ಮಳೆಯಿಂದಾಗಿ ಸತತ ಎರಡನೇ ವರ್ಷವೂ ಕಾಫಿ ಫಸಲು ಕಳೆದುಕೊಂಡು ಬೆಳೆಗಾರ ಕಂಗಾಲು; ಪರಿಹಾರಕ್ಕೆ ಮೊರೆ

ಅತಿವೃಷ್ಠಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು ಬೆಳೆಗಾರ ಮುಂದೇನು ಎಂದು ಯೋಚಿಸುವಂತಾಗಿದೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್. ಪುರ ಸೇರಿದಂತೆ ಮಲೆನಾಡ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ಫಸಲು ಮಣ್ಣು ಪಾಲಾಗಿದೆ.

ಮಳೆಗೆ ಉದುರಿಬಿದ್ದಿರುವ ಕಾಫಿ ಬೀಜಗಳು.

ಮಳೆಗೆ ಉದುರಿಬಿದ್ದಿರುವ ಕಾಫಿ ಬೀಜಗಳು.

  • Share this:
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸ್ವತಃ ಕಾಫಿ ಬೆಳೆಗಾರ ಕಂಗಾಲಾಗಿದ್ದಾನೆ. ಕಾಫಿಯನ್ನೆ ನೆಚ್ಚಿಕೊಂಡು ಬದುಕು ದೂಡುತ್ತಿದ್ದ ಸಾವಿರಾರು ಸಣ್ಣಪುಟ್ಟ ರೈತರು ಇದೀಗ ಸಾಕಪ್ಪ ಸಾಕು, ಮಳೆ ಸಾವಾಸ ಸಾಕು ಅನ್ನೋ ಹಾಗಾಗಿದೆ. ಅಷ್ಟರ ಮಟ್ಟಿಗೆ ಕಾಫಿನಾಡಿನ ರೈತರಿಗೆ ಮಳೆ ಮೇಲೆ ಬೇಸರ ಬಂದೊಗಿದೆ. ಒಂದು ತಿಂಗಳ ಹಿಂದೆ ಮಳೆಗಾಗಿ ಆಕಾಶ ನೋಡುತ್ತಿದ್ದ ಮಲೆನಾಡಿಗರು, ಇದೀಗ ಮಳೆ ಸಂಪೂರ್ಣ ನಿಂತ್ರೆ ಸಾಕಪ್ಪ ಅನ್ನೋ ಹಾಗಾಗಿದೆ.

ಚಿಕ್ಕಮಗಳೂರಿನ ಕಾಫಿ ಎಸ್ಟೇಟ್‌ಗಳು ಈಗಲೂ ನೋಡೋಕೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಲೇ ಇದೆ. ಕಣ್ಣು ಹಾಯಿಸಿದ ಕಡೆಯೆಲ್ಲಾ ಹಸಿರೇ ಹಸಿರು. ಆದರೆ, ಹತ್ತಿರಕ್ಕೆ ಬಂದು ನೋಡಿದರೆ ಗಿಡದಲ್ಲಿ ಇರಬೇಕಾಗಿದ್ದ ಕಾಫಿ ಫಸಲು ಮಾತ್ರ ಧರೆಗೆ ಉರುಳಿದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನೋ ಹಾಗಾಗಿದೆ ಮಲೆನಾಡಿನ ಕಾಫಿ ಬೆಳೆದ ರೈತರ ದುಸ್ಥಿತಿ.

ಅಂದಹಾಗೆ ಅತಿವೃಷ್ಠಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು ಬೆಳೆಗಾರ ಮುಂದೇನು ಎಂದು ಯೋಚಿಸುವಂತಾಗಿದೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್. ಪುರ ಸೇರಿದಂತೆ ಮಲೆನಾಡ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ಫಸಲು ಮಣ್ಣು ಪಾಲಾಗಿದೆ.

ಕಳೆದ ವಾರ ಒಂದು ವಾರ ಸತತವಾಗಿ ಸುರಿದ ಮಳೆಗೆ ಕಾಫಿ ಬೆಳೆ ಹೇಳ ಹೆಸರಿಲ್ಲದಂತಾಗಿದೆ. ಮಳೆ ಜೊತೆಗೆ ಬಿರುಗಾಳಿಗೆ ಕಾಫಿ ಫಸಲು ಗಿಡದಿಂದ ಸಂಪೂರ್ಣ ಉದುರಿ ಬಿದ್ದಿದೆ. ಹೇಗೋ ಕಾಫಿ ಫಸಲು ಉಳಿದ್ರೆ ಜೀವನ ಕಟ್ಟಿಕೊಳ್ಳಬಹದು ಎಂದುಕೊಂಡಿದ್ದ ಮಲೆನಾಡ ರೈತರು ಇದೀಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ದಾರದಹಳ್ಳಿ, ಭೈರಾಪುರ, ಗೌಡಳ್ಳಿ, ದಾರದಹಳ್ಳಿ, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗಿದ್ದು ಕಾಫಿ ಬೆಳೆಯನ್ನ ಕಳೆದುಕೊಂಡು ರೈತರು ಕಣ್ಣೀರಿಡುವಂತಾಗಿದೆ.

ಇದನ್ನೂ ಓದಿ : ಸಚಿವ ಸಿ.ಟಿ. ರವಿ ವಿರುದ್ಧ ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತರ ವಿನೂತನ ಪ್ರತಿಭಟನೆ; ಹೇಗೆ ಗೊತ್ತಾ?

ಇದು ಸತತ ಎರಡನೇ ವರ್ಷ ಮಲೆನಾಡಿನ ರೈತರು ಈ ಪ್ರಮಾಣದಲ್ಲಿ ಕಾಫಿ ಬೆಳೆಯನ್ನ ಕಳೆದುಕೊಳ್ಳುತ್ತಿರುವುದು. ಕಳೆದ ವರ್ಷವೂ ಕೂಡ ಮಹಾಮಳೆಯಿಂದ ಈ ಮಲೆನಾಡ ರೈತರು ಕಾಫಿ ಫಸಲನ್ನ ಕಳೆದುಕೊಂಡು ನೋವನ್ನ ಅನುಭವಿಸಿದ್ದರು. ಈ ಬಾರಿಯಾದರೂ ಮಳೆರಾಯ ನಮ್ಮ ಮೇಲೆ ಕೃಪೆ ತೋರಬಹುದು ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ, ಈ ಬಾರಿಯೂ ಭಾರೀ ಮಳೆಯ ಜೊತೆಗೆ ಬಿರುಗಾಳಿ ಆರ್ಭಟಕ್ಕೆ ಕಾಫಿ ಫಸಲು ಬರ್ಬತ್ತಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಫಿ ಬೆಳೆಗಾರರ ನೆರವಿಗೆ ಬರಬೇಕು ಎಂದು ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.

ಸಾಮಾನ್ಯವಾಗಿ ಒಂದು ಎಕರೆ ಕಾಫಿ ತೋಟವನ್ನು ನಿರ್ವಹಿಸಲು ವರ್ಷಕ್ಕೆ 1 ಲಕ್ಷ ಹಣ ಬೇಕು. ಆದರೆ ಇದೀಗ ಸತತ ಎರಡನೇ ವರ್ಷವೂ ಕಾಫಿ ಬೆಳೆಗಾರರಿಗೆ ಕಾಫಿ ಫಸಲು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ರೈತರಿಗೆ ಸೂಕ್ತ ಪರಿಹಾರ ಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಅದೇನೆ ಆಗಲಿ, ಕಾಫಿನಾಡಿನ ಕಾಫಿ ಬೆಳೆದ ರೈತನ ಪರಿಸ್ಥಿತಿಯಂತೂ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಅನ್ನೋ ಹಾಗೆ ಆಗಿರೋದಂತೂ ಸತ್ಯ.
Published by:MAshok Kumar
First published: