Best Teacher: ಶತಮಾನದ ಶಾಲೆ ಉಳಿಸಿದ ಶಿಕ್ಷಕನಿಗೆ ಲಭಿಸಿತು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ..!
ದಾನಿಗಳ ಸಹಯೋಗದೊಂದಿಗೆ ಸ್ವೆಟರ್, ಬಸ್, ಆಟೋ ಚಾರ್ಜ್, ಪ್ರತಿವರ್ಷ ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಿದ್ರು. ಇದ್ರಿಂದ ಇಂದು ಶಾಲೆ ಉಳಿದಿದ್ದು, 1 ರಿಂದ 7 ನೇ ತರಗತಿಯಲ್ಲಿ 30 ಮಂದಿಯಿದ್ದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 100 ರ ಗಡಿ ದಾಟಿದ್ದು, ಶತಮಾನದ ಶಾಲೆ ಸದ್ಯ ಮುಚ್ಚದೇ ಉಳಿದಿದೆ.
ಮಂಡ್ಯ(ಸೆ.09): ಇಂದು ಹಲವು ಸರ್ಕಾರಿ ಶಾಲೆಗಳು ಮುಚ್ಚುವ ಆತಂಕದಲ್ಲಿದೆ. ಅದೇ ರೀತಿ ಇತಿಹಾಸ ಪ್ರಸಿದ್ದ ಸ್ಥಳದಲ್ಲಿರುವ ಹಾಗೂ ಮಹಾನ್ ವ್ಯಕ್ತಿಗಳು ಓದಿದ ಶತಮಾನದ ಶಾಲೆಯೊಂದು ಅದೇ ಹಂತಕ್ಕೆ ಹೋಗಿತ್ತು. ಆದ್ರೆ ಓರ್ವ ಶಿಕ್ಷಕನ ಪರಿಶ್ರಮದಿಂದ ಇಂದು ಆ ಶಾಲೆ ಉಳಿದಿದ್ದು, ನೂರಾರು ಬಡ ಮಕ್ಕಳಿಗೆ ಆಸರೆಯಾಗಿದೆ. ಇದೀಗ ಆ ಶಿಕ್ಷಕನಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಎಲ್ಲರ ಸಂತಸಕ್ಕೆ ಕಾರಣವಾಗಿದೆ.
ಹೌದು, ಮೇಲುಕೋಟೆ. ಈ ಹೆಸರು ಕೇಳಿದ ತಕ್ಷಣ ನಮಗೆ ನೆನಪಿಗೆ ಬರೋದು ಇತಿಹಾಸ ಪ್ರಸಿದ್ದ ಚೆಲುವನಾರಾಯಣಸ್ವಾಮಿ ದೇವಾಲಯ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಸಾವಿರಾರು ವರ್ಷ ಇತಿಹಾಸ ಹೊಂದಿರುವ ಈ ಪುಣ್ಯ ಕ್ಷೇತ್ರ. ಈ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಕಳೆದ ಹತ್ತು ವರ್ಷದ ಹಿಂದೆ ಮುಚ್ಚುವ ಹಂತಕ್ಕೆ ಹೋಗಿತ್ತು. 1875 ರಲ್ಲಿ ಆರಂಭವಾದ ಈ ಶಾಲೆಯಲ್ಲಿ ನವೋದಯ ಹರಿಕಾರರಾದ ಪು.ತಿ.ನಂ, ಕನ್ನಡ ಪತ್ರಿಕೋದ್ಯಮದ ದಿಗ್ಗಜ ಖಾತ್ರಿ ಶಾಮಣ್ಣ ಸೇರಿದಂತೆ ಹಲವು ಗಣ್ಯರು ಓದಿದ್ದು ಕೇವಲ ಮೂವತ್ತೆರಡು ಮಕ್ಕಳು ಮಾತ್ರ ಎಂದು ಶಾಲೆಯನ್ನೇ ಮುಚ್ಚಲು ಸರ್ಕಾರ ಮುಂದಾಗಿತ್ತು.
ಆದ್ರೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಇದೇ ಶಾಲೆಗೆ ಶಿಕ್ಷಕರಾಗಿ ಬಂದ ಮುಖ್ಯಶಿಕ್ಷಕ ಸಂತಾನರಾಮನ್ ರವರು ಮುಚ್ಚುವ ಹಂತಕ್ಕೆ ಹೋಗಿದ್ದ ಶಾಲೆಗೆ ಪುನಶ್ಚೇತನ ನೀಡಿದ್ರು. ಸ್ಥಳೀಯ ಶಾಸಕ ಸಿ.ಎಸ್.ಪುಟ್ಟರಾಜು ರವರ ಸಹಕಾರದೊಂದಿಗೆ ಶಾಲೆಯ ಉಳಿವಿಗೆ ಮುಂದಾದ್ರು. ಮೇಲುಕೋಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮನೆ ಮನೆಗೆ ತೆರಳಿ ಸರ್ಕಾರಿ ಶಾಲೆಗೆ ನಿಮ್ಮ ಮಕ್ಕಳನ್ನ ಸೇರಿಸಿ, ಉಚಿತವಾಗಿ ಬುಕ್ಸ್, ಪೆನ್, ಬಟ್ಟೆ ಸೇರಿದಂತೆ ಎಲ್ಲ ಸೌಲಭ್ಯ ನೀಡ್ತೀವಿ ಎಂದು ಪೋಷಕರನ್ನ ಮನವೊಲಿಸಿದ್ರು.
ದಾನಿಗಳ ಸಹಯೋಗದೊಂದಿಗೆ ಸ್ವೆಟರ್, ಬಸ್, ಆಟೋ ಚಾರ್ಜ್, ಪ್ರತಿವರ್ಷ ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಿದ್ರು. ಇದ್ರಿಂದ ಇಂದು ಶಾಲೆ ಉಳಿದಿದ್ದು, 1 ರಿಂದ 7 ನೇ ತರಗತಿಯಲ್ಲಿ 30 ಮಂದಿಯಿದ್ದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 100 ರ ಗಡಿ ದಾಟಿದ್ದು, ಶತಮಾನದ ಶಾಲೆ ಸದ್ಯ ಮುಚ್ಚದೇ ಉಳಿದಿದೆ.
ಇನ್ನು ಶಾಲೆಯ ನವೀಕರಿಸಿದ ಕಟ್ಟಡವನ್ನ ಮಾಜಿ ಪ್ರಧಾನಿ ದೇವೇಗೌಡರು ಉದ್ಘಾಟಿಸಿದ್ದು, ಇನ್ನು ಈ ಶಾಲೆ ಮೇಲೆತ್ತರಕ್ಕೆ ಹೋಗಬೇಕು ಎಂದು ಮುಖ್ಯಶಿಕ್ಷಕ ಪರಿಶ್ರಮಪಡುತ್ತಿದ್ದಾರೆ. ಅವರ ಕಾರ್ಯಾಕ್ಕೆ ಶಾಲೆಯ ಸಹ ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಸದಸ್ಯರು ಸಹಕಾರನೀಡುತ್ತಿದ್ದು, ಮತ್ತಷ್ಟು ಸೌಲಭ್ಯ ಒದಗಿಸುವ ಪ್ರಯತ್ನಪಡುತ್ತಿದ್ದಾರೆ. ಅಲ್ಲದೇ ಶಾಲಾ ಉಳಿವಿನ ಗುರುಬ್ರಹ್ಮ ಸಂತಾನರಾಮನ್ ರವರಿಗೆ ಈ ವರ್ಷದ ಜಿಲ್ಲಾಮಟ್ಟದ ಉತ್ತಮಶಿಕ್ಷಕ ಪ್ರಶಸ್ತಿ ಲಭಿಸಿರುವುದು ಅವರ ಕೆಲಸಕ್ಕೆ, ಶತಮಾನದ ಸರ್ಕಾರಿ ಮೇಲೆ ಇರುವ ಕಾಳಜಿ ತೋರಿಸುತ್ತಿದೆ. ಅಲ್ಲದೇ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಇಡೀ ಗ್ರಾಮದ ಜನರಿಗೆ ಸಂತಸ ತರಿಸಿದೆ..
ಇನ್ನು ಆಧ್ಯಾತ್ಮಿಕ ಚಿಂತಕ, ಕರ್ನಾಟಕ ಮುಕ್ತ ವಿ.ವಿ ಯ ಪುರಾತತ್ವ ವಿಭಾಗದ ಮುಖ್ಯಸ್ಥ ಸೆಲ್ವಪಿಳ್ಳೆ ಅಯ್ಯಂಗರ್ ರವರು ಸಹೋದರ ಸಂತಾನರಾಮನ್ ರವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಪ್ರತಿಯೊಬ್ಬ ವಿದ್ಯಾರ್ಥಿ ಹಿಂದೆ ಗುರು ಒಬ್ಬನಿದ್ರೆ ಎಂತಹ ಗುರಿ ಬೇಕಾದ್ರು ತಲುಪಬಹುದು ಎಂಬ ಮಾತಿದೆ. ಅದೇ ರೀತಿ ಸರ್ಕಾರಿ ಶಾಲೆಯ ಈ ಶಿಕ್ಷಕ ಶತಮಾಮದ ಶಾಲೆಯನ್ನ ಉಳಿಸುವ ನಿಟ್ಟಿನಲ್ಲಿ ಪಟ್ಟ ಪರಿಶ್ರಮ ನಿಜಕ್ಕೂ ಮೆಚ್ಚುವಂತದ್ದಾಗಿದೆ..
(ವರದಿ - ಸುನೀಲ್ ಗೌಡ)
Published by:Latha CG
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ