ಕೊಪ್ಪಳ:ಈಗ ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು, ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವುದಕ್ಕಿಂತ ಖಾಸಗಿ ಶಾಲೆಯತ್ತ ಪಾಲಕರು ಮುಖ ಮಾಡಿದ್ದಾರೆ, ಈ ಮಧ್ಯೆ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಇಲ್ಲೊಬ್ಬ ಶಿಕ್ಷಕರು ವಿಭಿನ್ನ ಪ್ರಯತ್ನ ಮಾಡಿದ್ದಾರೆ, ಈ ಶಾಲೆಗೆ ಸೇರುವ ಮಕ್ಕಳು 18 ವಯಸ್ಸಾದ ನಂತರ ಮುಂದಿನ ಶಿಕ್ಷಣಕ್ಕೆ ಒಂದಿಷ್ಟು ಸಹಕಾರವಾಗಲಿದೆ, ಈ ಶಿಕ್ಷಕನ ಸಾಧನೆಗೆ ಗ್ರಾಮಸ್ಥರು ಕೊಂಡಾಡುತ್ತಿದ್ದಾರೆ. ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯಲ್ಲಿರುವ ರೋಟರಿನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೆಯ ತರಗತಿಯವರೆಗೂ ಮಕ್ಕಳು ಓದುತ್ತಿದ್ದಾರೆ, ಈ ಶಾಲೆಯ ಮುಖ್ಯಶಿಕ್ಷಕರಾಗಿರುವ ಚಿತ್ರದುರ್ಗಾ ಜಿಲ್ಲೆಯ ಮೂಲದ ಗುರುಸ್ವಾಮಿ ಎಂಬುವವರು ತಮ್ಮ ಶಾಲೆಗೆ ಮಕ್ಕಳು ದಾಖಲಾಗುವಂತೆ ಆಕರ್ಷಿಸಲು ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ಒಂದು ಸಾವಿರ ರೂಪಾಯಿ ಭದ್ರತಾ ಹಣವನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡುತ್ತಿದ್ದಾರೆ.
ಈ ಶಾಲೆಗೆ ಈ ಶೈಕ್ಷಣಿಕ ವರ್ಷದಲ್ಲಿ 10 ಮಕ್ಕಳು ಇಲ್ಲಿಯವರೆಗೂ ದಾಖಲಾಗಿದ್ದಾರೆ, ಅವರಲ್ಲಿ 6 ಮಕ್ಕಳ ಹೆಸರಿನಲ್ಲಿ 1000 ರೂಪಾಯಿ ಬ್ಯಾಂಕಿನಲ್ಲಿ ಹಣ ಜಮಾ ಮಾಡಿದ್ದಾರೆ, ಉಳಿದ ಮಕ್ಕಳಿಗೂ ಹಣ ಜಮಾ ಮಾಡಲಾಗುತ್ತಿದೆ, ಇಲ್ಲಿಗೆ 30 ಮಕ್ಕಳು ಒಂದನೆಯ ತರಗತಿಗೆ ದಾಖಲಾದರೂ ಅವರ ಹೆಸರಿನಲ್ಲಿ ಹಣ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.ಈ ಹಣವನ್ನು ಮಗು ತನ್ನ 18 ವರ್ಷದ ನಂತರ ಪಡೆಯಬಹುದು, ಆಗ ಮಗುವಿನ ಮುಂದಿನ ವಿದ್ಯಾಭ್ಯಾಸಕ್ಕೆ ಒಂದಿಷ್ಟು ಸಹಕಾರಿಯಾಗಲಿದೆ.
ಇದನ್ನೂ ಓದಿ: ಐಶ್ವರ್ಯಾ ರೈ ಗೆ 600 ಸೀರೆಗಳು, ಮಾಧುರಿ ದೀಕ್ಷಿತ್ ತೊಟ್ಟ ಪ್ರತೀ ಡ್ರೆಸ್ ಬೆಲೆ 15 ಲಕ್ಷ ರೂ..
ಇದೇ ಶಿಕ್ಷಕರು ತಮ್ಮ ಶಾಲೆಯಲ್ಲಿರುವ 30 ಮಕ್ಕಳಿಗೆ ಶಾಲಾ ಕಿಟ್ ನೀಡಿದ್ದಾರೆ, ಪಠ್ಯಕ್ಕೆ ಪೂರಕವಾದ ಸಾಮಾಗ್ರಿಗಳು ಈ ಕಿಟ್ ನಲ್ಲಿವೆ, ಮಕ್ಕಳಿಗೆ ಹಣ ಜಮಾ ಮಾಡೋದು, ಮಕ್ಕಳಿಗೆ ಪಠ್ಯದ ಕಿಟ್ ನೀಡುತ್ತಿರುವ ಗುರುಸ್ವಾಮಿ ತಮ್ಮ ವಯಕ್ತಿಕ ಹಣವನ್ನು ನೀಡುತ್ತಿದ್ದಾರೆ, ಶಾಲಾ ಮಕ್ಕಳಿಂದಲೇ ನಾವು ಬದುಕುತ್ತಿದ್ದೇವೆ, ನಮ್ಮ ವೇತನದ ಸ್ವಲ್ಪ ಪ್ರಮಾಣವನ್ನು ಮಕ್ಕಳಿಗೆ ನೀಡಿದರೆ ಏನು ಕಡಿಮೆಯಾಗುವುದಿಲ್ಲ ಎನ್ನುತ್ತಾರೆ.
ಸರಕಾರಿ ಶಾಲೆಗೆ ಬಹುತೇಕ ಬಡ ಮಕ್ಕಳು, ಈಗ ಲಾಕ್ ಡೌನ್ ನಂತರ ಖಾಸಗಿ ಶಾಲೆಗಳಿಗೆ ಫೀ ಕಟ್ಟಲು ಪಾಲಕರು ಪರಿದಾಡುವ ಸ್ಥಿತಿ ಇದೆ, ಇಂಥ ಸಂದರ್ಭದಲ್ಲಿ ಬಡವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುತ್ತಿದ್ದಾರೆ, ಇಂಥ ಸಂದರ್ಭದಲ್ಲಿ ಸರಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಶಿಕ್ಷಕರ ಈ ಕ್ರಮ ಸ್ವಾಗತಾರ್ಹವಾಗಿದೆ.ಶಿಕ್ಷಕರು ಕೇವಲ ಪಾಠ ಮಾಡಿದರೆ ಸಾಕು, ಮಕ್ಕಳ ಸರಕಾರಿ ಶಾಲೆಗೆ ಬಂದರೆಷ್ಟು ಬಿಟ್ಟರೆಷ್ಟು, ಸರಕಾರ ಕೊಡುವ ಪಗಾರಕ್ಕೆ ದುಡಿದು ಹೋದರೆ ಸಾಕು ಎನ್ನುವ ಸರಕಾರಿ ಶಾಲಾ ಶಿಕ್ಷಕರ ಮಧ್ಯೆ ತಮ್ಮ ಶಾಲೆಗೆ ವಿದ್ಯಾರ್ಥಿಗಳು ಬರಬೇಕು, ಅವರಿಗೂ ಉತ್ತಮ ಶಿಕ್ಷಣ ಸಿಗಬೇಕು, ಬಡವರ ಮಕ್ಕಳು ಸರಕಾರಿ ಶಾಲೆಗೆ ಬರುತ್ತಿರುವದನ್ನು ಅರಿತ ಗುರುಸ್ವಾಮಿ ಎಂಬ ಮುಖ್ಯ ಶಿಕ್ಷಕರು ಇತರ ಶಿಕ್ಷಕರಿಗಿಂತ ವಿಭಿನ್ನವಾಗಿದ್ದಾರೆ.ಸರಕಾರಿ ಶಾಲಾ ಶಿಕ್ಷಕರು ತಮಗೆ ವಹಿಸಿದ ಕೆಲಸ ಮಾಡಿ ಮುಗಿಸಿದರೆ ಸಾಕು ಎನ್ನುವಂಥ ಸ್ಥಿತಿಯಲ್ಲಿರುವ ಹಿರೇಸಿಂದೋಗಿಯ ಸರಕಾರಿ ಶಾಲಾ ಶಿಕ್ಷಕರ ಕ್ರಮ ಇತರರಿಗೆ ಮಾದರಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ