ಮಲಪ್ರಭೆ ಪ್ರವಾಹದ ಹೊಡತಕ್ಕೆ ನಲುಗಿದ ಬಡ ಕುಟುಂಬಗಳ ಕಣ್ಣೀರಿನ ಕಥೆ..! 

ಪರಿಹಾರ ನೀಡುವಲ್ಲಿ ಸಾಕಷ್ಟು ಗೋಲ್​ಮಾಲ್ ಆಗಿದೆ ಅನ್ನೋ ಆರೋಪ ಕೂಡ ಇದೆ‌. ಅಧಿಕಾರಿಗಳ ಯಡವಟ್ಟು ಸರ್ಕಾರಕ್ಕೆ ಕಪ್ಪು ಮಸಿ ಬಳಿಯುವಂತಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನಿಜವಾದ ಫಲಾನುಭವಿಗಳಿಗೆ ಪರಿಹಾರ ನೀಡುವ ಮೂಲಕ ಬಡ ಕುಟುಂಬಗಳ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.

ಪ್ರವಾಹದಿಂದ ಮನೆ ಕಳೆದುಕೊಂಡು ಪರಿಹಾರಕ್ಕೆ ಪರಿತಪಿಸುತ್ತಿರುವ ಕೊಣ್ಣೂರ ಗ್ರಾಮದ 80 ವರ್ಷದ ವಿಕಲಚೇತನ ಅಹ್ಮದ್ ಸಾಬ್.

ಪ್ರವಾಹದಿಂದ ಮನೆ ಕಳೆದುಕೊಂಡು ಪರಿಹಾರಕ್ಕೆ ಪರಿತಪಿಸುತ್ತಿರುವ ಕೊಣ್ಣೂರ ಗ್ರಾಮದ 80 ವರ್ಷದ ವಿಕಲಚೇತನ ಅಹ್ಮದ್ ಸಾಬ್.

  • Share this:
ಗದಗ: ಗದಗ ಜಿಲ್ಲೆಯ ನರಗುಂದ ತಾಲೂಕಿನ ‌ಕೊಣ್ಣೂರ ಗ್ರಾಮದ ಖಾಜಿ ಓಣಿಯ ಐದು‌ ಮಕ್ಕಳ ಕುಟುಂಬದ ವೀಕಲಚೇತನ‌ ಯಜಮಾನ ಹಾಗೂ ಪತಿ ಇಲ್ಲದ ವಿಧವೆ ಕುಟುಂಬದ ಬದುಕಿನ ಕರುಣಾಜನಕ ಕಥೆಯಿದು. ಕೊಣ್ಣೂರ ಗ್ರಾಮದ 80 ವರ್ಷದ ವಿಕಲಚೇತನ ಅಹ್ಮದ್ ಸಾಬ್ ಖಾಜಿ ಐದು ಮಕ್ಕಳ ತುಂಬು‌ ಕುಟುಂಬ. ಕಳೆದ ವರ್ಷದ ಭೀಕರ ಪ್ರವಾಹಕ್ಕೆ ಇಡೀ ಮನೆ ಮುಳುಗಿ ಬದುಕೇ ಅತಂತ್ರವಾಗಿತ್ತು. ಪ್ರವಾಹದಿಂದ ಇವರ ಮನೆ ಸಂಪೂರ್ಣ ಹಾನಿಗೆ ಒಳಗಾಗಿತ್ತು. ಇವರದೊಂದೇ ಅಲ್ಲ ಖಾಜಿ ಓಣಿಯ ನೂರಾರು ಮನೆಗಳು ಮುಳುಗಿದ್ದವು. ಆಗ ಮನೆ ಕಳೆದುಕೊಂಡವರಿಗೆ ಸರ್ಕಾರ ಎ,ಬಿ,ಸಿ ಗ್ರೇಡ್ ನೀಡಿತ್ತು. ಈ ಅಹ್ಮದ್ ಖಾನ್ ಖಾಜಿ ಮನೆ ಕೂಡ ಸರ್ವೇ ಮಾಡಿದ ಇಂಜಿನಿಯರ್ ಶೇಕಡಾ 85 ಡ್ಯಾಮೇಜ್ ಅಂತ ವರದಿ‌ ನೀಡಿದ್ದಾರಂತೆ.

ಸರ್ವೆ ಮಾಡಿದ ಹೋದ ಬಳಿಕ ಪರಿಹಾರ ಬರಲಿಲ್ಲ. ಅಕ್ಕಪಕ್ಕದ ಮನೆಗಳಿಗೆ  5 ಲಕ್ಷ ಪರಿಹಾರ ನೀಡಲಾಗಿದೆ. ಹೀಗಾಗಿ ಅಕ್ಕಪಕ್ಕದ ಮನೆಯವರು ಮನೆ ನಿರ್ಮಾಣ ಮಾಡುತ್ತಾ ಇದ್ದಾರೆ. ಆದರೆ ಈ ವಿಕಲಚೇತನ ಕುಟುಂಬ ಮನೆ ಬಿಟ್ಟು ಹೋಗುವಂತಾಗಿದೆ‌. ಈತನ ಮನೆ ಅಸ್ಥಿಪಂಜರದಂತಾಗಿದೆ. ಹೀಗಾಗಿ ಐದು ಮಕ್ಕಳ ತುಂಬು ಕುಟುಂಬ ಊರು ಹೊರಗೆ ಹೋಗಿ‌ ಜೀವನ‌ ಮಾಡುತ್ತಿದೆ. ಈ ಅಜ್ಜನ ‌ಮನೆ ಈಗಲೋ ಆಗಲೋ ಬೀಳುವ ಹಂತದಲ್ಲಿ ಇದೆ‌. ಅಧಿಕಾರಿಗಳ ಯಡವಟ್ಟೋ, ಸ್ಥಳೀಯ ರಾಜಕಾರಣವೋ ಗೊತ್ತಿಲ್ಲ. ಈ ಕುಟುಂಬಕ್ಕೆ ಮಾತ್ರ ಪರಿಹಾರ ಸಿಕ್ಕಿಲ್ಲ. ಪರಿಹಾರಕ್ಕಾಗಿ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ತಹಸೀಲ್ದಾರ್ ಕಚೇರಿ, ಎಸಿ, ಡಿಸಿ ಕಚೇರಿವರೆಗೂ ಈ ವಿಕಲಚೇತನ ಕುಟುಂಬ ಅಲೆದಾಡಿದರೂ ಕರುಣೆ ತೋರಿಲ್ಲ. ಹೀಗಾಗಿ ಈ ಕುಟುಂಬ ಮನೆಗಾಗಿ ಗೋಳಾಡುತ್ತಿದೆ.

ಇದನ್ನು ಓದಿ: ಅಂತರರಾಜ್ಯ ಪ್ರಯಾಣ ಇನ್ನು ಸರಾಗ; ಕ್ವಾರಂಟೈನ್ ಸೇರಿ ಎಲ್ಲಾ ನಿಯಮಗಳನ್ನು ರದ್ದುಗೊಳಿಸಿದ ಸರ್ಕಾರ

ಇದು ವಿಕಲಚೇತನ ಕುಟುಂಬದ ಗೋಳಾದರೆ. ಇನ್ನೂ ಪತಿ ಇಲ್ಲದ ಈ ಪತ್ನಿ ಗೋಳಿನ ಕಥೆ ಮಾತ್ರ ಮನಕಲುಕುವಂತಿದೆ.‌ ರಬಿಯಾ ಬೇಗಂ ಎಂಬ ಮಹಿಳೆ ಪತಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಸತತ ಎರಡು ವರ್ಷದ ಭೀಕರ ಪ್ರವಾಹ ಈಕೆ ಬದುಕಿ ಬಾಳಿದ ಮನೆ ಈಗ ಅಲುಗಾಡುವಂತೆ ಮಾಡಿದೆ. ಮನೆಯಲ್ಲಿ ಪ್ರವಾಹದ ನೀರು ನಿಂತು ಮನೆಯಲ್ಲ ತೇವಾಂಶ ಹಿಡಿದಿದೆ. ಯಾವಾಗ ಏನಾಗುತ್ತೋ ಅನ್ನೋ ಆತಂಕ, ಭಯದಲ್ಲಿ ಜೀವನ ನಡೆಸುತ್ತಿದ್ದಾರೆ‌. ಮನೆಯಲ್ಲಿ ಎಲ್ಲಿ‌ ನೋಡಿದರೂ ಬಿರುಕು ಕಾಣಿಸಿಕೊಂಡಿದೆ. ಕಳೆದ ವರ್ಷ ಪ್ರವಾಹದಲ್ಲಿ ಮುಳುಗಿ ಹಾನಿಯಾಗಿದೆ. ಅಧಿಕಾರಿಗಳು ಪರಿಹಾರ ನೀಡಿಲ್ಲ. ಈಗ ಮತ್ತೆ ಪ್ರವಾಹ ಬಂದು ನಮ್ಮ ಜೀವನ ಹಾಳಾಗಿದೆ ಅಂತ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಹಾರ ನೀಡಿ ಇಲ್ಲವೇ ಇಡೀ ಓಣಿ ಸ್ಥಳಾಂತರ ಮಾಡಿ ನಮಗೆ ಶಾಶ್ವತ ಬದುಕಿಗೆ ದಾರಿ ಮಾಡಿ ಅಂತ ಅಸಹಾಯಕವಾಗಿ ಬೇಡಿಕೊಳ್ಳುತ್ತಿದ್ದಾರೆ.

ಇದು ಒಂದು ಎರಡು ಕುಟುಂಬದ ಗೋಳಲ್ಲ. ಇದೇ ಖಾಜಿ ಓಣಿಯ ಇಬ್ರಾಹಿಂ ಸಾಬ್ ಮಕಾಂದಾರ, ಭಾಷಾಸಾಬ್ ಖಾಜಿ, ಸಯದ್ ಸಾಬ್ ಖಾಜಿ ಸೇರಿದಂತೆ ಹಲವು ಕುಟುಂಬಗಳ ಪರಿಸ್ಥಿತಿ ಕೂಡ ಇದೆ ಆಗಿದೆ. ಈ ಕುಟುಂಬಗಳ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಿದೆ‌. ಪರಿಹಾರ ನೀಡುವಲ್ಲಿ ಸಾಕಷ್ಟು ಗೋಲ್​ಮಾಲ್ ಆಗಿದೆ ಅನ್ನೋ ಆರೋಪ ಕೂಡ ಇದೆ‌. ಅಧಿಕಾರಿಗಳ ಯಡವಟ್ಟು ಸರ್ಕಾರಕ್ಕೆ ಕಪ್ಪು ಮಸಿ ಬಳಿಯುವಂತಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನಿಜವಾದ ಫಲಾನುಭವಿಗಳಿಗೆ ಪರಿಹಾರ ನೀಡುವ ಮೂಲಕ ಬಡ ಕುಟುಂಬಗಳ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.
Published by:HR Ramesh
First published: