ಪುತ್ತೂರು; ನಿರುಪಯುಕ್ತ ಎಂದು ಮೂಲೆಗೆ ಎಸೆದು ಬಿಡುವ ವಸ್ತುಗಳಿಗೆ ಪರಿಸರ ಸ್ನೇಹಿಯಾಗಿ ಜೀವ ತುಂಬುತ್ತಿರುವ ಪ್ರಯತ್ನವೊಂದು ದಕ್ಷಿಣಕನ್ನಡ ಜಿಲ್ಲೆಯ ಬೆಳ್ಳಾರೆಯ ಪೆರುವಾಜೆ ಗ್ರಾಮದ ಕೋಡಿಬೈಲು ನಲಂದದ ಅಂಗಳದಲ್ಲಿ ಯಶಸ್ವಿಯಾಗಿದೆ. ಪೆರುವಾಜೆ ಗ್ರಾಮದ ನಲಂದದ ಪ್ರಗತಿಪರ ಕೃಷಿಕ ರಾಮಚಂದ್ರ ಕೊಡಿಬೈಲು ಕೊರೋನಾ ಕಾಲಘಟ್ಟದಲ್ಲಿ ನಡೆದ ಪ್ರಯೋಗಗಳು ಇದೀಗ ಮೊಳಕೆಯೊಡೆದು ಮೂರ್ತರೂಪ ಕಂಡಿದೆ. ಉಪಯೋಗ ರಹಿತ ಎಂದು ತಿರಸ್ಕರಿಸುವ ವಸ್ತುಗಳು ಹೊಸ ರೂಪದಲ್ಲಿ ಹೂದೋಟದ ಅಂದವನ್ನು ಇಮ್ಮಡಿಗೊಳಿಸಿದೆ.
ವಾಹನಗಳ ಟಯರ್ ಬಳಕೆಗೆ ಯೋಗ್ಯವಲ್ಲ ಎಂದಾಕ್ಷಣ ಅವುಗಳನ್ನು ಎಲ್ಲೆಂದರಲ್ಲಿ ಎಸೆದು ಬಿಡುವುದು, ಬೆಂಕಿಯಲ್ಲಿ ಸುಡುವುದು, ಗುಜುರಿಗೆ ಕೊಡುವುದು ಮಾಮೂಲಿ ಸಂಗತಿ. ಕೊನೆಗೆ ಇವು ಪರಿಸರ ಸ್ವಚ್ಛತೆಗೆ ಸವಾಲಾಗಿ, ರೋಗರುಜಿನ ಹರಡುವ ತಾಣವಾಗಿ ಬದಲಾಗುತ್ತದೆ. ಇದನ್ನು ಮನಗಂಡು ರಾಮಚಂದ್ರ ಮತ್ತು ಅಶ್ವಿನಿ ದಂಪತಿಗಳು ಅದಕ್ಕೂಂದು ಹೊಸ ರೂಪ ಕೊಡುವ ಪ್ರಯತ್ನಕ್ಕೆ ಮುಂದಾದರು. ಯೂಟ್ಯೂಬ್‍ನಲ್ಲಿ ಹುಡುಕಾಟ ನಡೆಸಿದ ಸಂದರ್ಭ ಟಯರ್ ನಿಂದ ಹೂವಿನ ಕುಂಡ ತಯಾರಿಸುವ ಐಡಿಯಾ ಸಿಕ್ಕಿತ್ತು. ಮತ್ತೆ ತಡ ಮಾಡಲಿಲ್ಲ. ಕೊರೋನಾ ಲಾಕ್‍ಡೌನ್ ಸಂದರ್ಭವನ್ನು ಬಳಸಿಕೊಂಡು ಅದಕ್ಕೂಂದು ಮೂರ್ತ ಸ್ವರೂಪ ಕೊಟ್ಟರು. ವಾಹನದ ಟಯರ್ ಅನ್ನು ಮೇಲ್ಭಾಗದಲ್ಲಿ ಕತ್ತರಿಸಿ ಬಳಿಕ ತಿರುವಿ ಹಾಕಿ ಹೂವಿನ ಕುಂಡವಾಗಿ ಪರಿವರ್ತಿಸಲು ತಾಳ್ಮೆ, ಶ್ರಮವು ಬೇಕು. ಇದನ್ನು ರಾಮಚಂದ್ರ ಕೋಡಿಬೈಲು ಶ್ರದ್ಧೆಯಿಂದ ಮಾಡಿದ ಪರಿಣಾಮ ಟಯರ್ ಹೂವಿನ ಕುಂಡವಾಗಿ ಬದಲಾಯಿತು. ಅದರ ಸಂಖ್ಯೆಯೀಗ 40 ದಾಟಿದೆ.
ಮಣ್ಣಿನ ನೆಲವಾದರೆ ಎತ್ತರವಾಗಿ ಬೆಳೆಯುವ ಗಿಡಗಳನ್ನು ನೆಡಬಹುದು. ಇಂಟರ್‍ಲಾಕ್ ಅಳವಡಿಸಿದ ಅಂಗಳವಾದರೆ ಟಯರ್ ಅಡಿಗೆ ಗಿಡದ ಬೇರು ಇಳಿಯದಂತೆ ನೆಟ್ ಅಳವಡಿಸಬೇಕು. ಟಯರ್ ಒಳಭಾಗದಲ್ಲಿ ಬೆಳೆಯಲು ಪೂರಕವಾದ ಗಿಡ ನಾಟಿ ಮಾಡಬೇಕು. ಗೊಬ್ಬರ, ನೀರು ಹಾಕಲು ಸಾಕಷ್ಟು ಸ್ಥಳಾವಕಾಶ ಕೂಡ ಸಿಗುತ್ತದೆ. ಈ ರೀತಿಯ ಬಳಕೆಯಿಂದ ಪರಿಸರ ಸ್ವಚ್ಛತೆ ಸಾಧ್ಯವಾಗಿ ರೋಗ ರುಜಿನಗಳನ್ನು ತಡೆಯಲೂ ಸಾಧ್ಯ ಎನ್ನುತ್ತಾರೆ ರಾಮಚಂದ್ರ ಕೋಡಿಬೈಲು.
ಇದನ್ನು ಓದಿ: 2019ರ ಮಹಾರಾಷ್ಟ್ರ ಚುನಾವಣೆಗೂ ಮುನ್ನ ಸಿಎಂ ಸ್ಥಾನ ಹಂಚಿಕೆ ಬಗ್ಗೆ ಬಿಜೆಪಿ ಯಾವುದೇ ಭರವಸೆ ನೀಡಿರಲಿಲ್ಲ; ಅಮಿತ್ ಶಾ
ಟಯರ್ ನಿಂದ ತಯಾರಿಸಿದ ಕುಂಡವನ್ನು ಇನ್ನಷ್ಟು ಅಂದಗೊಳಿಸಲು ಪುಟ್ಟ ಪುಟ್ಟ ಕಲ್ಲುಗಳನ್ನು ಅಲಂಕಾರಿಕವಾಗಿ ಜೋಡಿಸಲಾಗಿದೆ. ಸುಮಾರು ಹನ್ನೆರೆಡು ವರ್ಷದ ಹಿಂದೆ ಮನೆ ಕಟ್ಟಲು ತಂದಿದ್ದ ಮರಳಿನಲ್ಲಿ ಸಿಕ್ಕಿದ ಕಲ್ಲುಗಳನ್ನು ಒಂದೆಡೆ ರಾಶಿ ಹಾಕಲಾಗಿತ್ತು. ಕೊರೋನಾ ಕಾಲಘಟ್ಟದಲ್ಲಿ ದಂಪತಿಗಳ ಮಕ್ಕಳಾದ ಅವನಿ ಮತ್ತು ಆತ್ಮೀಯ ಪೋಷಕರ ಚಟುವಟಿಕೆಗೆ ಪೂರಕವಾಗಿ ಕಲ್ಲಿಗೆ ಜೀವ ಕಳೆ ತುಂಬುವ ಪ್ರಯತ್ನ ಮಾಡಿದರು. ಒಂದೊಂದು ಕಲ್ಲಿನಿಂದ ತೊಡಗಿ ನೂರಾರು ಕಲ್ಲುಗಳು ಬಣ್ಣದಿಂದ ಕಂಗೊಳಿಸುವಂತೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ