Free Stationary for Kids: ಕರೋನಾ ಲಾಕ್ ಡೌನ್ ಅವಧಿಯನ್ನ ಕೆಲವರು ಸಾರ್ಥಕ ಕೆಲಸಕ್ಕೆ ಬಳಸಿಕೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಯಚೂರಿನಲ್ಲೊಬ್ಬ ಎಂಜಿನಿಯರ್ ಕಂಪನಿ ನೀಡಿದ 'ವರ್ಕ್ ಫ್ರಮ್ ಹೋಮ್' ನ್ನ ಬಳಸಿಕೊಂಡು "ಟೇಕ್ ಫ್ರಮ್ ಹೋಮ್ " ಎಂಬ ವಿನೂತನ ಯೋಜನೆ ಆರಂಭಿಸುವುದರ ಮೂಲಕ ಬಿಸಿಲೂರಿನ ಬಡ ಮಕ್ಕಳ ಕಲಿಕೆಯ ಹಸಿವನ್ನ ನೀಗಿಸಲು ಮುಂದಾಗಿದ್ದಾರೆ. ಕರೋನಾ ಮಹಾಮಾರಿ ಲಗ್ಗೆ ಇಟ್ಟ ಬಳಿಕ ಅನೇಕ ಖಾಸಗೀ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಾಮ್ ಹೋಮ್ ಭಾಗ್ಯ ಕರುಣಿಸಿದ್ದನ್ನ ನೀವೆಲ್ಲ ಕೇಳಿದ್ದೀರಿ. ಹೀಗೆ ಕಂಪನಿಯ ನಿರ್ಧಾರದಿಂದ ಮನೆಯಲ್ಲೇ ಕೆಲಸ ಮಾಡಲೆಂದು ಊರಿಗೆ ಬಂದ ವ್ಯಕ್ತಿಯೋರ್ವರು ತಮ್ಮ ಊರಿನ ಬಡ ಮಕ್ಕಳಿಗಾಗಿ "ಟೇಕ್ ಫ್ರಮ್ ಹೋಮ್" ಎಂಬ ವಿನೂತನ ಯೋಜನೆಯೊಂದನ್ನ ಆರಂಭಿಸಿದ್ದಾರೆ.
ಕೋಣೆಯೇ ಸಾಮಗ್ರಿಗಳ ಬಂಢಾರ..!
ಇದಕ್ಕಾಗಿ ಅವರು ತಮ್ಮ ಕೋಣೆಯಲ್ಲಿ ಬರಹ ಸಾಮಗ್ರಿಗಳನ್ನು ತೆರೆದಿಟ್ಟಿದ್ದಾರೆ. ಬರಹ ಸಾಮಗ್ರಿಗಳ ಅಗತ್ಯ ಇರುವವರು ಯಾರು ಬೇಕಾದರೂ ಬಂದು ತೆಗೆದುಕೊಂಡು ಹೋಗಬಹುದು. ಇಂತಹ ತಮ್ಮಕನಸಿನ ಯೋಜನೆಗೆ ಅವರು " ಶ್ರೀ ರಾಘವೇಂದ್ರ ಅಕ್ಷರ ಯಜ್ಞ" ಎಂದು ಹೆಸರಿಟ್ಟಿದ್ದಾರೆ. ಕರೋನಾದಂತಹ ಸಂಕಷ್ಟ ಕಾಲದಲ್ಲಿ ಬಡ ಮಕ್ಕಳ ಕಷ್ಟಕ್ಕೆ ಮರುಗಿ ಇಂತದ್ದೊಂದು ವಿನೂತನ ಕೆಲಸಕ್ಕೆ ಮುಂದಾಗಿರುವುದು ನಗರದ ಗಾಜಗಾರ ಪೇಟೆಯ ರಂಗರಾಜು ದೇಸಾಯಿ ಕಾಡ್ಲೂರು.
ಕೆಲವು ವರ್ಷ ಬ್ರೆಜಿಲ್ ನಲ್ಲಿ ಬಾಷ್ ಕಂಪನಿಯ ಎಂಜಿನಿಯರ್ ಆಗಿದ್ದ ಅವರು, ಅಲ್ಲಿಂದ ಮರಳಿದ ಮೇಲೆ ಬೆಂಗಳೂರಿನಲ್ಲೇ ಕೆಲಸ ಮುಂದುವರೆಸಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ತಮ್ಮ ತವರೂರು ರಾಯಚೂರಿನಲ್ಲಿ ಇದ್ದುಕೊಂಡು 'ವರ್ಕ್ ಫ್ರಮ್ ಹೋಮ್' ಮಾಡುತ್ತಿದ್ದಾರೆ.
ಏನಿದು ಅಕ್ಷರ ಯಜ್ಞ..?
ರಂಗರಾವ್ ದೇಸಾಯಿ ಅವರು ತಮ್ಮ ಮನೆಯ ಮುಂದಿರುವ ತೆರೆದ ಬಾಗಿಲಿನ ಶೆಡ್ ನಲ್ಲಿ 100 ಪೇಜ್ ಸಿಂಗಲ್, ಡಬಲ್ ರೂಲ್ಡ್ ನೋ್ ಬುಕ್ ಗಳು, ಚೌಕಾಕಾರದ ಗೆರೆಯ ನೋಟ್ ಬುಕ್ ಗಳು, ಪೆನ್ಸಿಲ್, ಪೆನ್ಸಿಲ್ ಶಾರ್ಪನರ್, ರಬ್ಬರ್, ರೇಖಾಚಿತ್ರ ಬರೆಯಲು ಬಿಳಿ ಹಾಳೆಗಳು, ಸ್ಕೆಚ್ ಪೆನ್ ಗಳು, ಹೀಗೆ ಮಕ್ಕಳು ತಮ್ಮ ಶಾಲೆಯಲ್ಲಿ ಕಲಿಕೆಗೆ ಪೂರಕವಾಗಿ ಬಹುತೇಕ ಅಗತ್ಯವಿರುವ ಎಲ್ಲಾ ಕಲಿಕಾ ಸಾಮಗ್ರಿಗಳನ್ನು ಇಟ್ಟಿದ್ದಾರೆ.
ಕಲಿಕಾ ಸಾಮರ್ಥ್ಯ ಮತ್ತು ಅಗತ್ಯ ಇರುವ ಮಕ್ಕಳು ಯಾವುದೇ ಅಳುಕಿಲ್ಲದೇ ಶೆಡ್ ಗೆ ಹೋಗಿ ತಮಗೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿದ್ದಾರೆ. ರಂಗರಾವ್ ಅವರು ಆರಂಭಿಸಿರುವ ಈ ಯೋಜನೆಒಂದು ವರ್ಷದ ವರೆಗೆ ಮುಂದುವರೆಯಲಿದೆಯಂತೆ.
ಮೊದಲ ಬಾರಿಯಲ್ಲ ರಂಗರಾವ್ ರ ಶಿಕ್ಷಣ ಸೇವೆ..!
ಕಳೆದ ವರ್ಷವೇ ರಂಗರಾವ್ ಕಲಿಕಾ ಸಾಮಗ್ರಿಗಳನ್ನು ಹಂಚಿದ್ದರು. ಆದರೆ ಹಲವು ಅರ್ಹರಿಗೆ ಅವು ಸಿಕ್ಕಿಲ್ಲ ಎಂಬ ಕೊರಗು ಅವರಿಗಿತ್ತು. ಇದೀಗ ಆ ಕೊರಗು ನೀಗಿಸಲು ತಿಂಗಳಿ ಸರಿ ಸುಮಾರು 6000 ಮೌಲ್ಯದ ಶಿಕ್ಷಣ ಸಾಮಗ್ರಿಗಳನ್ನು ತಂದಿಡಲು ನಿರ್ಧರಿದ್ದಾರೆ. ಈಗಾಗಲೇ ಇದರ ಪ್ರಯೋಜನವನ್ನು ರಾಯಚೂರಿನ ಬಡ ಮಕ್ಕಳು ಪಡೆದುಕೊಳ್ಳುತ್ತಿದ್ದಾರೆ.
(ವರದಿ: ವಿಶ್ವನಾಥ್ ಹೂಗಾರ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ