ಪುತ್ತೂರು; ಸತತ ಪರಿಶ್ರಮ, ದಿಟ್ಟ ನಿರ್ಧಾರ, ಆತ್ಮ ವಿಶ್ವಾಸದೊಂದಿಗೆ ಮುನ್ನಡೆದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸೂಕ್ತ ಉದಾಹರಣೆ ವ್ಯಕ್ತಿಯೊಬ್ಬರು ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದಾರೆ. ಸದಾ ಮದ್ಯದ ಅಮಲಲ್ಲೇ ಇದ್ದ ಆ ವ್ಯಕ್ತಿ ಈಗ ದುಶ್ಚಟದಿಂದ ದೂರಾಗಿ ಸಾಧನೆಯ ಪಥದಲ್ಲಿ ಬಹುದೂರ ಸಾಗಿ ಯಶಸ್ಸು ಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಈ ವ್ಯಕ್ತಿ ಶುರು ಮಾಡಿದ ರೊಟ್ಟಿ ತಯಾರಿಕಾ ಘಟಕದಲ್ಲಿ ಉತ್ಪಾದನೆಯಾದ ರೊಟ್ಟಿ ರಾಜ್ಯದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಯಲ್ಲೂ ಪಾರುಪತ್ಯ ಸಾರುವಷ್ಟು ಎತ್ತರಕ್ಕೆ ಬೆಳೆದಿದೆ.
ಇದು ಕಡಬ ಸಮೀಪದ ಕೋಡಿಂಬಾಳ ಗ್ರಾಮದ ದೇರೋಡಿ ನಿವಾಸಿ ರಾಮಚಂದ್ರ ಗೌಡ ಯಶೋಗಾಥೆಯ ಕಥೆ. ಒಂದು ಕಾಲದಲ್ಲಿ ಮದ್ಯ ಸೇವನೆಯ ಚಟದಿಂದಾಗಿ ಯಾರಿಗೂ ಬೇಡವಾಗಿದ್ದ ರಾಮಚಂದ್ರ ಗೌಡ ಈಗ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿರುವುದು ಇವರ ಪರಿಶ್ರಮ, ದಿಟ್ಟ ನಿರ್ಧಾರದ ಫಲವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆಯುವ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಹೊಸ ಮನುಷ್ಯನಾಗಿ ಹೊರಬಂದು ಹೊಸ ಬದುಕು ಪ್ರಾರಂಭಿಸಿದ ಗೌಡರು ಇಂದು ಒರ್ವ ಯಶಸ್ವಿ ಉದ್ಯಮಿಯಾಗಿ ಬದಲಾಗಿದ್ದಾರೆ. ಯೌವನದಿಂದಲೇ ಕುಡಿತದ ಚಟ ಹೊಂದಿದ್ದ ರಾಮಚಂದ್ರ ಗೌಡರು ಮದುವೆಯಾದ ಬಳಿಕ ವಿಪರೀತ ಕುಡಿತವನ್ನು ಮುಂದುವರಿಸಿದರು. ಈ ನಡುವೆ ತನ್ನ ಸ್ವಂತ ಮನೆಯನ್ನು ಬಿಟ್ಟು ಪತ್ನಿಯ ಮನೆಯಲ್ಲೇ ಉಳಿಯಬೇಕಾದ ಅನಿವಾರ್ಯತೆ ಇವರದ್ದಾಗಿತ್ತು. ಈ ನಡುವೆ ಕುಡಿತದ ಚಟವಿರುವವರನ್ನು ಸಾಮಾಜದ ಮುಖ್ಯವಾಹಿನಿಗೆ ತರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರಕ್ಕೆ ಬಲವಂತವಾಗಿ ಸೇರ್ಪಡೆಗೊಂಡಿದ್ದರು. ಶಿಬಿರ ಮುಗಿಯುತ್ತಿದ್ದಂತೆ ಸಾಮಾಜಿಕ ಜೀವನದ ಹೊಸ ಪ್ರಪಂಚಕ್ಕೆ ಕಾಲಿಟ್ಟರು. ಬರಿಗೈಯಲ್ಲೇ ಕಡಬಕ್ಕೆ ಬಂದ ಗೌಡರು ದೇರೋಡಿಯಲ್ಲಿ ಬಾಡಿಗೆ ಮನೆ ಪಡೆದು ಗ್ರಾಮಾಭಿವೃದ್ಧಿ ಯೋಜನೆಯಿಂದ 30 ಸಾವಿರ ರೂ. ಸಾಲ ಪಡೆದು, ಇನ್ಯಾರಿಂದಲೋ ಐದು ಸಾವಿರ ಸಾಲ ಪಡೆದು ಅಲ್ಲೇ ಅಕ್ಕಿರೊಟ್ಟಿ ತಯಾರಿಸಲು ಪ್ರಾರಂಭಿಸಿದರು. ಸುಮಾರು ಹನ್ನೊಂದು ವರ್ಷಗಳಿಂದ ಈಗ ಕಡಬದಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದೆ.
ಇದನ್ನು ಓದಿ: 25 ಲಕ್ಷ ಕೋವಿಡ್ ವ್ಯಾಕ್ಸಿನ್ ಸಂಗ್ರಹಣೆಗೆ ಯಾದಗಿರಿ ಜಿಲ್ಲಾಡಳಿತ ಸಿದ್ದತೆ; ಮತಗಟ್ಟೆ ಕೇಂದ್ರಗಳಲ್ಲಿ ಲಸಿಕೆ ವಿತರಣೆ
ರಾಜ್ಯ ಸೇರಿದಂತೆ ವಿದೇಶೀ ಮಾರುಕಟ್ಟೆಯನ್ನೂ ಇದೀಗ ಇವರ ರೊಟ್ಟಿ ಪ್ರವೇಶಿಸಿದ್ದು, ಗುಣಮಟ್ಟದಿಂದಾಗಿ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಎರಡು ತಿಂಗಳಿಗೊಮ್ಮೆ ಬಹರೈನ್ ಗೆ ಆರರಿಂದ ಏಳು ಕ್ವಿಂಟಾಲ್ ರೊಟ್ಟಿ ರಫ್ತು ಮಾಡುವ ಇವರಿಗೆ ಇತರ ಕಡೆಗಳಿಂದಲೇ ಹೆಚ್ಚಿನ ಬೇಡಿಕೆ ಬರುತ್ತಿದೆ. ಇವರ ಉದ್ಯಮ ಲಾಭದಾಯಕವಾಗಿ ಮುಂದುವರಿಯುತ್ತಿರುವುದರಿಂದ ಗೌಡರು ಆರ್ಥಿಕವಾಗಿ ಸಬಲರಾಗಿರುವುದಲ್ಲದೆ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಕಡಬ ಸಮೀಪದ ಕಳಾರ ಎಂಬಲ್ಲಿ ಮನೆ ಇರುವ ಜಾಗವೊಂದನ್ನು ಸುಮಾರು 20 ಲಕ್ಷ ರೂ.ಗೆ ಖರೀದಿದ್ದಾರೆ. ಇನ್ನು ಮುಂದೆ ಅಲ್ಲೇ ರೊಟ್ಟಿ ಘಟಕವನ್ನು ಆಧುನಿಕ ರೀತಿಯಲ್ಲಿ ಸ್ವಲ್ಪ ದೊಡ್ಡ ಮಟ್ಟದಲ್ಲಿ ಮುಂದುವರಿಸಲು ನಿರ್ಧರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ