ಕೃಷ್ಣಾ ನದಿಯಲ್ಲಿ ಪ್ರವಾಹ ಬಂದರೂ 230 ಕುರಿ, ಶ್ವಾನ ಬಿಟ್ಟು ಬಾರದೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಯಿ!

ಮಾಹಿತಿ ಅರಿತು ಸ್ಥಳಕ್ಕೆ ಹುಣಸಗಿ ತಹಸೀಲ್ದಾರ್ ವಿನಯ್ ಕುಮಾರ್ ‌ಪಾಟೀಲ, ಕಂದಾಯ ನಿರೀಕ್ಷಕ ಬಸವರಾಜ, ಹಾಗೂ ‌ನಾರಾಯಣಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಮತ್ತೆ ಕೃಷ್ಣಾ ‌ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಿರುವ ಕಾರಣ ರಕ್ಷಣೆ ಮಾಡಲು ಕಷ್ಟವಾಗುತ್ತಿದೆ. ನಡುಗಡ್ಡೆಯಲ್ಲಿ ಸಿಲುಕಿರುವ ವ್ಯಕ್ತಿಯನ್ನು ಸುರಕ್ಷಿತವಾಗಿ ಕರೆತರಲು ಸಿದ್ದತೆ ನಡೆಸುತ್ತಿದ್ದಾರೆ.

ಕೃಷ್ಣಾ ನದಿ ನಡುಗಡ್ಡೆಯಲ್ಲಿ ಸಿಲುಕಿರುವ ಕುರಿಗಾಯಿ ರಕ್ಷಣೆಗೆ ಸಿದ್ಧತೆ ನಡೆಸಿರುವ ಅಧಿಕಾರಿಗಳು.

ಕೃಷ್ಣಾ ನದಿ ನಡುಗಡ್ಡೆಯಲ್ಲಿ ಸಿಲುಕಿರುವ ಕುರಿಗಾಯಿ ರಕ್ಷಣೆಗೆ ಸಿದ್ಧತೆ ನಡೆಸಿರುವ ಅಧಿಕಾರಿಗಳು.

  • Share this:
ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ ಮತ್ತೆ ಜನರು ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಕೃಷ್ಣಾ ನದಿಯ ಪ್ರವಾಹಕ್ಕೆ ಕುರಿಗಾಯಿನೊಬ್ಬ ನಡುಗಡ್ಡೆಯಲ್ಲಿ ಸಿಲುಕಿ ಈಗ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾನೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ಈಗಾಗಲೇ 2 ಲಕ್ಷ 20 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗಿದ್ದು, ಕೃಷ್ಣಾ ನದಿ ತೀರದಲ್ಲಿ ಈಗ ಪ್ರವಾಹ ಪರಿಸ್ಥಿತಿ ತಲೆದೊರಿದೆ.

ಹುಣಸಗಿ ತಾಲೂಕಿನ ನಾರಾಯಣಪುರ ಪಂಚಾಯಿತಿ ವ್ಯಾಪ್ತಿಗೆ ಬರುವ ಐಬಿ ತಾಂಡಾದ ನಿವಾಸಿ ಟೋಪಣ್ಣ ಕಳೆದ ಮೂರು ದಿನದಿಂದ ಕೃಷ್ಣಾ ನದಿಯ ಎಡದಂಡೆ ಮಾಳಿಯ ನಡುಗಡ್ಡೆಯಲ್ಲಿ ಸಿಲುಕಿದ್ದಾನೆ. 230 ಕುರಿಗಳು ಹಾಗೂ ಮೂರು ಶ್ವಾನಗಳ ಜೊತೆ ನಡುಗಡ್ಡೆಯಲ್ಲಿ ಸಿಲುಕಿದ್ದಾನೆ. ಕೃಷ್ಣಾ ನದಿಯ ಪ್ರವಾಹಕ್ಕೆ ಸಿಲುಕಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾನೆ. ಇದೇ ಭಾನುವಾರ ಐಬಿ ತಾಂಡಾದ ನಿವಾಸಿಗಳಾದ ಸಂತೋಷ, ಕೃಷ್ಣಪ್ಪ, ಹಾಗೂ ಟೋಪಣ್ಣ ,ಟೋಪಣ್ಣನ ಸಹೋದರ ಹೇಮಂತ ಹಾಗೂ ಟೋಪಣ್ಣ ಅವರ ತಂದೆ ಡೀಕ್ಕಪ್ಪ ಚಿನ್ನರಾಠೋಡ ಅವರು ಕೂಡಿಕೊಂಡು ಒಟ್ಟು 230 ಕುರಿಗಳು ಹಾಗೂ ಮೂರು ಶ್ವಾನಗಳೊಂದಿಗೆ ಇದೆ ಭಾನುವಾರ ಅಗಸ್ಟ್ 2 ರಂದು ಕೃಷ್ಣಾ ನದಿಯ ನಡುಗಡ್ಡೆ ಎಡದಂಡೆ ಮಾಳಿಗೆ ಆಹಾರ ಪದಾರ್ಥಗಳೊಂದಿಗೆ ಬುತ್ತಿ ಕಟ್ಟಿಕೊಂಡು ತೆರಳಿದ್ದರು. ಬುಧವಾರ ಕೃಷ್ಣಪ್ಪ ತಮ್ಮ ಸಹೋದರಿ ವಿವಾಹ ನಿಶ್ಚಿತಾರ್ಥದ ಪ್ರಯುಕ್ತ ಊರಿಗೆ ಬಂದಿದ್ದನು.

ಆಗಸ್ಟ್ 6 ರಂದು ಜಲಾಶಯದಿಂದ ಕೃಷ್ಣಾ  ನದಿಗೆ 200 ಕ್ಯೂಸೆಕ್ ನಿಂದ 60 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿತ್ತು. ಆಗ ಟೋಪಣ್ಣ ಸಹೋದರ ಹೇಮಂತ ಹಾಗೂ ಸಂತೋಷ ಇಬ್ಬರು‌ ಈಜಾಡಿಕೊಂಡು ಊರಿಗೆ ವಾಪಸ್ ಬಂದಿದ್ದರು. ಇದೇ ಅಗಸ್ಟ್ 2 ರಿಂದ 5ರವರಗೆ ಕೃಷ್ಣಾ ನದಿಯಲ್ಲಿ ಯಾವುದೇ ಹೆಚ್ಚಿನ ನೀರು ಇರಲಿಲ್ಲ. ಬಸವಸಾಗರ ‌ಜಲಾಶಯದಿಂದ ನೀರಿನ ಹರಿವು ಇರಲಿಲ್ಲ. ಆದರೆ, ಆ ಬಳಿಕ ನೀರಿನ ಹರಿವಿನ ಪ್ರಮಾಣ ಹೆಚ್ಚಾಗುತ್ತಾ ಬಂದಿತು.

ಕೃಷ್ಣಾ ನದಿ ಪ್ರವಾಹದಲ್ಲಿ ಟೋಪಣ್ಣ ಹಾಗೂ ತಂದೆ ಡೀಕಪ್ಪ ಅವರು ಸಿಲುಕಿದರು. ಮನೆಯಿಂದ ತೆಗೆದುಕೊಂಡು ಬಂದ  ಬುತ್ತಿ ಕೂಡ ಖಾಲಿಯಾಗಿದೆ. ನಾಯಿಗಳಿಗೆ ಅನ್ನ ಮಾಡಲು ತಂದ ಅಕ್ಕಿಯನ್ನು ‌ಕುದಿಸಿ ಅನ್ನ ಮಾಡಿಕೊಂಡು ಕುರಿ ಹಾಲಿನೊಂದಿಗೆ ಉಂಡು ಹಸಿವು ನೀಗಿಸಿಕೊಳ್ಳುತ್ತಿದ್ದರು. ಸಂಕಷ್ಟ ಅರಿತು ಡೀಕಪ್ಪ ರಾತ್ರಿ ಸ್ವಲ್ಪ ನೀರು ಕಡಿಮೆಯಾದಾಗ ಜೀವದ ಹಂಗು ತೊರೆದು ಈಜಾಡಿಕೊಂಡು ಮನೆಗೆ ಬಂದಿದ್ದಾರೆ. ಪುತ್ರ ಟೋಪಣ್ಣ ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾನೆ.

ಈ ಬಗ್ಗೆ ನ್ಯೂಸ್ 18 ಕನ್ನದ ಜೊತೆ ಕುರಿಗಾಯಿ ಟೋಪಣ್ಣ ಅವರ ಸಹೋದರ ಹೇಮಂತ ಮಾತನಾಡಿ, ಇದೇ ಭಾನುವಾರ ಐದು‌ ಜನ 230 ಕುರಿಗಳನ್ನು ತೆಗೆದುಕೊಂಡು ‌ಗಡ್ಡೆಗೆ ಹೋಗಿದ್ದೆವು. ಅದರಲ್ಲಿ ನಾಲ್ಕು ಜನ‌ ವಾಪಸ್ ಬಂದಿದ್ದೆವು. ನಮ್ಮ ತಂದೆ ಕೃಷ್ಣಾ ನದಿಯಲ್ಲಿ ‌ಈಜಿ ಮನೆಗೆ ಬಂದಿದ್ದಾರೆ. ಆದರೆ ಸಹೋದರ ಕುರಿಗಳೊಂದಿಗೆ ಅಲ್ಲೇ ಸಿಲುಕಿಕೊಂಡಿದ್ದಾನೆ ಎಂದು ಅಳಲು ತೋಡಿಕೊಂಡರು.

ಇದನ್ನು ಓದಿ: Kodagu Rains: ಕೊಡಗು ಪ್ರವಾಹ; ಬ್ರಹ್ಮಗಿರಿ ಬೆಟ್ಟದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಜ್ಜಾದ ಎನ್​ಡಿಆರ್​ಎಫ್​ ತಂಡ

ಮಾಹಿತಿ ಅರಿತು ಸ್ಥಳಕ್ಕೆ ಹುಣಸಗಿ ತಹಸೀಲ್ದಾರ್ ವಿನಯ್ ಕುಮಾರ್ ‌ಪಾಟೀಲ, ಕಂದಾಯ ನಿರೀಕ್ಷಕ ಬಸವರಾಜ, ಹಾಗೂ ‌ನಾರಾಯಣಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಮತ್ತೆ ಕೃಷ್ಣಾ ‌ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಿರುವ ಕಾರಣ ರಕ್ಷಣೆ ಮಾಡಲು ಕಷ್ಟವಾಗುತ್ತಿದೆ. ನಡುಗಡ್ಡೆಯಲ್ಲಿ ಸಿಲುಕಿರುವ ವ್ಯಕ್ತಿಯನ್ನು ಸುರಕ್ಷಿತವಾಗಿ ಕರೆತರಲು ಸಿದ್ದತೆ ನಡೆಸುತ್ತಿದ್ದಾರೆ.
Published by:HR Ramesh
First published: