Covid Vaccine - ವಿಜಯಪುರದಲ್ಲಿ ಕೊರೋನಾ ಲಸಿಕೆ ವಿತರಣೆಗೆ ವ್ಯವಸ್ಥೆ ಹೇಗಿದೆ ಗೊತ್ತಾ?

ಸದ್ಯಕ್ಕೆ ವಿಜಯಪುರ ಜಿಲ್ಲೆಗೆ 9500 ಕೊರೋನಾ ಲಸಿಕೆ ಬಂದಿದ್ದು, 8 ಸ್ಥಳಗಳಲ್ಲಿ ಜ. 16 ರಂದು ಹಾಗೂ ಇನ್ನುಳಿದ ಕಡೆ ಇದೇ ಜ. 18 ರಂದು ಈ ಲಸಿಕೆ ನೀಡಲಾಗುತ್ತಿದೆ. ನಂತರ ಹಂತ ಹಂತವಾಗಿ ಇನ್ನುಳಿದ ಫಲಾನುಭವಿಗಳಿಗೆ ಸಹ ಲಸಿಕೆ ನೀಡಲು ಯೋಜಿಸಲಾಗಿದೆ.

ವಿಜಯಪುರದಲ್ಲಿ ಲಸಿಕೆ ವಿತರಣೆ

ವಿಜಯಪುರದಲ್ಲಿ ಲಸಿಕೆ ವಿತರಣೆ

  • News18
  • Last Updated :
  • Share this:
ವಿಜಯಪುರ: ಅಂತೂ ಇಂತೂ ಕೊರೋನಾ ಲಸಿಕೆ ಬಸವ ನಾಡು ತಲುಪಿದೆ. ಲಸಿಕೆಗಳನ್ನ ಹೊತ್ತು ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವಾಹನವನ್ನು ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಂದ್ರ ಕಾಪಸೆ, ಲಸಿಕೆ ವಿತರಣೆ ನೋಡಲ್ ಅಧಿಕಾರಿ ಡಾ. ಮಹೇಶ ನಾಗರಬೆಟ್ಟ ಮತ್ತು ಸಿಬ್ಬಂದಿ ನಿನ್ನೆ ಗುರುವಾರ ಬರಮಾಡಿಕೊಂಡರು. ಬುಧವಾರ ಪುಣೆಯಿಂದ ಬೆಳಗಾವಿಗೆ ಆಗಮಿಸಿದ ಈ ಲಸಿಕೆಗಳನ್ನು ನಂತರ ಬಾಗಲಕೋಟೆಗೆ ತರಲಾಗಿತ್ತು. ಬಾಗಲಕೋಟೆಯಿಂದ 2 ಬಾಕ್ಸ್ ಗಳಲ್ಲಿ 9500 ಲಸಿಕೆಗಳನ್ನು ವಿಜಯಪುರಕ್ಕೆ ತರಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 15,802 ಆರೋಗ್ಯ ಸಿಬ್ಬಂದಿ-ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ. ವಿಜಯಪುರ ಜಿಲ್ಲಾಸ್ಪತ್ರೆ, 4 ತಾಲೂಕಾಸ್ಪತ್ರೆ, ನಗರ ಪ್ರಾಥಮಿಕ ಕೇಂದ್ರ, ಬಿ ಎಲ್ ಡಿ‌ ಇ ಆಸ್ಪತ್ರೆ, ಮನಗೂಳಿ ಆರೋಗ್ಯ ಕೇಂದ್ರದಲ್ಲಿ ಜ. 16 ರಂದು ಲಸಿಕೆ ನೀಡುವ ಕಾರ್ಯ ನಡೆಯಲಿದೆ. ಸದ್ಯಕ್ಕೆ ವಿಜಯಪುರ ಜಿಲ್ಲೆಗೆ 9500 ಲಸಿಕೆ ಬಂದಿದ್ದು, 8 ಸ್ಥಳಗಳಲ್ಲಿ ಜ. 16 ಹಾಗೂ ಇನ್ನುಳಿದ ಕಡೆ ಇದೇ ಜ. 18 ರಂದು ಈ ಲಸಿಕೆ ನೀಡಲಾಗುತ್ತಿದೆ. ನಂತರ ಹಂತ ಹಂತವಾಗಿ ಇನ್ನುಳಿದ ಫಲಾನುಭವಿಗಳಿಗೆ ಸಹ ಲಸಿಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೊಡಗಿಗೆ ಬಂದು ತಲುಪಿದ 4 ಸಾವಿರ ಡೋಸ್ ಕೋವಿಡ್ ವ್ಯಾಕ್ಸಿನ್; ಶನಿವಾರದಿಂದ ಲಸಿಕೆ ವಿತರಣೆ

ಬಸವನಬಾಗೇವಾಡಿಯಲ್ಲಿ 1370, ವಿಜಯಪುರ ತಾಲೂಕಿನಲ್ಲಿ 10487, ಇಂಡಿ ತಾಲೂಕಿನಲ್ಲಿ 928, ಮುದ್ದೇಬಿಹಾಳ ತಾಲೂಕಿನಲ್ಲಿ 1553, ಸಿಂದಗಿ ತಾಲೂಕಿನಲ್ಲಿ 1482 ಹೀಗೆ ಒಟ್ಟು 15820 ಫಲಾನುಭವಿಗಳಿದ್ದಾರೆ.ಒಟ್ಟು 80  ಕೋಲ್ಡ್ ಚೈನ್ ಸ್ಥಳಗಳು ಮತ್ರು ಕೇಂದ್ರಗಳಿವೆ.  ವಿಜಯಪುರ ನಗರದ ಬಿಎಲ್‌ಡಿಇಎ ಬಿ.ಎಂ ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ 100, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ 100, ಮನಗೂಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 69 ಬಸವನ ಬಾಗೇವಾಡಿ ತಾಲೂಕಾಸ್ಪತ್ರೆಯಲ್ಲಿ 100, ಇಂಡಿಯಲ್ಲಿ 70 ಮುದ್ದೇಬಿಹಾಳದಲ್ಲಿ 100, ಸಿಂದಗಿಯಲ್ಲಿ 92 ಯುಪಿಎಚ್‌ಸಿ ದರ್ಗಾದಲ್ಲಿ 71 ಹೀಗೆ ಒಟ್ಟು 701 ಪೋರ್ಟಲ್‌ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಪ್ರಥಮ ಹಂತದಲ್ಲಿ ಜ.16 ರಂದು ಕೋವಿನ್ ಆ್ಯಪ್​ನಲ್ಲಿ ನೊಂದಣಿಯಾದ ಸರಕಾರಿ ಹಾಗೂ ಖಾಸಗಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ವ್ಯಾಕ್ಸಿನೇಶನ್ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. ಪ್ರತಿಯೊಂದು ಲಸಿಕಾ ಕೇಂದ್ರಗಳಲ್ಲಿ 5 ಅಧಿಕಾರಿಗಳನ್ನು ಒಳಗೊಂಡ 20 ಜನರ ತಂಡಕ್ಕೆ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಪ್ರತಿಯೊಂದು ಲಸಿಕಾ ಕೇಂದ್ರಗಳಲ್ಲಿ ಇದಕ್ಕಾಗಿ 3 ಕೊಠಡಿಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಲಸಿಕೆಯನ್ನು ಪಡೆಯುವ ಫಲಾನುಭವಿಗಳಿಗೆ ಎಸ್‌ಎಮ್‌ಎಸ್ ಮೂಲಕ ಮುಂಚಿತವಾಗಿ ತಿಳಿಸಲಾಗಿದೆ. ಎಲ್ಲಾ ಫಲಾನುಭವಿಗಳು ಕೋವಿಡ್ -19 ಲಸಿಕೆ ಪಡೆದು ಸರಕಾರದ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕು‌ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಕೋರಿದ್ದಾರೆ.

ಇದನ್ನೂ ಓದಿ: ಬ್ಯಾಟರಿ ಚಾಲಿತ ಸೈಕಲ್ ಆವಿಷ್ಕರಿಸಿದ ಕಾರವಾರ ವಿದ್ಯಾರ್ಥಿಗಳು; ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ಅದೇ ರೀತಿ ವ್ಯಾಕ್ಸಿನ್ ನೀಡುವ ಕಾರ್ಯದಲ್ಲಿ ನಿಯೋಜಿಸಲಾಗಿರುವ ವ್ಯಾಕ್ಸಿನೇಶನ್ ಅಧಿಕಾರಿಗಳು ತಪ್ಪದೇ ತಮಗೆ ವಹಿಸಿದ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಬೇಕು.  ಇದಕ್ಕೆ ತಪ್ಪಿದ್ದಲ್ಲಿ ಅಂತವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ 1897 ರನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪಿ. ಸುನೀಲ ಕುಮಾರ ತಿಳಿಸಿದ್ದಾರೆ.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: