HOME » NEWS » District » A STATEWIDE RAIL BAND MOVEMENT ON JANUARY 30 TO PROTEST THE FORMATION OF THE MARATHA DEVELOPMENT AUTHORITY RHHSN NCHM

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಜ.30ರಂದು ರಾಜ್ಯಾದ್ಯಂತ ರೈಲು ಬಂದ್ ಚಳವಳಿಗೆ ವಾಟಾಳ್ ನಾಗರಾಜ್ ಕರೆ

ಕನ್ನಡದ ನೆಲದಲ್ಲಿ ಕನ್ನಡ ಬಳಸದೆ ತಮಿಳು ಭಾಷೆಯ ನಾಮಫಲಕ ಹಾಕಿರುವ ಬಗ್ಗೆ ಕಿಡಿಕಾರಿದ ವಾಟಾಳ್ ತಮ್ಮ ಬೆಂಬಲಿಗರೊಂದಿಗೆ ಅಲ್ಲಿಗೆ ತೆರಳಿ ತಮಿಳು ಭಾಷೆಯಲ್ಲಿದ್ದ ನಾಮಫಲಕಗಳನ್ನು ಕಿತ್ತೆಸೆದರು. ಚಾಮರಾಜನಗರ ಗಡಿಯೊಂದೇ ಅಲ್ಲ, ಬೆಳಗಾವಿ, ಬೀದರ್ ಜಿಲ್ಲೆಗಳ ಗಡಿಭಾಗಗಳಲ್ಲು ಕನ್ನಡದ ನೆಲದಲ್ಲಿ ಹೀಗೆ ಅನ್ಯ ಭಾಷೆಯ ನಾಮಫಲಕಗಳಿದ್ದು ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

news18-kannada
Updated:January 11, 2021, 6:07 AM IST
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಜ.30ರಂದು ರಾಜ್ಯಾದ್ಯಂತ ರೈಲು ಬಂದ್ ಚಳವಳಿಗೆ ವಾಟಾಳ್ ನಾಗರಾಜ್ ಕರೆ
ಚಾಮರಾಜನಗರದಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ.
  • Share this:
ಚಾಮರಾಜನಗರ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ  ಜನವರಿ 30 ರಂದು ರಾಜ್ಯಾದ್ಯಂತ ರೈಲು ಬಂದ್​ ಚಳವಳಿ ನಡೆಸಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಚಾಮರಾಜನಗರದ  ರೈಲ್ವೇ ನಿಲ್ದಾಣದ ಮುಂದೆ ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಅವರು, ಈಗಾಗಲೇ ಮೊದಲ ಹಂತದಲ್ಲಿ ಕರ್ನಾಟಕ ಬಂದ್ ನಡೆಸಲಾಗಿದೆ. ಎರಡನೇ ಹಂತದಲ್ಲಿ ರೈಲು ತಡೆ ಚಳವಳಿ ನಡೆಸಲು ನಿರ್ಧರಿಸಲಾಗಿದೆ. ಜನವರಿ 9 ರಂದು ನಡೆಸಲು ನಿರ್ಧರಿಸಿದ್ದ ಚಳವಳಿಯನ್ನು ಜನವರಿ 30ಕ್ಕೆ  ಮುಂದೂಡಲಾಗಿದ್ದು, ಅಂದು ರಾಜ್ಯದ ಉದ್ದಗಲಕ್ಕೂ ರೈಲು ಹಳಿಗಳ ಮೇಲೆ ಕುಳಿತು ಚಳವಳಿ ನಡೆಸಲಾಗುವುದು. ಕನ್ನಡಪರ ಸಂಘಟನೆಗಳ ಹತ್ತು ಸಾವಿರ ಕಾರ್ಯಕರ್ತರು ರೈಲು ತಡೆದು ಜೈಲ್ ಭರೋ ಚಳವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಯಡಿಯೂರಪ್ಪ ಸರ್ವಾಧಿಕಾರಿ, ಯಾರ ಮಾತನ್ನು ಕೇಳುವುದಿಲ್ಲ, ಮಂತ್ರಿಗಳನ್ನಾಗಲಿ, ಶಾಸಕರನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಳ್ಳವುದಿಲ್ಲ. ತಾವು ಮಾಡಿದ್ದೆ ಸರಿ ಎಂಬ ಧೋರಣೆ ಹೊಂದಿದ್ದಾರೆ ಎಂದು ಕಿಡಿಕಾರಿದ ವಾಟಾಳ್, ಶಾಸನಸಭೆಯಲ್ಲಾಗಲಿ, ಸಚಿವ ಸಂಪುಟದಲ್ಲಾಗಲಿ ಚರ್ಚಿಸದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಪ್ರಾಧಿಕಾರ ರಚನೆ ಮಾಡಲಾಗಿದೆ. ಬಸವಕಲ್ಯಾಣದಲ್ಲಿ ಸುಮಾರು 40  ಸಾವಿರ ಮರಾಠಿಗರಿದ್ದಾರೆ. ಬಸವಕಲ್ಯಾಣ ಉಪಚುನಾವಣೆ ಹಿನ್ನೆಲೆಯಲ್ಲಿ ಮರಾಠಿಗರನ್ನು ಓಲೈಸಲು ಈ ಪ್ರಾಧಿಕಾರ ರಚಿಸಿದ್ದಾರೆ ಎಂದರು.

ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಶಿವಸೇನೆ ಈಗಾಗಲೇ  ಸುಪ್ರೀಂಕೋರ್ಟ್ ನಲ್ಲಿ ಕೇಸ್ ಹಾಕಿದೆ. ಇಂತಹ ಸಂದರ್ಭದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ಅಪಾಯಕಾರಿ ಬೆಳವಣಿಗೆ ಎಂದ ಅವರು ಈಗ ಪ್ರಾಧಿಕಾರದ ಕಚೇರಿಯನ್ನು ವಿಧಾನಸೌಧದಲ್ಲಿ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಕಚೇರಿ ತೆರೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಇದನ್ನು ಓದಿ: ಕನಕಪುರವನ್ನು ರಾಜ್ಯ, ರಾಷ್ಟ್ರ ನೋಡುತ್ತಿದೆ, ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ: ಡಿ.ಕೆ.ಶಿವಕುಮಾರ್ ಕರೆ

ಉಪಚುನಾವಣೆ ಹಿನ್ನೆಲೆಯಲ್ಲಿ ಬಸವಕಲ್ಯಾಣದಲ್ಲಿ ತರಾತುರಿಯಲ್ಲಿ ಅನುಭವ ಮಂಟಪಕ್ಕೆ ಶಂಕುಸ್ಥಾನಪನೆ ಮಾಡಲಾಗಿದೆ. ಒಂದು ಕಡೆ ಮರಾಠ ಅಭಿವೃದ್ಧಿ ಪ್ರಾಧಿಕಾರ, ಇನ್ನೊಂದು ಕಡೆ ಅನುಭವ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ, ಈ  ವಿಚಾರಗಳನ್ನು ಮುಂದಿಟ್ಟುಕೊಂಡು ಸಲೀಸಾಗಿ  ಚುನಾವಣೆ  ಗೆಲ್ಲಬಹುದು ಎಂಬುದು ಯಡಿಯೂರಪ್ಪ ಅವರ  ಲೆಕ್ಕಾಚಾರವಾಗಿದೆ ಎಂದು ಆರೋಪಿಸಿದ ವಾಟಾಳ್ ನಾಗರಾಜ್, ಯಡಿಯೂರಪ್ಪ ಭ್ರಷ್ಟ ಮುಖ್ಯಮಂತ್ರಿ, ಅವರಿಗೆ ಅನುಭವ ಮಂಟಪ ಶಂಕುಸ್ಥಾಪನೆ ಮಾಡಲು ಯಾವುದೇ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Youtube Video

ಗಡಿಯಲ್ಲಿ ತಮಿಳುನಾಮಫಲಕ ಕಿತ್ತೆಸೆದ ವಾಟಾಳ್ ನಾಗರಾಜ್ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿ ಅಳವಡಿಸಿರುವ  ತಮಿಳು ನಾಮಫಲಕಗಳನ್ನು ವಾಟಾಳ್ ನಾಗರಾಜ್ ಹಾಗೂ ಅವರ ಬೆಂಗಲಿಗರು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡಿನ ತಾಳವಾಡಿಗೆ ಸಂಪರ್ಕ ಕಲ್ಪಿಸುವ ಅಟ್ಟುಗೂಳಿಪುರ ಬಳಿ ಕನ್ನಡದ ನೆಲದಲ್ಲೇ ರಸ್ತೆ ಸೂಚಕ ತಮಿಳುನಾಡು ನಾಮಫಲಕಗಳನ್ನು ಅಳವಡಿಸಲಾಗಿತ್ತು. ಕನ್ನಡದ ನೆಲದಲ್ಲಿ ಕನ್ನಡ ಬಳಸದೆ ತಮಿಳು ಭಾಷೆಯ ನಾಮಫಲಕ ಹಾಕಿರುವ ಬಗ್ಗೆ ಕಿಡಿಕಾರಿದ ವಾಟಾಳ್ ತಮ್ಮ ಬೆಂಬಲಿಗರೊಂದಿಗೆ ಅಲ್ಲಿಗೆ ತೆರಳಿ ತಮಿಳು ಭಾಷೆಯಲ್ಲಿದ್ದ ನಾಮಫಲಕಗಳನ್ನು ಕಿತ್ತೆಸೆದರು. ಚಾಮರಾಜನಗರ ಗಡಿಯೊಂದೇ ಅಲ್ಲ, ಬೆಳಗಾವಿ, ಬೀದರ್ ಜಿಲ್ಲೆಗಳ ಗಡಿಭಾಗಗಳಲ್ಲು ಕನ್ನಡದ ನೆಲದಲ್ಲಿ ಹೀಗೆ ಅನ್ಯ ಭಾಷೆಯ ನಾಮಫಲಕಗಳಿದ್ದು ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ವರದಿ; ಎಸ್.ಎಂ.ನಂದೀಶ್ 
Published by: HR Ramesh
First published: January 11, 2021, 6:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories