HOME » NEWS » District » A FARMER WHO AGRICULTURE ON A BARREN LAND IN MANGALORE NEAR PUTTUR AKP HK

ಕಲ್ಲು ಹಾಸಿನ ಭೂಮಿಯಲ್ಲಿ ಬಂಗಾರದಂತಹ ಬೆಳೆ ಬೆಳೆದ ಪುತ್ತೂರಿನ ಕೃಷಿಕ

ಎಕರೆಗಟ್ಟಲೆ ಫಲವತ್ತಾದ ಕೃಷಿ ಭೂಮಿಯಿದ್ದರೂ, ಕೃಷಿಯ ಬಗ್ಗೆ ನಿರಾಸಕ್ತಿ ಹೊಂದಿರುವ ಇಂದಿನ ತಲೆಮಾರಿಗೆ ಜತ್ತಪ್ಪ ರೈ ಮಾರ್ಗದರ್ಶಕರಾಗಿ ಗುರುತಿಸಲ್ಪಡುತ್ತಾರೆ

news18-kannada
Updated:November 28, 2020, 6:50 AM IST
ಕಲ್ಲು ಹಾಸಿನ ಭೂಮಿಯಲ್ಲಿ ಬಂಗಾರದಂತಹ ಬೆಳೆ ಬೆಳೆದ ಪುತ್ತೂರಿನ ಕೃಷಿಕ
ಜತ್ತಪ್ಪ ರೈ
  • Share this:
ಪುತ್ತೂರು(ನವೆಂಬರ್​. 28): ಕೃಷಿಯ ಬಗೆಗಿನ ಒಲವೇ ಒಂದು ತರಹದ ಕುತೂಹಲ. ಸಾಕಷ್ಟು ಕೃಷಿ ಭೂಮಿ ಇದ್ದರೂ, ಅದರಲ್ಲಿ ಕೃಷಿ ಮಾಡುವವರು ಸಿಗುವುದು ಬೆರಳೆಣಿಕೆಯ ಜನರಷ್ಟೇ. ಆದರೆ, ಕೃಷಿ ಭೂಮಿಯಿಲ್ಲದಿದ್ದರೂ, ಹೇಗಾದರೂ ಕೃಷಿ ಮಾಡಬೇಕು ಎನ್ನುವ ಛಲವಿರುವವರು ಮಾತ್ರ ವಿರಳವೇ. ಇಂಥಹ ಓರ್ವ ಕೃಷಿಕ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದ್ದಾರೆ. ಸಂಪೂರ್ಣ ಕಪ್ಪು ಕಲ್ಲಿನ ಹಾಸಿನಿಂದ ಆವೃತ್ತವಾಗಿದ್ದ ತನ್ನ ಭೂಮಿಯನ್ನು ಈ ಕೃಷಿಕ ತನ್ನ ಅವಿರತ ಶ್ರಮದಿಂದಾಗಿ ಕೃಷಿಯೋಗ್ಯ ಭೂಮಿಯಾಗಿ ಬದಲಾಯಿಸಿದ್ದಾನೆ. ಕಲ್ಲು ಹಾಸಿನ ಮೇಲೆ ಬಂಗಾರದ ಕೃಷಿ ಬೆಳೆದ ಈ ಕೃಷಿಕನ ಯಶೋಗಾಥೆಯಿದು. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಜಾಂಬ್ರಿ ನಿವಾಸಿ ಜತ್ತಪ್ಪ ರೈ ಈ ಸಾಧಕ. ಇಂದು‌ ನರ ದೌರ್ಬಲ್ಯದಿಂದ ಕೊಂಚ ಅನಾರೋಗ್ಯ ಪೀಡಿತರಾಗಿರುವ ಇವರು ತನ್ನ ಯೌವನಾವಸ್ಥೆಯನ್ನೆಲ್ಲಾ ಕೃಷಿಗಾಗಿಯೇ ಮುಡಿಪಾಗಿಟ್ಟವರು. ಕೃಷಿ ಕುಟುಂಬದಿಂದ ಬಂದ ಜತ್ತಪ್ಪ ರೈ ಹಿರಿಯರಿಂದ ಬಂದ ಪುಟ್ಟ ಕೃಷಿಭೂಮಿಯಲ್ಲೇ ಕೃಷಿ ಬದುಕು ಆರಂಭಿಸಿದವರು.

ಬಳಿಕ ತನ್ನ ಜಮೀನಿನಲ್ಲಿರುವ ಕಪ್ಪು ಕಲ್ಲು ಹಾಸಿನಂತಿರುವ ಪಾಳು ಬಿದ್ದ ಪ್ರದೇಶವನ್ನೇ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದವರು. ಕಲ್ಲು ಹಾಸಿನ ಮೇಲೆ ಮಣ್ಣು ಹಾಕಿ ಗುಂಡಿ ತೋಡಿ, ಅಡಿಕೆ, ತೆಂಗು, ಬಾಳೆ, ಕೊಕೊ ಹೀಗೆ ಎಲ್ಲಾ ವಿದಧ ಬೆಳೆಯನ್ನು ಬೆಳೆಸಿದ್ದಾರೆ. ಕೃಷಿಯ ಮೇಲಿನ ಪ್ರೀತಿ, ನಿಷ್ಟೆ ಜತ್ತಪ್ಪ ರೈ ಅವರನ್ನು ಕೈ ಬಿಟ್ಟಿಲ್ಲ. ಕಲ್ಲು ಹಾಸಿನಲ್ಲಿ ಬಂಗಾರದ ಬೆಳೆ ಬರಲಾರಂಭಿಸಿದೆ. ಈ ಭೂಮಿಯಲ್ಲಿ ಬೆಳೆದ ಎಲ್ಲಾ ಬೆಳೆಯು ಜತ್ತಪ್ಪ ರೈ ಯವರ ಶ್ರಮಕ್ಕೆ ಸರಿಯಾದ ಪ್ರತಿಫಲವನ್ನೇ ನೀಡಿದೆ.

ತೆಂಗು, ಅಡಿಕೆ, ಕೊಕೊ, ಬಾಳೆ ಎಲ್ಲವೂ ಈ ಕೃಷಿಕ ನಿರೀಕ್ಷಿಸಿದ ಆದಾಯವನ್ನು ನೀಡಿದೆ. ಮೂವತ್ತು ವರ್ಷಗಳ ಹಿಂದೆ ಹಿರಿಯರು ನಡೆಸಿಕೊಂಡು ಬರುತ್ತಿದ್ದ ಸುಮಾರು ಅರ್ಧ ಎಕರೆಯಷ್ಟು ಕೃಷಿಭೂಮಿಯಲ್ಲಿ ಸಂಪಾದಿಸಿದ ಹಣವನ್ನು ಕಲ್ಲು ಹಾಸಿನಿಂದ ಕೂಡಿದ ಜಮೀನಿಗೆ ಮಣ್ಣು ಹಾಕಿ ಸಮತಟ್ಟು ಮಾಡಿದ್ದಾರೆ.

ಅಲ್ಲದೆ ಸ್ವತಃ ಕಾಲಿಗೆ ಚಕ್ರ ಕಟ್ಟಿದಂತೆ ದುಡಿದ ಪರಿಣಾಮ ಇದೀಗ ಕಲ್ಲು ಬಂಡೆಯಲ್ಲೂ ಕೃಷಿ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಜತ್ತಪ್ಪ ರೈ ಗೆ ಅವರ ಹೆಂಡತಿ ಕೂಡಾ ಕೃಷಿ ಚಟುವಟಿಕೆಗಳಲ್ಲಿ ಸಾಥ್ ನೀಡಿದ ಪರಿಣಾಮ  ಕಳೆದ ಮೂವತ್ತು ವರ್ಷದಲ್ಲಿ ಕೃಷಿಯಲ್ಲಿ ಉತ್ತಮ ಸಾಧನೆಯನ್ನೂ ತೋರುವಲ್ಲಿ ಸಫಲರಾಗಿದ್ದಾರೆ. ಎಲ್ಲಾ ಅಡಿಕೆ ಕೃಷಿ ತೋಟಗಳಿಗೆ ಈ ಬಾರಿ ಬಾಧಿಸಿದ ಕೊಳೆರೋಗ ಜತ್ತಪ್ಪ ರೈ ತೋಟವನ್ನೂ ಕಾಡಿದೆ. ಆದರೆ ಇದಕ್ಕೆಲ್ಲಾ ಧೈರ್ಯಗುಂದದ ಜತ್ತಪ್ಪ ರೈ ಈ ಬಾರಿಯಲ್ಲದೇ ಹೋದಲ್ಲಿ ಮುಂದಿನ ಬಾರಿ ಉತ್ತಮ ಬೆಳೆ ಬರಬಹುದು ಎನ್ನುವ ಆತ್ಮ ವಿಶ್ವಾಸವನ್ನೂ ಹೊಂದಿದ್ದಾರೆ.

ಕೇವಲ ಭತ್ತದ ಕೃಷಿಯನ್ನು ಮಾಡುತ್ತಿದ್ದ ಜತ್ತಪ್ಪ ರೈ ಪಾಳು ಬಿದ್ದಿದ್ದ ಜಮೀನಿನಲ್ಲಿ ಕೃಷಿ ಮಾಡಬೇಕೆಂಬ ಆಲೋಚನೆ ಬಂದ ಕೂಡಲೇ ಆ ನಿಮಿತ್ತ ಕಾರ್ಯಪ್ರವೃತ್ತವಾದವರು. ಕೃಷಿ ವಿಚಾರದಲ್ಲಿ ಹಿಂದೆ ಮುಂದೆ ನೋಡದ ಇವರು ಕಲ್ಲು ಹಾಸಿನ ಮೇಲೆ ದೂರದಿಂದ ಮಣ್ಣು ತಂದು ಹಾಕಿ ಕೃಷಿಯನ್ನು ಆರಂಭಿಸಿದವರು.

ಇದನ್ನೂ ಓದಿ : ಗ್ರಾಮೀಣಾಭಿವೃದ್ಧಿಗೆ ಕಾಂಗ್ರೆಸ್-ಜೆಡಿಎಸ್‌ ಕೊಡುಗೆ ಶೂನ್ಯ: ಡಿಸಿಎಂ ಅಶ್ವತ್ಹನಾರಾಯಣ

ಕೇವಲ ಇಂಥಹುದೇ ಕೃಷಿಯನ್ನು ಮಾಡುತ್ತೇನೆ ಎಂದು ಜೋತು ಬೀಳುವ ಜಾಯಮಾನದವರು ಜತ್ತಪ್ಪ ರೈ ಆಗದೇ ಇದ್ದ ಕಾರಣ , ತನ್ನ ಕೃಷಿ ತೋಟದಲ್ಲಿ ಎಲ್ಲವನ್ನೂ ಬೆಳೆಸಿದವರು. ಹಿರಿಯರಿಂದ ಬಂದ ಕೃಷಿ ಭೂಮಿಯಿಂದ ಅವರಲ್ಲಿ ಬೆಳೆ ಬರುತ್ತದೆ ಎಂದು ಹಿರಿಯರು ಮಾಡಿದ ಕೃಷಿಯನ್ನೇ ನಂಬಿ ಕುಳಿತುಕೊಂಡವರಲ್ಲ ಈ ಕೃಷಿಕ.

ಎಕರೆಗಟ್ಟಲೆ ಫಲವತ್ತಾದ ಕೃಷಿ ಭೂಮಿಯಿದ್ದರೂ, ಕೃಷಿಯ ಬಗ್ಗೆ ನಿರಾಸಕ್ತಿ ಹೊಂದಿರುವ ಇಂದಿನ ತಲೆಮಾರಿಗೆ ಜತ್ತಪ್ಪ ರೈ ಮಾರ್ಗದರ್ಶಕರಾಗಿ ಗುರುತಿಸಲ್ಪಡುತ್ತಾರೆ. ಕೃಷಿ ಭೂಮಿಯಿದೆ ಎಂದು ಕೃಷಿಯಲ್ಲಿ ತೊಡಗಿಕೊಳ್ಳದೇ ಹೋದಲ್ಲಿ ಕೃಷಿ ನಮ್ಮ ಕೈ ಬಿಡುತ್ತದೆ ಎನ್ನುವ ಈ ಹಿರಿಯ ಕೃಷಿಕನ ಕೃಷಿಯ ಒಲವು ಎಲ್ಲರಿಗೂ ಪ್ರೇರಣೆಯಾಗಬೇಕಿದೆ.
Published by: G Hareeshkumar
First published: November 28, 2020, 6:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading