ದಾವಣಗೆರೆ(ಜುಲೈ.17): ಆಕೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಐದು ವಿಷಯಗಳಿಗೆ ಹಾಜರಾಗಿದ್ದಳು, ಕೊನೆಯ ಪರೀಕ್ಷೆಯ ಹಿಂದಿನ ದಿನ ಸಾವನ್ನಪ್ಪಿದ್ದಳು. ಈಗ ಫಲಿತಾಂಶ ಬಂದಿದ್ದು, 5 ವಿಷಯಗಳಲ್ಲಿ ಆಕೆ ಗಳಿಸಿದ್ದು ಶೇ 93.4 ಇದು ಕ್ಯಾನ್ಸರ್ ಗೆ ಬಲಿಯಾದ ದಾವಣಗೆರೆಯ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿನಿಯ ಕರುಣಾಜನಕ ಕಥೆ.
ಈಕೆಯ ಹೆಸರು ಅನುಷಾ ಚನ್ನಗಿರಿ ತಾಲೂಕಿನ ತಾಳಿಕಟ್ಟೆಯ ಬಸವರಾಜಪ್ಪ ಮತ್ತು ಮಂಜಮ್ಮ ಎಂಬ ಕೃಷಿಕ ದಂಪತಿಯ ಮೂವರು ಹೆಣ್ಣುಮಕ್ಕಳಲ್ಲಿ ಅನುಷಾ ದೊಡ್ಡವಳು. ದಾವಣಗೆರೆಯ ಸಿದ್ದಗಂಗಾ ಕಾಲೇಜಿನ ಹಾಸ್ಟೆಲ್ ನಲ್ಲಿ ಓದತ್ತಿದ್ದಳು, ಮಾರ್ಚ್ ನಲ್ಲಿ ಪಿಯು ಪರೀಕ್ಷೆ ಎಲ್ಲರಂತೆ ಬರೆದಿದ್ದಳು. ಅಷ್ಟೊತ್ತಿಗೆ ಲಾಕ್ ಡೌನ್ ನಿಂದ ಇಂಗ್ಲಿಷ್ ಪತ್ರಿಕೆ ಮುಂದುಡಲಾಯಿತು. ಅನುಷಾ ಕೂಡಾ ತಮ್ಮ ಮನೆಗೆ ತೆರಳಿದ್ದಳು.
ಮೇ ತಿಂಗಳಿನಲ್ಲಿ ಆಕೆಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿತ್ತು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಗ ಈಕೆಗೆ ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು ಹಾಗೂ ಚಿಕಿತ್ಸೆ ಪಡೆಯುತ್ತಿದ್ದಳು. ಆದರೇ ವಿಧಿಯಾಟ ನೋಡಿ ಜೂನ್ 18 ರಂದು ಪರೀಕ್ಷೆ ಬರೆಯಲು ಸಿದ್ದಳಾಗಿದ್ದ ಅನುಷಾ ಜೂನ್ 17 ರಂದು ಪುನಃ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳು.
ಇದೀಗ ಪಿಯುಸಿ ಫಲಿತಾಂಶ ಬಂದಿದ್ದು ನೋಡಿದ್ರೆ ಎಲ್ಲರೂ ಆಶ್ಚರ್ಯ ಪಡುವ ರೀತಿ ಅಂಕಗಳು ಬಂದಿವೆ. ಗಣಿತದಲ್ಲಿ 100, ಕನ್ನಡದಲ್ಲಿ 92, ಭೌತ ಶಾಸ್ತ್ರದಲ್ಲಿ 91, ರಸಾಯನಶಾಸ್ತ್ರದಲ್ಲಿ 98, ಜೀವಶಾಸ್ತ್ರದಲ್ಲಿ 95 ಅಂಕಗಳನ್ನ ಗಳಿಸಿದ್ದಾಳೆ. ಈಕೆ ವೈದ್ಯಳಾಗುವ ಕನಸನ್ನ ಕಂಡಿದ್ದಳು ಎಂದು ಪೋಷಕರು ತಿಳಿಸಿದ್ದಾರೆ.
ಇದನ್ನೂ ಓದಿ : ಕೊರೋನಾ ನಿಯಂತ್ರಣಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಹರಸಾಹಸ ; ಸೋಂಕಿತರ ಪತ್ತೆಗೆ ಹೊಸ ಪ್ಲಾನ್
10 ನೇ ತರಗತಿಯಲ್ಲಿ 604 ಅಂಕ ಗಳಿಸಿದ್ದ ಹಿನ್ನೆಲೆ ದಾವಣಗೆರೆಯ ಕಾಲೇಜಿಗೆ ಸೇರಿಸಿದ್ದೆವು. ಮೇ 13 ಕ್ಕೆ ತಲೆನೋವು, ಹೊಟ್ಟನೋವು ಎಂದು ಹೇಳಿದ್ದಕ್ಕೆ ಶಿವಮೊಗ್ಗ ಆಸ್ಪತ್ರೆ ಹಾಗೂ ಮಣಿಪಾಲ ಆಸ್ಪತ್ರೆಗಳಲ್ಲಿ ತೋರಿಸಿದ್ದೆವು. ಶಿವಮೊಗ್ಗದಲ್ಲಿ ಕೊರೋನಾ ಟೆಸ್ಟ್ ಮಾಡಿಸಿದ್ದಾಗ ನೆಗೆಟಿವ್ ಎಂದು ಬಂದಿತ್ತು, ನಂತರ ಮಣಿಪಾಲ್ ನಲ್ಲಿ ಟೆಸ್ಟ್ ಮಾಡಿದಾಗ ಪಾಸಿಟಿವ್ ಎಂದು ಬಂತು ನಂತರ ಎರಡು ದಿನಗಳಲ್ಲಿ ನೆಗೆಟಿವ್ ಎಂದು ಬಂದಿತ್ತು ಎಂದು ಹೇಳುತ್ತಾರೆ ಅನುಷಾ ತಾಯಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ