ಧಾರವಾಡ ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ ; ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಶೀತ ಗಾಳಿಯೊಂದಿಗೆ ಎಡೆಬಿಡದೆ ಮಳೆ ಸುರಿಯುತ್ತಿದೆ. ‌ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರ ಪರದಾಡುತ್ತಿದ್ದಾರೆ.

ಬಾಲಕಿಯನ್ನು ಹುಡುಕುತ್ತಿರುವ ಎನ್​​ಡಿಆರ್​ಎಫ್​​​ ತಂಡ

ಬಾಲಕಿಯನ್ನು ಹುಡುಕುತ್ತಿರುವ ಎನ್​​ಡಿಆರ್​ಎಫ್​​​ ತಂಡ

  • Share this:
ಹುಬ್ಬಳ್ಳಿ(ಆಗಸ್ಟ್​.07): ಕೋಡಿ ಬಿದ್ದಿದ್ದ ಗಂಜಿಗಟ್ಟಿ ಕೆರೆ ನೀರಿನಲ್ಲಿ ಕೊಚ್ಚಿ ಹೋಗಿರುವ ಬಾಲಕಿಯ ಮೃತದೇಹದ ಪತ್ತೆಗೆ ಎನ್‌ಡಿ‌ಆರ್‌ಎಫ್ ತಂಡ ತೀವ್ರ ಹುಡುಕಾಟ ನಡೆಸುತ್ತಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿ ನ ಗಂಜಿಗಟ್ಟಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಎಂಟು ವರ್ಷದ ಬಾಲಕಿ  ಶ್ರೀದೇವಿ ಗಾಣಿಗೇರ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.

ಧಾರಾಕಾರ ಮಳೆಗೆ ಗಂಜಿಗಟ್ಟಿ ಕೆರೆ‌ ತುಂಬಿ ಕೋಡಿ ಬಿದ್ದಿದೆ. ಬಾಲಕಿ ತನ್ನ ತಾಯಿಯ ಜೊತೆ ಹೊಲಕ್ಕೆ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಊಟದ ಬುತ್ತಿ ‌ಕೊಡಲು ಶ್ರೀದೇವಿ ಮತ್ತವಳ ತಾಯಿ ತೆರಳುತ್ತಿದ್ದರು. ಈ ವೇಳೆ ರಸ್ತೆ ದಾಟುವಾಗ ಕಾಲು ಜಾರಿದೆ. ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನ ರಭಸಕ್ಕೆ ಬಾಲಕಿ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ. ಶ್ರೀದೇವಿ ಗಾಣಿಗೇರ್‌ ಳನ್ನು ಮೇಲೆತ್ತಲು ಸ್ಥಳೀಯ ಯುವಕರು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.

ಕಲಘಟಗಿ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿಯ ಜೊತೆಗೆ ಎನ್‌ಡಿಆರ್‌ಎಫ್ ತಂಡ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದೆ. ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮತ್ತು ತಹಶೀಲ್ದಾರ್ ಅಶೋಕ್ ಶಿಗ್ಗಾವಿ ಅವರು ಬಾಲಕಿ ಶ್ರೀದೇವಿ ಮನೆಗೆ ಭೇಟಿ‌ ನೀಡಿ ತಂದೆ- ತಾಯಿಗೆ ಸಾಂತ್ವನ ಹೇಳಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಶೀತ ಗಾಳಿಯೊಂದಿಗೆ ಎಡೆಬಿಡದೆ ಮಳೆ ಸುರಿಯುತ್ತಿದೆ. ‌ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರ ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ‌‌ನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹುಬ್ಬಳ್ಳಿಯ ಉಣಕಲ್ಲ ಕೆರೆ ಕೋಡಿ ಬಿದ್ದಿದೆ. ಕೆರೆ ಸಂಪೂರ್ಣ ಭರ್ತಿಯಾಗಿ ಉಕ್ಕಿ ಹರಿಯುತ್ತಿದೆ. ಹೊರ ಹರಿವು ರಭಸವಾಗಿರುವುದರಿಂದ ಪ್ರವಾಹದ ಭೀತಿ ಎದುರಾಗಿದೆ.

ಇದನ್ನೂ ಓದಿ : ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ, ಹೆಚ್ಚುತ್ತಿದೆ ನದಿ ನೀರಿನ ಹರಿವು ; ತಗ್ಗುತ್ತಿಲ್ಲ ಕಡಲಿನ ಅಲೆಗಳ ಅಬ್ಬರ

ಹಳೇ ಹುಬ್ಬಳ್ಳಿ ಭಾಗದ ಮನೆಗಳು ಮುಳುಗಡೆ ಭೀತಿಯಲ್ಲಿವೆ. ಪ್ರವಾಹದ ರಭಸಕ್ಕೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಜಲಾವೃತವಾಗಿದೆ. ಗೋವಿನ ಜೋಳ‌ ನೆಲಕಚ್ಚಿದೆ.‌ ಹೆಸರು, ಉದ್ದು, ಶೇಂಗಾ, ಸೋಯಾಬಿನ್, ಹತ್ತಿ, ಈರುಳ್ಳಿ ಬೆಳೆ ನೆರೆಯಲ್ಲಿ ಕೊಚ್ಚಿ ಹೋಗುತ್ತಿದೆ. ಬೆಳೆದ ಬೆಳೆಗಳು ಜಲಾವೃತ ಗೊಂಡಿರುವುದರಿಂದ ರೈತರು ಕಂಗೆಟ್ಟಿದ್ದಾರೆ.ಮಳೆಯ ಹೊಡೆತಕ್ಕೆ ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಕುಂದಗೋಳ, ನವಲಗುಂದ, ಅಣ್ಣಿಗೇರಿ ಮತ್ತು ಅಳ್ನಾವರ ತಾಲೂಕುಗಳಲ್ಲಿ ನೂರಾರು ಮನೆಗಳ ಗೋಡೆಗಳು ಕುಸಿದಿವೆ.
Published by:G Hareeshkumar
First published: