ಮಂಗಳೂರು(ಏಪ್ರಿಲ್ 09): ಮಂಗಳೂರು ಸಮೀಪದ ತೊಕ್ಕೊಟ್ಟಿನಲ್ಲೆಲ್ಲಾ ಈಗ ಒಂದು ಕೋಟಿ ರೂಪಾಯಿಯದ್ದೇ ಸುದ್ದಿ. ಅಲ್ಲಿನ ಖಾಸಗಿ ಕಟ್ಟಡದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿರೋ 65 ವರ್ಷದ ಮೊಯ್ದಿನ್ ಕುಟ್ಟಿಗೆ ಬರೋಬ್ಬರಿ 1 ಕೋಟಿ ರೂಪಾಯಿಯ ಲಾಟರಿ ಒಲಿದಿದೆ. ಈತನ ಅದೃಷ್ಟ ನೋಡಿ ಊರವರೆಲ್ಲಾ ಬೆರಗಾಗಿದ್ದಾರೆ.
ಕೇರಳ ಮೂಲದ ಮೊಯ್ದಿನ್ ಕುಟ್ಟಿ ಕೆಲಸ ಅರಸಿ ಕೆಲ ವರ್ಷಗಳ ಹಿಂದೆ ಪತ್ನಿ, ಮೂವರು ಮಕ್ಕಳ ಜೊತೆ ಮಂಗಳೂರಿಗೆ ವಲಸೆ ಬಂದು ನೆಲೆಸಿದ್ದಾರೆ. ಮಂಗಳೂರು ಹೊರವಲಯದ ತೊಕ್ಕೊಟ್ಟಿನ ಖಾಸಗಿ ಕಟ್ಟಡದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಗಾಗ ಲಾಟರಿ ಖರೀದಿಸುವ ಹವ್ಯಾಸ ಹೊಂದಿರುವ ಮೊಯ್ದಿನ್ ಕುಟ್ಟಿ ತನ್ನ ಅದೃಷ್ಟದ ಬಾಗಿಲು ಯಾವಾಗ ತೆರೆಯುವುದೋ ಎಂದು ಕಾಯುತ್ತಲೇ ಇದ್ದರು.
ಕಳೆದ ವಾರ ಖರ್ಚಿಗೂ ಹಣವಿಲ್ಲದ ಪರಿಸ್ಥಿತಿ ಎದುರಾದಾಗ ತೊಕ್ಕೊಟ್ಟಿನ ಟೈಲರ್ ರವಿಯ ಬಳಿ 500 ರೂಪಾಯಿಗಳನ್ನು ಸಾಲವಾಗಿ ಪಡೆದರು. ನಂತರ ಅಗತ್ಯ ವಸ್ತುಗಳನ್ನು ಕೊಳ್ಳಲು ಹತ್ತಿರದ ಉಪ್ಪಳಕ್ಕೆ ತೆರಳಿದರು. ಅಲ್ಲಿಯೇ ಏಪ್ರಿಲ್ 4ರಂದು ಡ್ರಾ ಆಗುವ 100 ರೂಪಾಯಿ ಬೆಲೆಯ ಕೇರಳದ ಭಾಗ್ಯಮಿತ್ರ ಲಾಟರಿ ಟಿಕೆಟ್ ಖರೀದಿಸಿದರು.
ಭಾಗ್ಯಮಿತ್ರ ಲಾಟರಿಯಲ್ಲಿ ಒಟ್ಟು 5 ಜನರಿಗೆ 1 ಕೋಟಿ ರೂಪಾಯಿ ಬಹುಮಾನ ಲಭಿಸಿದೆ. ಈ ಐವರಲ್ಲಿ ಮೊಯ್ದಿನ್ ಕೂಡಾ ಒಬ್ಬರಾಗಿದ್ದಾರೆ. ಸಾಲ ಮಾಡಿ ಕೊಂಡ ಲಾಟರಿ ಟಿಕೆಟ್ ಹೀಗೆ ತಮ್ಮ ಹಣೆಬರಹವನ್ನೇ ಬದಲಿಸಬಹುದು ಎನ್ನುವ ಸಣ್ಣ ಅಂದಾಜು ಕೂಡಾ ಇವರಿಗೆ ಇರಲಿಲ್ಲ. ಈಗಂತೂ ಬಹಳ ಸಂತಸದಿಂದಿದ್ದಾರೆ ಮೊಯ್ದಿನ್ ಕುಟ್ಟಿ. ಲಾಟರಿ ಹಣ ಕೈಸೇರಿದ ನಂತರ ಕುಟುಂಬ ಸಮೇತ ಊರಿಗೆ ಮರಳಿ ಅಲ್ಲೇ ನೆಮ್ಮದಿಯಾಗಿ ನೆಲೆಸುವ ಆಲೋಚನೆ ಇವರದ್ದು. ತಾನು ಸಾಲ ನೀಡಿದ ಹಣದಿಂದ ಪಡೆದ ಲಾಟರಿ ಟಿಕೆಟ್ ಗೆ ಬಹುಮಾನ ಬಂದಿರೋದು ಟೈಲರ್ ರವಿಗೂ ಖುಷಿಕೊಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ