದೀಗ ಆನ್‌ಲೈನ್ ತರಗತಿಗೆ ಎದುರಾಗಿದ್ದ ನೆಟ್ ವರ್ಕ್ ಸಮಸ್ಯೆಗೆ ವಿನೂತನ ಪರಿಹಾರ ಕಂಡುಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Published by:Latha CG
First published: