ದಕ್ಷಿಣ ಕನ್ನಡ (ಜುಲೈ 13); ಪುತ್ತೂರು ಮಹಿಳಾ ಪೋಲೀಸ್ ಠಾಣೆಗೆ ಮತ್ತೆ ಕೊರೋನಾ ವಕ್ಕರಿಸಿದೆ. ಈ ಹಿಂದೆ ವಿಟ್ಲ ಪೋಲೀಸ್ ಕಾನ್ಸ್‌ಟೇಬಲ್ ಸಂಪರ್ಕ ಹಿನ್ನಲೆಯಲ್ಲಿ ಪುತ್ತೂರು ಮಹಿಳಾ ಪೋಲೀಸ್ ಠಾಣೆಯ ಕೆಲವರನ್ನು ಕ್ವಾರೈಂಟೈನ್ ಗೆ ಒಳಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಠಾಣೆಯ ಯಾವೊಬ್ಬ ಸಿಬ್ಬಂದಿಯಲ್ಲೂ ಕೊರೋನಾ ಪಾಸಿಟಿವ್ ಪತ್ತೆಯಾಗಿರಲಿಲ್ಲ. ಆದರೆ ಈ ಬಾರಿ ಠಾಣೆಯ ಎಸ್‌ಐ ಮತ್ತು ಕಾನ್ಸ್‌ಟೇಬಲ್ ಓರ್ವರಿಗೆ ಕೊರೋನಾ ದೃಢಪಟ್ಟಿದೆ.
ಪುತ್ತೂರು ನಗರ ಪೋಲೀಸ್ ಠಾಣೆಯ ಕಾನ್ಸ್‌ಟೇಬಲ್‌ನಲ್ಲಿ ಪಾಸಿಟೀವ್ ಪತ್ತೆಯಾದ ಹಿನ್ನಲೆಯಲ್ಲಿ ಮಹಿಳಾ ಪೋಲೀಸ್ ಠಾಣೆಯ ಎಸ್‌ಐ ಸೇರಿದಂತೆ ಇಬ್ಬರು ಮಹಿಳಾ ಪೋಲೀಸರನ್ನು ಕ್ವಾರೈಂಟೈನ್ ಮಾಡಲಾಗಿತ್ತು. ಆದರೆ, ಇದೀಗ ಬಂದ ವರದಿಯಲ್ಲಿ ಎಸ್‌ಐ ಮತ್ತು ಓರ್ವ ಕಾನ್ಸ್‌ಟೇಬಲ್‌ನಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ಮಹಿಳಾ ಎಸ್‌ಐ ಅವರ 22ವರ್ಷದ ಮಗಳಿಗೂ ಸೋಂಕು ತಗುಲಿರುವುದು ಆಘಾತಕ್ಕೆ ಕಾರಣವಾಗಿದೆ.
ಭಾನುವಾರದ ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ವೇಳೆ ಇವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಬ್ಬರು ಪೊಲೀಸರೂ ಈ ಹಿಂದೆಯೇ ಕ್ವಾರೈಂಟೈನ್‌ನಲ್ಲಿ ಇದ್ದ ಕಾರಣ ಠಾಣೆಯ ಇತರ ಸಿಬ್ಬಂದಿಗಳ ಸಂಪರ್ಕವಾಗಿರುವ ಸಾಧ್ಯತೆ ಕಡಿಮೆ. ಹೀಗಾಗಿ ಠಾಣೆಯು ಎಂದಿನಂತೆ ಕಾರ್ಯಾಚರಿಸಲಿದೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ