ಕಲಬುರ್ಗಿ(ಅಕ್ಟೋಬರ್. 14): ಬಯಲು ನಾಡು ಕಲಬುರ್ಗಿಯಲ್ಲಿ ಕುಂಭದ್ರೋಣ ಮಳೆಯಾಗಿದೆ. ಮಹಾ ಮಳೆಗೆ ಕಲಬುರ್ಗಿ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದೆ. ಕಲಬುರ್ಗಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿ ಆಸ್ಪತ್ರೆಗೆ ಹೋಗಲಾರದ ಸ್ಥಿತಿಯಲ್ಲಿದ್ದ ಮಹಿಳೆಗೆ ಅಜ್ಜಿಯೊಬ್ಬರು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಘಟನೆ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ. ಇದೇ ವೇಳೆ ಮುಲ್ಲಾಮಾರಿ ಪ್ರವಾಹದಿಂದಾಗಿ ಚಿಂಚೋಳಿಯ ಹನುಮಾನ ನಗರದಲ್ಲಿ ಮನೆಯಲ್ಲಿ ಸಿಲುಕಿಕೊಂಡಿದ್ದ 22 ಜನರನ್ನು ಪೊಲೀಸರು ರಕ್ಷಿಸಿದ್ದಾರೆ. ಮಹಾಮಳೆಯ ಪ್ರವಾಹದ ಸಂದರ್ಭದಲ್ಲಿ ಮಹಿಳೆಯೋರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ನಾಗಿದಲಾಯಿ ಗ್ರಾಮದಲ್ಲಿ ನಡೆದಿದೆ. ಪ್ರವಾಹದಿಂದಾಗಿ ನಾಗ ಇದಲಾಯಿ ಗ್ರಾಮವೇ ಜಲಾವೃತವಾಗಿತ್ತು. ಇದೇ ಗ್ರಾಮದ ಗರ್ಭಿಣಿ ಗೀತಾ ಹೆರಿಗೆ ನೋವಿನ ಹಿನ್ನೆಲೆಯಲ್ಲಿ ಸುರಕ್ಷಿತ ದೃಷ್ಟಿಯಿಂದ ಗ್ರಾಮದ ಸರ್ಕಾರಿ ಶಾಲೆ ಕಟ್ಟಡದಲ್ಲಿ ರಕ್ಷಣೆ ಪಡೆದಿದ್ದಳು.
ಈ ವೇಳೆ ಹೆರಿಗೆ ನೋವು ತೀವ್ರಗೊಂಡಾಗ ಶಾಲಾ ಕಟ್ಟದಲ್ಲೆ ಸಹಜ ಹೆರಿಗೆ ಮಾಡಿಸಲಾಗಿದೆ. ಗ್ರಾಮದ ಅಜ್ಜಿ ನಾಗಮ್ಮ ಸಹಜ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ನಂತರ ಮಹಿಳೆ ಸಾಲೇಬಿರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ತಾಯಿ ಮಗು ಸುರಕ್ಷಿತವಾಗಿದ್ದು, ಮಹಿಳೆಯ ಸಂಬಂಧಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
22 ಜನರನ್ನು ಪ್ರವಾಹದಿಂದ ರಕ್ಷಿಸಿದ ಪೊಲೀಸರು :
ಕಲಬುರ್ಗಿಯಲ್ಲಿ ಭಾರಿ ಸುರಿದಿದೆ. ಮಹಾ ಮಳೆಗೆ ಮನೆಗೆ ಅಪಾರ ಪ್ರಮಾಣದ ನೀರು ನುಗ್ಗಿದ ಹಿನ್ನೆಲೆಯಲ್ಲಿ ಹಲವರು ಮನೆಯಲ್ಲಿ ಸಿಲುಕಿಕೊಂಡ ಘಟನೆ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ. ಮನೆಯಲ್ಲಿ ಸಿಕ್ಕಿಹಾಕಿಕೊಂಡ 22 ಜನರನ್ನು ರಕ್ಷಿಸಿದ ಘಟನೆ ಚಿಂಚೋಳಿ ತಾಲ್ಲೂಕಿನ ಚಂದಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹನುಮಾನ್ ನಗರದ ಬಡವಾಣೆಯ ಮನೆಯಲ್ಲಿ ಸಿಕ್ಕಿ ಹಾಕಿಕೊಂಡ ಜನರು. ಜೀವದ ಹಂಗು ತೋರೆದು ರಕ್ಷಣೆ ಮಾಡಿದ ಪಿಎಸ್ಐ ವಿಶ್ವನಾಥರೆಡ್ಡಿ ಮತ್ತು ಸಿಬ್ಬಂದಿ. ಮನೆಯ ಮೇಲ್ಚಾವಣಿಯಿಂದ ಮತ್ತೊಂದು ಮನೆಗೆ ಮೆಟ್ಟಿಲು ಮೂಲಕ ಜನರ ಸಾಗಾಟ. ಹಗ್ಗದ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಯ ಕಾರ್ಯಕ್ಕೆ ಜನತೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.
ಹಾನಿಯ ವರದಿ ಕಳಿಸೋಕೆ ಸೂಚಿಸಿದ್ದೇವೆ : ಸಚಿವ ಈಶ್ವರಪ್ಪ
ಭಾರಿ ಮಳೆಗೆ ಉತ್ತರ ಕರ್ನಾಟಕ ತತ್ತರಗೊಂಡಿರುವ ಹಿನ್ನೆಲೆಯಲ್ಲಿ ಮಳೆ ಹಾನಿ ಬಗ್ಗೆ ವರದಿ ಕಳಿಸಲು ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ : ಚುನಾವಣಾ ನೀತಿ ಸಂಹಿತೆ, ಕೋವಿಡ್-19 ಮಾರ್ಗಸೂಚಿ ಪಾಲಿಸುವುದು ಕಡ್ಡಾಯ: ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದೆಂದಿಗಿಂತಲೂ ಭಾರಿ ಮಳೆಯಾಗಿ, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದರು.ಈ ಸಂಬಂಧ ಎಲ್ಲ ಡಿಸಿ ಹಾಗೂ ಸಿಇಓಗಳಿಗೆ ಈಗಾಗಲೇ ಸೂಚನೆ ಕೊಡಲಾಗಿದೆ. ಕಲಬುರ್ಗಿ ಸೇರಿ ಎಲ್ಲ ಜಿಲ್ಲೆಗಳ ವರದಿ ನೀಡಲು ಸೂಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ