ಹುಬ್ಬಳ್ಳಿಯಲ್ಲಿ ನಡೆದಿದ್ದ ಉದ್ಯಮಿ ಕೊಲೆಗೆ ಬಿಗ್ ಟ್ವಿಸ್ಟ್‌ : ಸುಪಾರಿ ಕೊಟ್ಟಿದ್ದ ಐವರ ಬಂಧನ

ಕೊಲೆಯಲ್ಲಿ ಪ್ರಭಾವಿ‌ ರಾಜಕಾರಣಿಗಳು ಶಾಮೀಲಾಗಿದ್ದು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಮೃತ ರಮೇಶ್ ಭಾಂಡಗೆ ಹೆಂಡತಿ ಶೋಭಾ ಭಾಂಡಗೆ ಆಗ್ರಹಿಸಿದ್ದಾರೆ.

ಕೊಲೆ ಆರೋಪಿಗಳು

ಕೊಲೆ ಆರೋಪಿಗಳು

  • Share this:
ಹುಬ್ಬಳ್ಳಿ(ಡಿಸೆಂಬರ್​. 09): ಹುಬ್ಬಳ್ಳಿಯಲ್ಲಿ ನಡೆದಿದ್ದ ಉದ್ಯಮಿಯೊಬ್ಬರ ಕೊಲೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಂತಕ ಪೊಲೀಸರಿಗೆ ಶರಣಾಗಿದ್ದ‌ರೂ ಬಚಾವಾಗಿದ್ದ, ಇನ್ನಿತರರ ಬಂಡವಾಳ ಬಯಲಿಗೆ ಬಂದಿದೆ‌. ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಐವರನ್ನು ಬಂಧಿಸಲಾಗಿದೆ. ಹಾಡಹಗಲೇ ಕೊಲೆಯಾಗಿದ್ದ ವ್ಯಕ್ತಿಯ ಸಾವಿನ ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ. ನವೆಂಬರ್ 25ರ ಬೆಳಿಗ್ಗೆ ಒಂಬತ್ತು ಗಂಟೆಗೆ ಹುಬ್ಬಳ್ಳಿಯ ದುರ್ಗದಬೈಲ್ ಬಳಿಯ ಮೈಸೂರು ಸ್ಟೋರ್‌ ಹತ್ತಿರ ಕೈಯಲ್ಲಿ ಚಾಕು ಹಿಡಿದು ವ್ಯಕ್ತಿಯೊಬ್ಬ ನುಗ್ಗಿ ಬಂದಿದ್ದ‌. ಪಕ್ಕದಲ್ಲೇ ಇರುವ ಸಲೂನ್ ಅಂಗಡಿಯಲ್ಲಿ ಹೇರ್‌ಕಟಿಂಗ್ ಮಾಡಿಸಿಕೊಂಡು ಹೊರಬಂದ ರಮೇಶ್ ಭಾಂಡಗೆ ಎಂಬಾತನ ಜೊತೆ ಜಗಳಕ್ಕೆ ಇಳಿದು. ನೋಡ ನೋಡುತ್ತಿದ್ದಂತೆ ರಮೇಶ್ ಭಾಂಡಗೆಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ. ರಮೇಶ್ ಭಾಂಡಗೆ ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿದ್ದ. ಸ್ಥಳೀಯರು ಕೂಡಲೆ ಆಟೋದಲ್ಲಿ ರಮೇಶ್‌ ಭಾಂಡಗೆಯನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ತೀವ್ರ ರಕ್ತಸ್ರಾವದಿಂದ ಬಳಲಿದ ರಮೇಶ್‌ ಭಾಂಡಗೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು.

ಕೊಲೆ ಮಾಡಿದ ದುಷ್ಕರ್ಮಿ ಮಾರನೆಯ ದಿನ ಹುಬ್ಬಳ್ಳಿ ನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ. ರಮೇಶ್ ಭಾಂಡಗೆ ತನ್ನ ಬಳಿ ಏಳು ಲಕ್ಷ ರೂಪಾಯಿ ಹಣ ಪಡೆದು ಸೈಟ್ ಕೊಡುವುದಾಗಿ ಹೇಳಿದ್ದ. ಆದರೆ, ಸೈಟ್ ಕೊಡದೆ, ಹಣವನ್ನೂ ಮರಳಿಸದೆ ವಂಚಿಸಿದ್ದ. ಹೀಗಾಗಿ ಕೊಲೆ ಮಾಡಿದೆ ಎಂದು ತಿಳಿಸಿದ್ದ. ಅಷ್ಟಕ್ಕೂ ಚಾಕು ಹಿಡಿದು ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡಿದ್ದ ಈತನ ಹೆಸರು ಇಜಾ‌ಜ್ ‌ಅಹ್ಮದ್ ಬಂಕಾಪೂರ್. ಕೊಲೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಮತ್ತು ಪ್ರತ್ಯಕ್ಷ ದರ್ಶಿಗಳಿಂದ ಮಾಹಿತಿ ಪಡೆದಿದ್ದ ಪೊಲೀಸರು ಆರೋಪಿಯ ಹೇಳಿಕೆ ದಾಖಲಿಸಿಕೊಂಡು ಜೈಲಿಗಟ್ಟಿದ್ದರು.

ರಮೇಶ್ ಭಾಂಡಗೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ. ಕಮರಿಪೇಟೆ ಲಿಕ್ಕರ್ ಕುಳವಾಗಿ ದಶಕಗಳ ಹಿಂದೆಯೇ ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿದ್ದ. ಹದಿನೈದು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಡಬಗ್ಗರಿಗೆ ದಾನಧರ್ಮ ಮಾಡುತ್ತಿದ್ದ‌. ಆರ್‌ಟಿಐ ಕಾರ್ಯಕರ್ತನಾಗಿಯೂ ಹಲವರಿಗೆ ದುಃಸ್ವಪ್ನವಾಗಿದ್ದವ. ಕೋಟ್ಯಾಧಿಪತಿ ಕೇವಲ ಏಳು ಲಕ್ಷ ರೂಪಾಯಿಗೆ ಕೊಲೆಯಾಗಲು ಸಾಧ್ಯವೇ? ಎಂಬುದು ರಮೇಶ್ ಭಾಂಡಗೆ ಕುಟುಂಬಸ್ಥರು ಮತ್ತು ಸಂಬಂಧಿಗಳ ಪ್ರಶ್ನೆಯಾಗಿತ್ತು. ಹೀಗಾಗಿ ಕೊಲೆಯ ಹಿಂದೆ ಬೇರೇನೊ ಕಾರಣ ಇದೆ ಎಂದು ಎಸ್‌ಎಸ್‌ಕೆ ಸಮಾಜದ ಪ್ರಮುಖರು ಆರೋಪಿಸಿದ್ದರು.

ಪ್ರಕರಣದಲ್ಲಿ ಪ್ರಭಾವಿಗಳು ಶಾಮೀಲಾಗಿದ್ದಾರೆ ಎಂದು ಪ್ರತಿಭಟನೆ ನಡೆಸಿದ್ದರು. ಸಮಗ್ರ ತನಿಖೆಗೆ ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ಗ್ರಹಸಚಿವರಿಗೆ ಮನವಿ ಸಲ್ಲಿಸಿದ್ದರು‌. ಇತ್ತ ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹ ಮಾಡುತ್ತಿದ್ದ ಪೊಲೀಸರಿಗೆ ಹಲವು ವಿಷಯಗಳು ಗೊತ್ತಾಗಿತ್ತು. ಇಜಾಜ್‌ಅಹ್ಮದ್ ಕಾಲ್‌ ಡಿಟೇಲ್ಸ್ ಮತ್ತು ಚಲನವಲನಗಳ ಕುರಿತು ಮಾಹಿತಿ ಸಿಕ್ಕಿತ್ತು. ಹೀಗಾಗಿ ಇಜಾಜ್‌ಅಹ್ಮದ್ ನನ್ನು ಮತ್ತೆ ಕಸ್ಟಡಿಗೆ ಪಡೆದ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಟೆಕ್ನಿಕಲ್ ಎವಿಡೆನ್ಸ್ ಮುಂದಿಟ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ಇಜಾಜ್ ‌ಅಹ್ಮದ್ ಬೆಚ್ಚಿಬೀಳಿಸುವ ವಿಚಾರ ಬಾಯ್ಬಿಟ್ಟಿದ್ದಾನೆ. ಇಪ್ಪತ್ತೈದು ಲಕ್ಷ ರೂಪಾಯಿ ಸುಪಾರಿ ಪಡೆದು ರಮೇಶ್ ಭಾಂಡಗೆಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.

ಕೂಡಲೆ ಅಲರ್ಟ್ ಆದ ಪೊಲೀಸರು ಕೊಲೆಗೆ ಸುಪಾರಿ ನೀಡಿದ್ದ ಐವರನ್ನು ಬಂಧಿಸಿದ್ದಾರೆ. ರಫೀಕ್ ಜವಾರಿ, ವಸೀಮ್ ಬಂಕಾಪೂರ್, ಶಿವಾಜಿ ಮಿಶಾಳ್, ಫಯಾಜ್‌ಅಹ್ಮದ್ ಪಲ್ಲಾನ್ ಮತ್ತು ತೌಶಿಫ್ ನರಗುಂದರನ್ನು ಬಂಧಿಸಿದ್ದಾರೆ.

ಗಬ್ಬೂರು ಟೋಲ್‌ನಾಕಾ ಬಳಿಯ ಜಮೀನಿಗೆ ಸಂಬಂಧಿಸಿದ ವಿವಾದದಲ್ಲಿ ರಮೇಶ್ ಭಾಂಡಗೆ ಜೊತೆ ಶಿವಾಜಿ ಮತ್ತು ರಫೀಕ್ ಜವಾರಿಗೆ ಜಗಳವಿತ್ತು.‌ ಇತ್ತೀಚೆಗೆ ವಿವಾದ ತಾರಕಕ್ಕೇರಿತ್ತು. ವಿವಾದಿತ ಜಾಗದಲ್ಲಿ ಕಟ್ಟಲಾಗಿದ್ದ ಫ್ಯಾಕ್ಟರಿಗಳ ವಿದ್ಯುತ್ ಸಂಪರ್ಕವನ್ನು ರಮೇಶ್ ಭಾಂಡಗೆ ಕೆಇಬಿಗೆ ದೂರು ನೀಡಿ ಕಡಿತಗೊಳಿಸಿದ್ದ. ಇದರಿಂದ ರೊಚ್ಚಿಗೆದ್ದ ಶಿವಾಜಿ ಮತ್ತು ರಫೀಕ್ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಗಿ ತನಿಖೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ನಾನು ಪಕ್ಷದಿಂದ, ಹೇಗೆ ಗೆದ್ದೇ ಅನ್ನೋದು ಬೇಕಿಲ್ಲ- ರೈತ ಪರ ಕೆಲಸ ಮಾಡಿದ್ದೇನೆ ; ಸಚಿವ ಬಿ ಸಿ ಪಾಟೀಲ್

ಕೊಲೆಯಲ್ಲಿ ಪ್ರಭಾವಿ‌ ರಾಜಕಾರಣಿಗಳು ಶಾಮೀಲಾಗಿದ್ದು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಮೃತ ರಮೇಶ್ ಭಾಂಡಗೆ ಹೆಂಡತಿ ಶೋಭಾ ಭಾಂಡಗೆ ಆಗ್ರಹಿಸಿದ್ದಾರೆ. ವ್ಯವಸ್ಥಿತ ಪಿತೂರಿ ಮಾಡಿ ನನ್ನ ಗಂಡನ ಹತ್ಯೆ ನಡೆದಿದೆ. ಕೊಲೆ ನಡೆದ ದಿನ ಕೆಲವು ಸರ್ಕಾರಿ ಅಧಿಕಾರಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಆರ್‌ಟಿಐ ಕಾಯ್ದೆಯಡಿ ಹಗರಣಗಳನ್ನು ಬಯಲಿಗೆ ತಂದಿದ್ದೆ ಇದಕ್ಕೆಲ್ಲಾ ಕಾರಣ. ಕೇವಲ‌ ಜಮೀನು ವಿವಾದದ ವಿಚಾರಕ್ಕೆ ಮಾತ್ರ ಕೊಲೆಯಾಗಿಲ್ಲಾ. ಕೊಲೆ ನಡೆಯುವ ಮೊದಲು ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದವು. ಕೊಲೆಯ ನೈಜ ಕಾರಣ ಪತ್ತೆ ಹಚ್ಚಿ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ‌‌.

ವರದಿ : ಪರಶುರಾಮ್​​​ ತಹಶೀಲ್ದಾರ್​​
Published by:G Hareeshkumar
First published: