ಲಾಕ್​ಡೌನ್​ ವೇಳೆ ತಾಯಿ ಸಂತೋಷಕ್ಕಾಗಿ ಮಾಡಿದ ಕೆಲಸವೇ ಅನ್ನದ ದಾರಿಯಾಯ್ತು!

ಈಗಾಗಲೇ ಬೆಂಗಳೂರು, ಮೈಸೂರು, ಚಿತ್ರದುರ್ಗದಿಂದಲೂ ಆರ್ಡರ್ ಬರುತ್ತಿದ್ದು, ಸಾರಿಗೆ ಸಮಸ್ಯೆಯಿಂದ ಸದ್ಯಕ್ಕೆ ಡೆಲಿವರಿ ಮಾಡಲಾಗುತ್ತಿಲ್ಲ. ಜೂನ್ 1 ರಿಂದ ನೋಡಬೇಕು ಎನ್ನುವ ಯಲ್ಲಪ್ಪ, ಗಾಜಿನ ಕೇರಂಬೋರ್ಡ್ ತಯಾರಿಸಿ ಗಮನ ಸೆಳೆದಿದ್ದಾರೆ. ಜೊತೆಗೆ ಟೈಲ್ಸ್ ಕೇರಂಬೋರ್ಡ್ ತಯಾರಿಸುವ ಇಂಗಿತವಿದ್ದು ಅದರ ಸಾಧಕ-ಬಾಧಕಗಳ ಕುರಿತು ಯೋಚಿಸುತ್ತಿದ್ದಾರೆ.

ತಾವೇ ತಯಾರಿಸಿದ ಕೇರಂಬೋರ್ಡ್​ನಲ್ಲಿ ಆಟವಾಡುತ್ತಿರುವ ತಾಯಿ-ಮಗ.

ತಾವೇ ತಯಾರಿಸಿದ ಕೇರಂಬೋರ್ಡ್​ನಲ್ಲಿ ಆಟವಾಡುತ್ತಿರುವ ತಾಯಿ-ಮಗ.

  • Share this:
ಕೊಪ್ಪಳ: ಕೊರೋನಾ ಮಹಾಮಾರಿಯಿಂದ ಇದ್ದ ಕೆಲಸವನ್ನು ಕಳೆದುಕೊಂಡವರ ಬಗ್ಗೆ, ಸರಕಾರ ಅವರಿಗೆ ಸಹಾಯಹಸ್ತ ಚಾಚಿರುವ ಬಗ್ಗೆ ಮಾಹಿತಿ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಕೊರೋನಾದಿಂದಾಗಿ ಸರಕಾರ ಜಾರಿ ಮಾಡಿದ ಲಾಕ್‌ಡೌನ್ ಹೊಸ ಬದುಕಿಗೆ ದಾರಿ ಮಾಡಿ ಕೊಟ್ಟ ಕಥೆ ಇಲ್ಲಿದೆ.

ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಯಲ್ಲಪ್ಪ‌ ಬಡಿಗೇರ, ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು‌ ಕಳೆದುಕೊಂಡು, ತಾಯಿ ಆಶ್ರಯದಲ್ಲಿ ಬೆಳೆದಾತ. ಹತ್ತನೇ ತರಗತಿ ಓದಿ, ಓದನ್ನು ಅಲ್ಲಿಗೆ ನಿಲ್ಲಿಸಿದ್ದರು. ಇತ್ತೀಚೆಗಷ್ಟೇ ಕುಲ ಕಸುಬು ಬಡಿಗ ವೃತ್ತಿಯನ್ನೇ ಕಲಿತಿದ್ದರು. ಅಂದಿನ ದುಡಿಮೆ, ಆ ದಿನದ ಬದುಕಿಗೆ ಸಾಕಾಗುತ್ತಿತ್ತಷ್ಟೇ. ಅಷ್ಟೊತ್ತಿಗೆ ಕೊರೋನಾ ಎಂಟ್ರಿಯಿಂದ ಒಪ್ಪತ್ತಿನ ಊಟಕ್ಕೂ ಕಲ್ಲೇಟು ಬಿದ್ದಂತಾಯಿತು.

ಲಾಕ್​ಡೌನ್​ ವೇಳೆ ಯಲ್ಲಪ್ಪನ ತಾಯಿ ಬೇಸರ ಕಳೆಯುವುದಕ್ಕಾಗಿ ಪಕ್ಕದ ಮನೆಯಿಂದ ಕೇರಂ‌ ಬೋರ್ಡ್ ತಂದು ಒಂದೆರಡು ದಿನ ಆಟವಾಡುತ್ತಾರೆ. ಆನಂತರ ಆ ಮನೆಯವರು ತಮ್ಮ ಕೇರಂ ಬೋರ್ಡ್ ವಾಪಸ್ ಒಯ್ಯುತ್ತಾರೆ. ಇದರಿಂದ ಯಲ್ಲಪ್ಪನ ಅಮ್ಮ ತಾಯವ್ವಳ ಮುಖ ಸಪ್ಪಗಾಗುತ್ತದೆ. ತಾಯಿ ಸಪ್ಪಗಾಗಿರುವುದನ್ನು ಕಂಡ ಮಗ ಆ ಸಮಯದಲ್ಲಿ ಭಾಗ್ಯನಗರ, ಕೊಪ್ಪಳದ ತುಂಬೆಲ್ಲ ಕೇರಂ ಬೋರ್ಡ್ ಖರೀದಿಸಲು ಸಿಕ್ಕ ಸಿಕ್ಕವರನ್ನ ಕೇಳಿದರೂ ಕೇರಂ ಬೋರ್ಡ್ ಮಾತ್ರ ಸಿಗಲಿಲ್ಲ.

ಆಗ ತಾನೇ ಯಾಕೆ ಕೇರಂ ಬೋರ್ಡ್ ಸಿದ್ಧ ಮಾಡಬಾರದು ಎಂದು ಯೋಚಿಸಿ ಡ್ರಾಯಿಂಗ್ ಶೀಟ್‌ನಲ್ಲಿ ಕೇರಂ ಚಿತ್ರ ಬಿಡಿಸಲು ಶುರು ಮಾಡುತ್ತಾರೆ. ಎರಡು ದಿನಗಳವರೆಗೆ ಕಷ್ಟ ಪಟ್ಟರೂ ಇಷ್ಟದ ಪ್ರಕಾರ ಕೇರಂ ಸ್ಕೆಚ್ ರೆಡಿಯಾಗಲಿಲ್ಲ. ಕೊನೆಗೆ ಯಲ್ಲಪ್ಪನ ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಕೇರಂ ಬೋರ್ಡ್ ಸಿದ್ಧ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಾರೆ.

ಅಂದು ಸಂಜೆ 5 ಗಂಟೆಗೆ ಕಟ್ಟಿಗೆಯಿಂದ ಕೇರಂ‌ಬೋರ್ಡ್ ಸಿದ್ಧ ಮಾಡಲು ಅಣಿಯಾದ ಯಲ್ಲಪ್ಪ ರಾತ್ರಿ 12ರವರೆಗೆ ಛಲ ಬಿಡದೇ ಕೆಲಸ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಯಾವ ಕೇರಂ‌ಬೋರ್ಡ್‌ಗೂ ಕಡಿಮೆ ಇಲ್ಲ ಎನ್ನುವಂಥ ಕೇರಂಬೋರ್ಡ್ ಸಿದ್ದಪಡಿಸುತ್ತಾರೆ.‌ ಮರುದಿನ ತಾಯಿ-ಮಗ ಕೇರಂ ಆಡುತ್ತಾರೆ. ಈ ವಿಷಯ ಸ್ನೇಹಿತರ ಮೂಲಕ ಪರಿಚಿತರಿಗೆ ಗೊತ್ತಾಗಿ ಎಲ್ಲರೂ ತಮಗೊಂದು ಕೇರಂ‌ಬೋರ್ಡ್ ಮಾಡಿಕೊಡುವಂತೆ ದುಂಬಾಲು ಬೀಳುತ್ತಾರೆ. ಮಾತ್ರವಲ್ಲ ಕಾರಟಗಿ, ಕನಕಗಿರಿ ಭಾಗದಿಂದಲೂ ಬೇಡಿಕೆ ಬರುತ್ತದೆ. ಇದೀಗ ಯಲ್ಲಪ್ಪ ಅವರು ಕೇರಂಬೋರ್ಡ್ ತಯಾರಿಸುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ.

ಬೇರೆ ಕಡೆ ಸಿಗುವ ಕೇರಂಬೋರ್ಡ್‌ಗಳಿಗೂ, ಯಲ್ಲಪ್ಪ ತಯಾರಿಸುವ ಕೇರಂಬೋರ್ಡ್‌ಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ರೆಡಿಮೇಡ್ ಕೇರಂಬೋರ್ಡ್‌ಗೆ ಬಳಸುವ ಕಟ್ಟಿಗೆ ಗುಣಮಟ್ಟದ್ದಾಗಿರಲ್ಲ. ಜೊತೆಗೆ ಪೇಂಟ್ ಕೂಡ ಬೇಗನೇ ಮಾಸಿ ಹೋಗಿತ್ತದೆ. ಜೊತೆಗೆ ಬೋರ್ಡ್ ಮೇಲೆ ನೀರು ಬಿದ್ದರೆ ಕೇರಂ ಆಡಲು ಕಷ್ಟಸಾಧ್ಯ. ಆದರೆ ಯಲ್ಲಪ್ಪ ತಯಾರಿಸುವ ಕೇರಂಬೋರ್ಡ್ ಈ ಎಲ್ಲ ನ್ಯೂನ್ಯತೆಗಳನ್ನು‌ ಮೀರಿದ್ದು ಎಂಬುದು ವಿಶೇಷ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಕೇರಂಬೋರ್ಡ್ ದರಕ್ಕೆ ಹೋಲಿಸಿದರೆ ಯಲ್ಲಪ್ಪ ತಯಾರಿಸುವ ಕೇರಂಬೋರ್ಡ್ ಕೊಂಚ ದುಬಾರಿಯಾದರೂ ಗುಣಮಟ್ಟದಲ್ಲಿ ರಾಜೀ ಇಲ್ಲ.

ಈಗಾಗಲೇ ಬೆಂಗಳೂರು, ಮೈಸೂರು, ಚಿತ್ರದುರ್ಗದಿಂದಲೂ ಆರ್ಡರ್ ಬರುತ್ತಿದ್ದು, ಸಾರಿಗೆ ಸಮಸ್ಯೆಯಿಂದ ಸದ್ಯಕ್ಕೆ ಡೆಲಿವರಿ ಮಾಡಲಾಗುತ್ತಿಲ್ಲ. ಜೂನ್ 1 ರಿಂದ ನೋಡಬೇಕು ಎನ್ನುವ ಯಲ್ಲಪ್ಪ, ಗಾಜಿನ ಕೇರಂಬೋರ್ಡ್ ತಯಾರಿಸಿ ಗಮನ ಸೆಳೆದಿದ್ದಾರೆ. ಜೊತೆಗೆ ಟೈಲ್ಸ್ ಕೇರಂಬೋರ್ಡ್ ತಯಾರಿಸುವ ಇಂಗಿತವಿದ್ದು ಅದರ ಸಾಧಕ-ಬಾಧಕಗಳ ಕುರಿತು ಯೋಚಿಸುತ್ತಿದ್ದಾರೆ.

ನಮಗೆ ಕುಲಕಸುಬು ಇದ್ದೇ ಇದೆ. ಆದರೆ ನನಗೆ ಬೇಸರವಾಗಿದ್ದಕ್ಕೆ ಛಲ ಬಿಡದೇ ಕೇರಂಬೋರ್ಡ್ ತಯಾರಿಸುವುದನ್ನು ಕಲಿತ ಮಗನ ಬಗ್ಗೆ ಹೆಮ್ಮೆ ಇದೆ. ಲಾಕ್‌ಡೌನ್ ಯಾರ್ಯಾರಿಗೆ ಏನೇನು ಪಾಠ ಕಲಿಸಿದೆಯೋ ಗೊತ್ತಿಲ್ಲ. ನಮಗಂತೂ ಹೊಸ ಕೆಲಸದ ಮೂಲಕ ಅನ್ನಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುತ್ತಾರೆ ಯಲ್ಲಪ್ಪ ಅವರ ತಾಯಿ ತಾಯವ್ವ.

ಇದನ್ನು ಓದಿ: ಹೈಕಮಾಂಡ್‌ ಸೂಚಿಸಿದರೆ ಈಗಲೂ 5 ಜನ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಲು ಸಿದ್ದ: ರಮೇಶ್ ಜಾರಕಿಹೊಳಿ

ಮನೆಯಲ್ಲಿ ನಾನು, ಅಮ್ಮ ಇಬ್ಬರೇ. ಅಪ್ಪ, ಅಣ್ಣ-ತಮ್ಮ, ಅಕ್ಕ-ತಂಗಿ ಯಾರೂ ಇಲ್ಲ. ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಖಾಲಿ ಕುಳಿತು ಬೇಸರವಾದಾಗ ಪಕ್ಕದ ಮನೆಯವರು ಕೇರಂಬೋರ್ಡ್ ಕೊಟ್ಟು ಎರಡು ದಿನಗಳ ಮತ್ತೇ ವಾಪಸ್ ಒಯ್ದದ್ದು ನಮಗೆ ಹೊಸ ಬದುಕು ಕಟ್ಟಿ ಕೊಟ್ಟಿದೆ. ತಾಯಿ ಬೇಸರ ಕಳೆಯಲೆಂದು ಕಲಿತ ಕೆಲಸ ಕೈ ಹಿಡಿದಿದೆ. ಲಾಕ್‌ಡೌನ್ ಸಮಯದಲ್ಲಿ ಒಂದೆರಡು ದಿನ ಬಿಟ್ಟರೆ ಇನ್ನುಳಿದ ಎಲ್ಲ ದಿನವೂ ನಾನು ಕೆಲಸ ಮಾಡುತ್ತಿದ್ದೆ ಎಂದು ಹೇಳುತ್ತಾರೆ ಯಲ್ಲಪ್ಪ.
First published: