ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿರುವ ಪ್ರಸಿದ್ದ ಕೆಆರ್ಎಸ್ ಡ್ಯಾಂ ಗೆ ಆಗಂತುಕರ ಆತಂಕದ ಹಿನ್ನೆಲೆಯಲ್ಲಿ ಸಾಕಷ್ಟು ಭದ್ರತೆಯನ್ನು ಸರ್ಕಾರ ಒದಗಿಸಿದೆ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಭದ್ರತೆಗೆಂದು ಕೈಗಾರಿಕಾ ಭದ್ರತಾ ಪಡೆಯನ್ನು ಕೂಡ ಡ್ಯಾಂ ಗೆ ನಿಯೋಜಿಸಿದೆ. ಇಂತಹ ಭದ್ರತೆಯ ನಡುವೆ ಕೂಡ ಯುವಕನೋರ್ವ ತನ್ನ ಪ್ರಭಾವ ಬಳಸಿ ಡ್ಯಾಂ ಮೇಲೆ ಪೊಲೀಸ್ ಜೀಪ್ ಓಡಿಸಿದ ವಿಡಿಯೋವೊಂದು ವೈರಲ್ ಆಗಿದ್ದು ಡ್ಯಾಂ ನ ಸುರಕ್ಷತೆಯನ್ನು ಪ್ರಶ್ನಿಸುವಂತಾಗಿದೆ. ವಿಪರ್ಯಾಸ ಅಂದರೆ ಆ ಜೀಪ್ ಓಡಿಸುತ್ತಿರುವ ವಿಡಿಯೋವನ್ನು ಸ್ವತಃ ಪೊಲೀಸ್ ಅಧಿಕಾರಿಯೋರ್ವ ಜೀಪ್ ನಲ್ಲಿ ಕುಳಿತು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಹೌದು! ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಡ್ಯಾಂ ಮೇಲೆ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶವನ್ನುನಿರ್ಬಂಧಿಸಲಾಗಿದೆ. ಅಲ್ಲದೇ ಪೊಲೀಸ್ ಭದ್ರತೆಯ ಜೊತೆಗೆ ಕೈಗಾರಿಕಾ ಪೊಲೀಸ್ ಪಡೆಯ ಭದ್ರತೆಯನ್ನು ಕೂಡ ಒದಗಿಸಲಾಗಿದೆ. ಇಂತಹ ಭದ್ರತೆಯ ನಡುವೆ ಕೂಡ ಅಪರಿಚಿತ ವ್ಯಕ್ತಿಯೋರ್ವ ಪೊಲೀಸ್ ಜೀಪ್ ನಲ್ಲಿ ಕುಳಿತು ಡ್ಯಾಂ ಮೇಲೆ ಈ ಜೀಪ್ ನ್ನು ಚಾಲನೆ ಮಾಡಿದ್ದಾನೆ. ಈತ ಜೀಪ್ ಚಾಲನೆ ಮಾಡುತ್ತಿರುವುದನ್ನು ಜೀಪ್ ನಲ್ಲಿ ಕುಳಿತ ಪೊಲೀಸ್ ಅಧಿಕಾರಿ ವಿಡಿಯೋಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕರ ಪ್ರವೇಶಕ್ಕೆನಿರ್ಬಂಧವಿದ್ದರೂ ಪೊಲೀಸರು ಮಾತ್ರ ತಮ್ಮ ಸಂಬಂಧಿಕರು, ಮತ್ತು ಸ್ನೇಹಿತರನ್ನು ತೆರೆಮರೆಯಲ್ಲಿ ಡ್ಯಾಂ ಮೇಲೆ ಕರೆದೊಯ್ಯುತ್ತಾರೆ ಅನ್ನೋ ಆರೋಪ ಆಗಾಗೆ ಕೇಳಿ ಬರುತ್ತಿತ್ತು. ಇದೀಗ ಈ ಆರೋಪಗಳಿಗೆ ಸಾಕ್ಷಿಯಾಗಿ ಈ ವಿಡಿಯೋ ವೈರಲ್ ಆಗಿದ್ದು, ಅಪರಿಚಿತ ವ್ಯಕ್ತಿ ಡ್ಯಾಂ ಮೇಲೆ ಸರ್ಕಾರಿ ಪೊಲೀಸ್ ಜೀಪ್ ಚಲಾಯಿಸಿರೋದು ಭದ್ರತೆಯ ಬಗ್ಗೆ ಚಕಾರ ಎತ್ತುವಂತಾಗಿದೆ.
ಇದನ್ನು ಓದಿ: ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ಮಾ.27ರಂದು ಕರ್ನಾಟಕ ಬಂದ್; ವಾಟಾಳ್ ನಾಗರಾಜ್
ಇನ್ನು ಈ ವಿಡಿಯೋ ವೈರಲ್ ಆಗಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಪ್ರಕರಣದಲ್ಲಿ ಭಾಗಿಯಾದ ಯುವಕನ ಪತ್ತೆ ಕಾರ್ಯದಲ್ಲಿ ಕೆ.ಆರ್.ಎಸ್. ಪೊಲೀಸರು ತನಿಖೆಗೆ ಮುಂದಾಗಿದ್ದು, ಪ್ರಕರಣದಲ್ಲಿ ಪೊಲೀಸ್ ಜೀಪ್ ಕೊಟ್ಟು ವಿಡಿಯೋ ಮಾಡಿದ ಪೊಲೀಸ್ ಅಧಿಕಾರಿಯ ವಿರುದ್ದ ಪೊಲೀಸ್ ಇಲಾಖೆ ಕ್ರಮ ಜರುಗಿಸಲು ಮುಂದಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಪೊಲೀಸ್ ಜೀಪ್ ಚಾಲನೆ ಮಾಡಿ ಆ ವಿಡಿಯೋವನ್ನು ಆ ಯುವಕ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ.ಈ ಘಟನೆ ನಡೆದು ಒಂದು ತಿಂಗಳಾದ್ದು, ಇದೀಗ ಆ ವಿಡಿಯೋ ವೈರಲ್ ಆಗಿ ಪ್ರಕರಣ ಬೆಳಕಿಗೆ ಬಂದಿದೆ. ಇದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿ ಪೊಲೀಸರ ನಡೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ