ಕ್ಯಾನ್ಸರ್ ಗೆದ್ದ ಕೃಷಿ; ಗಲ್ಫ್​ನಿಂದ ಬಂದು ಬೇಸಾಯ ಮಾಡುತ್ತಾ ಮಾರಕ ಕಾಯಿಲೆ ಹಿಮ್ಮೆಟ್ಟಿಸಿದ ಮಂಗಳೂರು ರೈತ

ಕೃಷಿಗಾಗಿ ನೀರಿಲ್ಲ ಎಂದು ಕೊರಗುವವರಿಗೆ ಇದ್ದ ನೀರನ್ನೆ ಬಳಸಿಕೊಂಡು ಯಾವ ರೀತಿ ಕೃಷಿ ನಡೆಸಬಹುದು ಎಂಬುದಕ್ಕೆ ಥಾಮಸ್ ಮಾದರಿಯಾಗಿದ್ದಾರೆ. ದೈಹಿಕವಾದ ಸಮಸ್ಯೆಯಿಂದ ಬಳಲುತ್ತಿದ್ದರೂ ಅದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಕೃಷಿಯಿಂದ ಥಾಮಸ್ ಅವರು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ನಿಜಕ್ಕೂ ಥಾಮಸ್ ಅವರ ಕೃಷಿ, ಜೀವನ ಪ್ರೀತಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.

ಥಾಮಸ್ ಗ್ರೇಜರಿ ರೆಬೆಲ್ಲೋ.

ಥಾಮಸ್ ಗ್ರೇಜರಿ ರೆಬೆಲ್ಲೋ.

  • Share this:
ಮಂಗಳೂರು; ದೇಶದಲ್ಲಿ ಸಾವಿರಾರು ಜನರು ಕ್ಯಾನ್ಸರ್​ನಿಂದ ನರಳುತ್ತಿದ್ದಾರೆ. ಕೆಲವರು ಕ್ಯಾನ್ಸರ್ ಗೆದ್ದರೆ ಇನ್ನೂ ಕೆಲವರು ನರಳಿ ನರಳಿ ಸಾಯುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬರು ಮಾರಕ ಕಾಯಿಲೆಗೆ ತುತ್ತಾಗಿ, ಕೃಷಿ ಕಾಯಕದಿಂದ ಮಹಾಮಾರಿಯನ್ನೇ ಹಿಮ್ಮೆಟ್ಟಿಸಿದ್ದಾರೆ. ಹೌದು, ಕ್ಯಾನ್ಸರ್ ಜೊತೆ ಸೆಣಸಾಡುತ್ತಿರುವ ಅದೇಷ್ಟೋ ಸಾವಿರ ಮಂದಿಗೆ ಈ ಸ್ಟೋರಿ ಸ್ಫೂರ್ತಿದಾಯಕವಾಗುತ್ತೆ. ಹಚ್ಚ ಹಸುರಿನ ತೋಟದ ನಡುವೆ ಟಿಪಿಕಲ್ ಕೃಷಿಕನ ಗೆಟಪ್ಪಿನಲ್ಲಿ ಓಡಾಡುತ್ತಾ, ದಣಿವರಿಯದೆ ದುಡಿಯುತ್ತಿರುವ ಈ ಕೃಷಿಕನ ಹೆಸರು ಥಾಮಸ್ ಗ್ರೇಜರಿ ರೆಬೆಲ್ಲೋ. ಹಾಗಂತ ಇವರು ಹುಟ್ಟಿನಿಂದಲೇ ಕೃಷಿಕ ಅಲ್ಲ. ಗಲ್ಫ್‌ನಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಅಲ್ಲೇ ಸೆಟಲ್ ಆಗುವ ಯೋಚನೆಯಲ್ಲಿದ್ದರು. ಆದರೆ ಗಂಟಲಿನ ಕ್ಯಾನ್ಸರ್ ಇವರ ಯೋಜನೆಯನ್ನೇ ಬದಲಾಯಿಸಿತು.

ಕ್ಯಾನ್ಸರ್ ದೇಹದೊಳಗೆ ಆಕ್ರಮಿಸುತ್ತಾ ಹೋಯಿತು. ಸತ್ತರೆ ಜನ್ಮಭೂಮಿಯಲ್ಲೇ ಸಾಯೋಣ ಅಂತಾ ಹಳ್ಳಿಗೆ ಬಂದ ಥಾಮಸ್ ಗ್ರೇಜರಿ ರೆಬೆಲ್ಲೋ ಅವರಲ್ಲಿ ಊರಿಗೆ ಬಂದ ನಂತರ ಕಂಡಿದ್ದು ಅಚ್ಚರಿಯ ಬದಲಾವಣೆ. ಕತ್ತರಿಸಲ್ಪಟ್ಟ ಗಂಟಲು, ದೇಹದೊಳಗೆ ಕಾಡುತ್ತಿದ್ದ ಆರೋಗ್ಯದ ಸಮಸ್ಯೆಯ ನಡುವೆಯೇ ಕಾಡುತ್ತಿದ್ದ ಒಂಟಿತನವನ್ನು ದೂರ ಮಾಡಲು ಕೃಷಿ ಕೆಲಸಕ್ಕೆ ಕೈ ಹಾಕಿದರು. ದಿನ ಕಳೆದಂತೆ ಥಾಮಸ್ ಅವರ ಆರೋಗ್ಯದಲ್ಲಿ ಕಂಡಿದ್ದೇ ಅಚ್ಚರಿಯ ಬದಲಾವಣೆ. ಸಾವಿನ ದಿನ ಎಣಿಸುತ್ತಿದ್ದ ಥಾಮಸ್ ಕೃಷಿ ಮಾಡುತ್ತಾ ಮಾಡುತ್ತಾ ಕ್ಯಾನ್ಸರ್ ಜೊತೆ ಹೋರಾಡುತ್ತಾ ಹತ್ತು ವರ್ಷಗಳೇ ಕಳೆದುಹೋಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಗ್ರಾಮದ ನಿವಾಸಿ ಥಾಮಸ್ ಗ್ರೇಜರಿ ರೆಬೆಲ್ಲೋ ಅಚ್ಚರಿಯಾಗಿ ಬದುಕುತ್ತಿದ್ದಾರೆ. ತಮ್ಮ ಒಂದೂವರೆ ಎಕರೆ ಪ್ರದೇಶವನ್ನು ಹಸಿರ ಸಿರಿಯನ್ನಾಗಿಸಿದ್ದಾರೆ. ಥಾಮಸ್ ಪತ್ನಿ ಮತ್ತು ಮಗ ವಿದೇಶದಲ್ಲಿದ್ದು, ಥಾಮಸ್ ಮಾತ್ರ ಊರಲ್ಲೇ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಅಡಿಕೆ, ತೆಂಗು, ತರಕಾರಿ, ವೀಳ್ಯದೆಲೆ ಕೃಷಿ ಮಾಡುತ್ತಾ ತನ್ನೊಳಗಿರುವ ಮಹಾಮಾರಿಯನ್ನೇ ಮರೆತು ಸ್ಫೂರ್ತಿಯಾಗಿದ್ದಾರೆ.

ಥಾಮಸ್ ಅವರ ದಿನಚರಿ ಎಂತಹವರನ್ನೂ ಆಶ್ವರ್ಯಚಕಿತಗೊಳಿಸುತ್ತದೆ. ವಯಸ್ಸು 60 ದಾಟಿದರೂ ಚಿರಯುವಕನ ರೀತಿ ಜೀವನೋತ್ಸಾಹ ಥಾಮಸ್ ರವರಲ್ಲಿದೆ. ಮುಂಜಾನೆ 5 ಗಂಟೆಗೆ ಎದ್ದು, ತಮಗೆ ಬೇಕಾದ ಆಹಾರ ತಾವೇ ರೆಡಿ ಮಾಡಿದ ಮೇಲೆ ತೋಟಕ್ಕೆ ಬರುವ ಥಾಮಸ್ ಮತ್ತೆ ತೋಟದಿಂದ ಮನೆಗೆ ಹಿಂದುರುಗುವುದು ಸಂಜೆ 6 ಗಂಟೆಗೆ. ಕೃಷಿ ಕೆಲಸ ಮಾಡುವುದರಿಂದ ನೆಗೆಟಿವ್ ಆಲೋಚನೆಗಳೇ ಥಾಮಸ್ ಗೆ ಬರುವುದಿಲ್ಲವಂತೆ. ಪ್ರಾರಂಭದಲ್ಲಿ ಕ್ಯಾನ್ಸರ್ ಜೊತೆಗೆ ಸಕ್ಕರೆ ಖಾಯಿಲೆ ಕೂಡಾ ಕಾಡಿದ್ದರೂ ಈಗ ಅದೂ ಸಂಪೂರ್ಣ ಮಾಯವಾಗಿದೆಯಂತೇ. ಕ್ಯಾನ್ಸರ್‌ ರೋಗಿಗಳು ಧೃತಿಗೆಡದೆ ಕೃಷಿ ಮಾಡಿ. ಕೃಷಿಯಲ್ಲಿ ಖುಷಿಪಡಿ ಅನ್ನುವ ಸಲಹೆ ನೀಡ್ತಾರೆ ಥಾಮಸ್ ಗ್ರೇಜರಿ ರೆಬೆಲ್ಲೊ.

ಒಂದು ಎಕರೆ ಅರುವತ್ತೆರಡು ಸೆಂಟ್ಸ್ ಜಾಗದಲ್ಲಿ ತೆಂಗು, ತರಕಾರಿ, ಅಡಿಕೆ, ವೀಳ್ಯದೆಲೆ ಕೃಷಿಯನ್ನು ಮಾಡಿದ್ದಾರೆ. ನೀರಿನ ಸಮಸ್ಯೆಯಿದ್ದರೂ ಲಭ್ಯವಿರುವ ನೀರಿನಲ್ಲೇ ಈ ಕೃಷಿಯನ್ನು ನಡೆಸಿಕೊಂಡು ಬಂದಿದ್ದಾರೆ. ಥಾಮಸ್ ಅವರು ಈವರೆಗೆ ಒಟ್ಟು 10 ಬೋರ್‌ವೆಲ್‌ಗಳನ್ನು ಕೊರೆಸಿದ್ದಾರೆ. ಆದರೆ 10 ಕೊಳವೆಬಾವಿಗಳಲ್ಲಿ 9 ಫೆಲ್ಯೂರ್ ಆಗಿದ್ದವು. ಕೊನೆಯದಾಗಿ ತೆಗೆದ 10ನೇ ಬೋರ್‌ವೆಲ್‌‌ನಲ್ಲಿ ಅರ್ಧ ಇಂಚು ನೀರು ಲಭ್ಯವಾಗಿದೆ. ಆ ಅರ್ಧ ಇಂಚು ನೀರನ್ನೇ ಬಳಸಿಕೊಂಡು ತಮ್ಮ ಕೃಷಿ ಚಟುವಟಿಕೆಯನ್ನು ನಡೆಸುತ್ತಿದ್ದಾರೆ.

ನೀರಿಗಾಗಿ ಒಂದು ಬೃಹದಾದ ಟ್ಯಾಂಕ್ ಒಂದನ್ನು ಥಾಮಸ್ ನಿರ್ಮಾಣ ಮಾಡಿದ್ದಾರೆ. ದಿನ ಪೂರ್ತಿ ಬೋರ್‌ವೆಲ್ ಪಂಪ್ ಆನ್ ಮಾಡಿ ಅದರಲ್ಲಿ ಅರ್ಧ ಇಂಚು ಲಭ್ಯವಾಗುವ ನೀರನ್ನು ಈ ಟ್ಯಾಂಕ್‌ಗೆ ಪಂಪ್ ಮಾಡಲಾಗುತ್ತೆ. ಆ ಬಳಿಕ ಈ ಟ್ಯಾಂಕ್‌ನಿಂದ ಪಂಪ್ ವ್ಯವಸ್ಥೆ ಮಾಡಿ ಕೃಷಿಗೆ ನೀರು ಹಾಯಿಸಲಾಗುತ್ತೆ. ನೀರಿನ ಪೈಪ್ ಅಳವಡಿಕೆ ಕೆಲಸವನ್ನು ಸಹ ತಮಗೆ ಬೇಕಾದ ಹಾಗೇಯೆ ಥಾಮಸ್ ಅವರೇ ಸೆಟ್ ಮಾಡಿಕೊಂಡಿದ್ದಾರೆ. ಟ್ಯಾಂಕ್‌ನಿಂದ ನೀರು ಸೋರಿಕೆಯಾಗದಂತೆ ಬೃಹದಾದ ಟಾರ್ಪಲ್‌ ಅನ್ನು ಅಡಿಭಾಗಕ್ಕೆ ಹಾಕಿಕೊಂಡಿದ್ದಾರೆ.

ಥಾಮಸ್ ಅವರು ಪ್ರಮುಖವಾಗಿ ವೀಳ್ಯದೆಲೆ ಕೃಷಿಯನ್ನು ಮಾಡುತ್ತಿದ್ದಾರೆ. ಸುಮಾರು 380 ಬಳ್ಳಿಗಳನ್ನು ನೆಟ್ಟು ವೀಳ್ಯದೆಲೆ ತೋಟ ನಿರ್ಮಿಸಿದ್ದಾರೆ. ವೀಳ್ಯದೆಲೆ ಕೃಷಿಗೆ ಒಟ್ಟು 60 ಸಾವಿರ ಖರ್ಚ ಮಾಡಲಾಗಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಈ ವೀಳ್ಯದೆಲೆ ಚಪ್ಪರವನ್ನು ಹಾಕಿದ್ದರು. ಡಿಸೆಂಬರ್ ಜನವರಿಯಲ್ಲಿ ವೀಳ್ಯದೆಲೆ ಕೊಯ್ಯಲು ಲಭ್ಯವಾಯಿತು. ವಾರಕ್ಕೊಮ್ಮೆ ವೀಳ್ಯದೆಲೆ ಕೊಯ್ಯುವುದಕ್ಕೆ ಸಿಗುತ್ತಿದ್ದು ಪ್ರಾರಂಭದಲ್ಲಿ ಉತ್ತಮ ಬೆಲೆ ಲಭ್ಯವಾಯಿತು. ಕೊರೋನಾ ಲಾಕ್‌ಡೌನ್ ಟೈಮಲ್ಲಿ ಒಂದಷ್ಟು ತೊಂದರೆಯು ಆಯಿತು. ಇದೀಗ ವಾರವೊಂದಕ್ಕೆ ವೀಳ್ಯದೆಲೆ ಮಾರಾಟ ಮಾಡಿದಾಗ ಎರಡೂವರೆ ಸಾವಿರ ಲಭ್ಯವಾಗುತ್ತಿದೆ. ಈ ವೀಳ್ಯದೆಲೆಗೆ ಹನಿ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಹಟ್ಟಿ ಗೊಬ್ಬರವನ್ನು ನೀಡಲಾಗುತ್ತೆ. ಕೀಟಗಳ ಬಾಧೆ ಬಾರದಂತೆ ಕಹಿಬೇವಿನ ಎಣ್ಣೆಯನ್ನು ಥಾಮಸ್ ಸ್ಪ್ರೇ ಮಾಡುತ್ತಾರೆ.

ಇನ್ನು ನೂರಕ್ಕೂ ಅಧಿಕ ತೆಂಗಿನ ಮರಗಳು ಇದೆ. ಇದರಲ್ಲಿ 40 ಗೆಂದಳಿ ಜಾತಿಯ ತೆಂಗಿನ ಮರಗಳಿವೆ. ಈ ಗೆಂದಲಿ ಸೀಯಾಳಕ್ಕೆ ಉತ್ತಮ ಬೇಡಿಕೆಯಿದ್ದು, ನರ್ಸರಿಯವರು ಇವರು ಬೆಳೆದ ಗೆಂದಳಿ ಜಾತಿಯ ತೆಂಗಿನ ಮರದ ಕಾಯಿಯನ್ನು ಗಿಡ ಮಾಡುವುದಕ್ಕಾಗಿ ಕೊಂಡೊಯ್ಯುತ್ತಾರೆ. ಈ ಗೆಂದಳಿ ಜಾತಿಯ ತೆಂಗಿನ ಮರ ಬೆಳೆಸಿದರೆ ಉತ್ತಮ ಆದಾಯವಿದೆ ಎಂಬುದು ಥಾಮಸ್ ಅವರ ಅಭಿಪ್ರಾಯ. ಇನ್ನು ತೆಂಗಿನ ಮರದ ಜೊತೆ 300ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ.

ಇದನ್ನು ಓದಿ: Winter Assembly Session - ವಿಧಾನಮಂಡಲ ಅಧಿವೇಶನ ಮೊದಲ ದಿನ: ಸ್ವಪಕ್ಷೀಯರ ಮೇಲೆಯೇ ಹರಿಹಾಯ್ದ ಸ್ಪೀಕರ್

ಥಾಮಸ್ ಅವರ ಜೊತೆ ಕೆಲಸಕ್ಕೆಂದು ಒಬ್ಬರು ಕೆಲಸದಾಳು ಜೊತೆಗಿರುತ್ತಾರೆ. ಹೀಗಾಗಿ ಜಂಟಿಯಾಗಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಇದೆಲ್ಲದರ ಜೊತೆಗೆ ತರಕಾರಿಯನ್ನು ಮಾಡಿಕೊಂಡು ಬಂದಿದ್ದಾರೆ. ಹೀರೆಕಾಯಿ, ಅಲಸಂಡೆ, ಬೆಂಡೆಕಾಯಿ, ಹರಿವೆ ಸೊಪ್ಪಿನ ಕೃಷಿಯನ್ನು ಮಾಡಿದ್ದಾರೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲೇ ಹರಿವೆ ಸೊಪ್ಪನ್ನು ಇವರು ಬೆಳೆದಿದ್ದರು. ಉತ್ತಮ ಫಸಲು ಸಹ ಹರಿವೆ ಕೊಟ್ಟಿತ್ತು. ಆ ಸಂದರ್ಭ ಉತ್ತಮ ಬೇಡಿಕೆಯೂ ಇತ್ತು. ಒಂದಿಷ್ಟು ತರಕಾರಿಯನ್ನು ತಮ್ಮ ನಿತ್ಯದ ಬಳಕೆಗೆ ಇಟ್ಟುಕೊಂಡು ಉಳಿದವುಗಳನ್ನು ಮಾರಾಟ ಮಾಡುತ್ತಾರೆ. ತರಕಾರಿ ಕೃಷಿಗೆ ಇವರದ್ದೇ ಹಟ್ಟಿಗೊಬ್ಬರವನ್ನು ಬಳಸುತ್ತಾರೆ.

ಕೃಷಿಗಾಗಿ ನೀರಿಲ್ಲ ಎಂದು ಕೊರಗುವವರಿಗೆ ಇದ್ದ ನೀರನ್ನೆ ಬಳಸಿಕೊಂಡು ಯಾವ ರೀತಿ ಕೃಷಿ ನಡೆಸಬಹುದು ಎಂಬುದಕ್ಕೆ ಥಾಮಸ್ ಮಾದರಿಯಾಗಿದ್ದಾರೆ. ದೈಹಿಕವಾದ ಸಮಸ್ಯೆಯಿಂದ ಬಳಲುತ್ತಿದ್ದರೂ ಅದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಕೃಷಿಯಿಂದ ಥಾಮಸ್ ಅವರು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ನಿಜಕ್ಕೂ ಥಾಮಸ್ ಅವರ ಕೃಷಿ, ಜೀವನ ಪ್ರೀತಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.
Published by:HR Ramesh
First published: