ಕೋವಿಡ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶಿಕ್ಷಕ...! ಬದುಕು ಕಟ್ಟಿಕೊಳ್ಳಲು ರಸ್ತೆ ಬದಿ ಹೋಟೆಲ್ ಆರಂಭ

1 ರಿಂದ 5 ನೇ ತರಗತಿವರೆಗೆ ಶಾಲೆ ಆರಂಭ ಮಾಡಿ ಕಡಿಮೆ ಶುಲ್ಕದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಸೌಕರ್ಯ ಕಲ್ಪಿಸುವ ಕಾರ್ಯ ಮಾಡುತ್ತಿದ್ದರು. ಸಂತೋಷ ಅವರು ಶಾಲೆಯ ಮುಖ್ಯಸ್ಥರಾಗಿ ಹಾಗೂ ಗಣಿತ ವಿಷಯದ ಶಿಕ್ಷಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಆದರೆ, ಈಗ ಕೋವಿಡ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿ ಹೋಟೆಲ್ ಆರಂಭ ಮಾಡಿ ಜೀವನ ನಡೆಸುತ್ತಿದ್ದಾರೆ.

ಹೋಟೆಲ್ ಆರಂಭಿಸಿರುವ ಶಿಕ್ಷಕ ಸಂತೋಷ್

ಹೋಟೆಲ್ ಆರಂಭಿಸಿರುವ ಶಿಕ್ಷಕ ಸಂತೋಷ್

  • Share this:
ಯಾದಗಿರಿ: ಕೋವಿಡ್ 19 ಜಗತ್ತನ್ನೇ ನಡುಗಿಸಿದೆ. ಬಹುತೇಕ ರಾಷ್ಟ್ರಗಳು ಈಗ ಆರ್ಥಿಕ ಹೊಡೆತ ಎದುರಿಸುತ್ತಿವೆ. ಇದರ ಬಿಸಿ ಜನಸಾಮಾನ್ಯರಿಗೂ ತಟ್ಟಿದೆ. ಅನೇಕ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಕೋವಿಡ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯದಲ್ಲಿ ಶಾಲೆಗಳು ಆರಂಭಗೊಳ್ಳದ ಕಾರಣ ಖಾಸಗಿ ಶಾಲೆಯ ಶಿಕ್ಷಕರ ಬದುಕು ಈಗ ಮೂರಾಬಟ್ಟೆಯಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಸಿಂಗೇರಿ ಓಣಿಯ ನಿವಾಸಿಯಾದ ಶಿಕ್ಷಕ ಸಂತೋಷ ಈಗ ಬದುಕು ಕಟ್ಟಿಕೊಳ್ಳಲು ರಸ್ತೆ ಬದಿ ಹೋಟೆಲ್ ಆರಂಭಿಸಿದ್ದಾರೆ. ಕೆಂಭಾವಿ ಪಟ್ಟಣದ ಯಡಿಯಾಪುರ ಮಾರ್ಗದ ರಸ್ತೆ ಬದಿಯಲ್ಲಿ ಮೊಬೈಲ್ ಹೋಟೆಲ್ ಅನ್ನು ಕಳೆದ ಎರಡು ತಿಂಗಳಿನಿಂದ ಆರಂಭ ಮಾಡಿ ಈಗ  ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅವರೇ ಖುದ್ದಾಗಿ ಇಡ್ಲಿ, ವಡಾ,ಅನ್ನ,ಸಾಂಬಾರ್, ಚಟ್ನಿ ತಯಾರಿಸಿ ಜನರ ಹಸಿವು ನೀಗಿಸುವ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ತಾತ್ಕಾಲಿಕವಾಗಿ ಶಿಕ್ಷಕ ವೃತ್ತಿಯಿಂದ ಈಗ ಹೋಟೆಲ್ ಉದ್ಯಮದತ್ತ ಚಿತ್ತ ಹರಿಸಿ ಜೀವನ ನಡೆಸುತ್ತಿದ್ದಾರೆ.

ಅಜ್ಜನ ಕನಸು ಸಾಕಾರಗೊಳಿಸಲು ಶಾಲೆ ಆರಂಭ...!

ಸಂತೋಷ ಅವರ ಅಜ್ಜ ನಾಗೇಶ್ವರ ಶಾಸ್ತ್ರಿ ಅವರು ಶಾಲೆ ಆರಂಭ ಮಾಡಿ ಬಡಜನರಿಗೆ ಶಿಕ್ಷಣ ನೀಡಬೇಕೆಂದು ಕನಸು ಕಟ್ಟಿಕೊಂಡಿದ್ದರು. ಅದರಂತೆ ಮೊಮ್ಮಗ ಸಂತೋಷ ಅವರು ಕೆಂಭಾವಿಯಲ್ಲಿ 15 ವರ್ಷದ ಹಿಂದೆ ಪ್ರತಾಪ್ ಗಿರಿ ಶಿಕ್ಷಣ ಸಂಸ್ಥೆ ಆರಂಭ ಮಾಡಿದರು. 1 ರಿಂದ 5 ನೇ ತರಗತಿವರೆಗೆ ಶಾಲೆ ಆರಂಭ ಮಾಡಿ ಕಡಿಮೆ ಶುಲ್ಕದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಸೌಕರ್ಯ ಕಲ್ಪಿಸುವ ಕಾರ್ಯ ಮಾಡುತ್ತಿದ್ದರು. ಸಂತೋಷ ಅವರು ಶಾಲೆಯ ಮುಖ್ಯಸ್ಥರಾಗಿ ಹಾಗೂ ಗಣಿತ ವಿಷಯದ ಶಿಕ್ಷಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಆದರೆ, ಈಗ ಕೋವಿಡ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿ ಹೋಟೆಲ್ ಆರಂಭ ಮಾಡಿ ಜೀವನ ನಡೆಸುತ್ತಿದ್ದಾರೆ.

ಇದನ್ನು ಓದಿ: ಬಿಜೆಪಿ ಜೊತೆಗೆ ಫೇಸ್‌ಬುಕ್‌ ನಂಟು; ಸಾಮಾಜಿಕ ಜಾಲತಾಣ ದಿಗ್ಗಜನ ಪ್ರಶ್ನಿಸಲು ಮುಂದಾದ ತರೂರ್‌ ನೇತೃತ್ವದ ಸ್ಥಾಯಿ ಸಮಿತಿ

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶಿಕ್ಷಕ ಸಂತೋಷ ಮಾತನಾಡಿ, ನಮ್ಮ ಅಜ್ಜನ ಕನಸು ಸಾಕಾರಗೊಳಿಸಲು ಶಾಲೆ ಆರಂಭಿಸಿದ್ದೇನೆ. ಈಗ ಕೋವಿಡ್ ಸಂಕಷ್ಟದಿಂದ ಜೀವನ ನಡೆಸಲು ಕಷ್ಟವಾದ ಹಿನ್ನೆಲೆ ಹೋಟೆಲ್ ಆರಂಭ ಮಾಡಿ ಜೀವನ ನಡೆಸುತ್ತಿದ್ದೇನೆ. ಬಹಳಷ್ಟು ಶಿಕ್ಷಕರಿಗೆ ಸಮಸ್ಯೆಯಾಗಿದೆ. ಸರಕಾರ ಖಾಸಗಿ ಶಾಲೆ ಹಾಗೂ ಶಿಕ್ಷಕರಿಗೆ ಆರ್ಥಿಕ ಸಹಾಯ ಮಾಡಿದರೆ ಅನುಕೂಲವಾಗುತ್ತದೆ ಎಂದರು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜೀವನ ನಡೆಸುವುದು ಹೇಗೆ ಎಂದು‌  ಮನೆಯಲ್ಲಿ ಖಾಲಿ ಕುಳಿತುಕೊಳ್ಳುವರಿಗೆ ಶಿಕ್ಷಕ ಸಂತೋಷ ಅವರು ಈಗ ಮಾದರಿಯಾಗಿದ್ದಾರೆ.
Published by:HR Ramesh
First published: