ಆಸ್ಪತ್ರೆಗಳಿಗೆ ಸುತ್ತಿದರೂ ಚಿಕಿತ್ಸೆ ಸಿಗದೆ ವ್ಯಕ್ತಿ ಸಾವು; ಶವವನ್ನು ಡಿಸಿ ಕಚೇರಿಗೆ ತಂದ ಸಂಬಂಧಿಗಳು

ವಾಡಿ ಪಟ್ಟಣದ ಮಹಿಳೆ ವೆಂಟಿಲೇಟರ್ ಸಿಗದೆ ಸಾವನ್ನಪ್ಪಿದ್ದರು. ಕೋವಿಡ್ ವ್ಯಾಪಕವಾಗಿರುವ ಸಂದರ್ಭದಲ್ಲಿಯೇ ನಾನ್ ಕೋವಿಡ್ ರೋಗಿಗಳೂ ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನ್ ಕೋವಿಡ್ ರೋಗಿಗಳನ್ನೂ ದಾಖಲಿಸಿಕೊಳ್ಳಲು ಆಸ್ಪತ್ರೆಗಳು ಹಿಂದೇಟು ಹಾಕುತ್ತಿರುವುದರಿಂದ ಸಕಾಲಕ್ಕೆ ಚಿಕಿತ್ಸೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಲಬುರ್ಗಿ ಜಿಮ್ಸ್ ಆಸ್ಪತ್ರೆ

ಕಲಬುರ್ಗಿ ಜಿಮ್ಸ್ ಆಸ್ಪತ್ರೆ

  • Share this:
ಕಲಬುರ್ಗಿ; ನಾನ್ ಕೋವಿಡ್ ರೋಗಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತುವ ಮಾರ್ಗಮಧ್ಯದಲ್ಲಿಯೇ ಹೃದ್ರೋಗಿಯೊಬ್ಬರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಹಾರ್ಟ್ ಅಟ್ಯಾಕ್​ಗೆ ಒಳಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಮೃತಪಟ್ಟ ವ್ಯಕ್ತಿಯನ್ನು ಕಲಬುರ್ಗಿಯ ಯದುಲ್ಲಾ ಕಾಲೋನಿಯ ಅಯೂಬ್ ಪಟೇಲ್(38) ಎಂದು ಗುರುತಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆಯಲ್ಲಿ ಅಯೂಬ್ ಪಟೇಲನನ್ನು  ಜಯದೇವ ಆಸ್ಪತ್ರೆಗೆ ತರಲಾಗಿತ್ತು. ಕೋವಿಡ್ ವರದಿ ನೆಗೆಟಿವ್ ಎಂದು ಬಂದಿದೆ ಎಂದರೂ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಿಲ್ಲ ಎಂದು ಅಯೂಬ್ ಸಹೋದರ ಆರೋಪಿಸಿದ್ದಾರೆ.

ತಾವೇ ಸ್ಟ್ರೆಚರ್​ನಲ್ಲಿ ಕೊಂಡೊಯ್ದರೂ ಚಿಕಿತ್ಸೆ ನೀಡಲಿಲ್ಲ. ವೈದ್ಯರು ಚಿಕಿತ್ಸೆಗೆ ನಿರಾಕರಿಸಿದ್ದರಿಂದ ಬೇರೆ ಆಸ್ಪತ್ರೆಗೆ ಸುತ್ತುವಂತಾಯಿತು. ಬೇರೆ ಆಸ್ಪತ್ರೆಗಳಿಗೆ ಸುತ್ತುವ ವೇಳೆ ಮಾರ್ಗಮಧ್ಯದಲ್ಲಿಯೇ ತಮ್ಮ ಸಹೋದರ ಕೊನೆಯುಸಿರೆಳೆದಿದ್ದಾರೆ. ಕೂಡಲೇ ವೈದ್ಯರ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ.

ಜಯದೇವ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ ನಂತರ ಜಿಮ್ಸ್ ಗೆ ಕರೆದೊಯ್ದಿದ್ದ ಸಂಬಂಧಿಕರು ಅಲ್ಲಿಯೂ ದಾಖಲಾಗದಿದ್ದಾಗ ಬಸವೇಶ್ವರ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಎಲ್ಲ ಕಡೆವೂ ಬೆಡ್ ಫುಲ್ ಆಗಿವೆ. ಹೀಗಾಗಿ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಉತ್ತರ ಬಂದಿದೆ ಎನ್ನಲಾಗಿದೆ. ಹೀಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋಗುವುದರೊಳಗಾಗಿಯೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಮೃತನ ಕುಟುಂಬದ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳಿಕ ಮೃತದೇಹವನ್ನು ಜಿಲ್ಲಾಧಿಕಾರಿ ಕಚೇರಿಗೆ ಆಟೋದಲ್ಲಿ ತೆಗೆದುಕೊಂಡು ಬಂದ ಕುಟುಂಬ ಸದಸ್ಯರು, ಚಿಕಿತ್ಸೆಗೆ ನಿರಾಕರಿಸಿದ ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅರ್ಧ ತಾಸು ಜಿಲ್ಲಾಧಿಕಾರಿ ಕಚೇರಿಯ ಬಳಿಯೇ ಶವ ಇಟ್ಟುಕೊಂಡು ನಂತರ ಶವವನ್ನು ಮನೆಗೆ ಕೊಂಡೊಯ್ದಿದ್ದಾರೆ.

ಮೊನ್ನೆಯೂ ವಾಡಿ ಪಟ್ಟಣದ ಮಹಿಳೆ ವೆಂಟಿಲೇಟರ್ ಸಿಗದೆ ಸಾವನ್ನಪ್ಪಿದ್ದರು. ಕೋವಿಡ್ ವ್ಯಾಪಕವಾಗಿರುವ ಸಂದರ್ಭದಲ್ಲಿಯೇ ನಾನ್ ಕೋವಿಡ್ ರೋಗಿಗಳೂ ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನ್ ಕೋವಿಡ್ ರೋಗಿಗಳನ್ನೂ ದಾಖಲಿಸಿಕೊಳ್ಳಲು ಆಸ್ಪತ್ರೆಗಳು ಹಿಂದೇಟು ಹಾಕುತ್ತಿರುವುದರಿಂದ ಸಕಾಲಕ್ಕೆ ಚಿಕಿತ್ಸೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಲಬುರ್ಗಿಯಲ್ಲಿ ಒಂದೇ ದಿನ ಏಳು ಸೋಂಕಿತರು ಬಲಿ

ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸರಣಿ ಮುಂದುವರಿದಿದೆ. ಇಂದು ಮತ್ತೆ ಏಳು ಸೋಂಕಿತರ ಸಾನ್ನಪ್ಪಿದ್ದಾರೆ. ಈ ಪೈಕಿ ಐವರು ಪುರುಷರು ಹಾಗೂ ಇಬ್ಬರು ಮಹಿಳೆಯರಿದ್ದಾರೆ. 73 ವರ್ಷದ ಪುರುಷ, 60 ವರ್ಷದ ಮಹಿಳೆ, 55 ವರ್ಷದ ಪುರುಷ, 59 ವರ್ಷದ ಪುರುಷ, 68 ವರ್ಷದ ಪುರುಷ, 68 ವರ್ಷದ ಪುರುಷ ಹಾಗೂ 60 ವರ್ಷದ ಮಹಿಳೆ ಸಾವಿಗೀಡಾಗಿದ್ದಾರೆ. ಎಲ್ಲರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಇದನ್ನು ಓದಿ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಹೋರಾಟ; ಎಚ್.ಡಿ.ರೇವಣ್ಣ

ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 89ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ 220 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 5166  ಏರಿಕೆಯಾಗಿದೆ. ಇಂದು 124 ಜನ ಸೋಂಕಿತರು ಡಿಸ್ಚಾರ್ಜ್ ಆಗಿದ್ದು, ಡಿಸ್ಚಾರ್ಜ್ ಆದವರ ಸಂಖ್ಯೆ 2553 ಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಸದ್ಯ 2524 ಆ್ಯಕ್ಟಿವ್ ಕೇಸ್ ಗಳಿವೆ.
Published by:HR Ramesh
First published: